ಲಿಂಗ ಸೂಕ್ಷ್ಮತೆ ಬಗ್ಗೆ ಮಾಧ್ಯಮ ಮಿತ್ರರೊಂದಿಗೆ ಸಂವಾದ

5:42 PM, Thursday, December 5th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

linga

ಮಂಗಳೂರು : ಶೈಕ್ಷಣಿಕವಾಗಿ ಮುಂದಿರುವ ದಕ್ಷಿಣ ಕನ್ನಡದಂತಹ ಜಿಲ್ಲೆಯಲ್ಲೇ ಲಿಂಗಾನುಪಾತದ ಪ್ರಮಾಣ ಸಾಕಷ್ಟು ಕುಸಿದಿದ್ದು, ಜನರ ಮನಸ್ಥಿತಿ ಬದಲಾದರೆ ಮಾತ್ರ ಇದು ಸುಧಾರಣೆಯಾಗಲು ಸಾಧ್ಯ ಎಂದು ತಜ್ಞರು ಅಭಿಪ್ರಾಯಪಟ್ಟರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬೇಟಿ ಪಡಾವೋ-ಬೇಟಿ ಬಚಾಪೆ ಯೋಜನೆಯಡಿ ಗುರುವಾರ ಪತ್ರಿಕಾಭವನದಲ್ಲಿ ಪತ್ರಕರ್ತರಿಗೆ ಆಯೋಜಿಸಲಾದ ಲಿಂಗ ಸೂಕ್ಷ್ಮತೆ ಕಾರ್ಯಾಗಾರದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಸೆಂಟರ್ ಫಾರ್ ಡೆವಲಪ್‍ಮೆಂಟ್ ಸ್ಟಡೀಸ್ ಆ್ಯಂಡ್ ಎಜುಕೇಶನ್ ನಿರ್ದೇಶಕಿ ಮರ್ಲಿನ್ ಮಾರ್ಟಿಸ್, ಡೀಡ್ಸ್ ಕದ್ರಿ ನಿರ್ದೇಶಕಿ ರೀಟಾ ನರೋನ್ಹ, ಕಂಕನಾಡಿಯ ಪ್ರಜ್ಞಾ ಕೌನ್ಸೆಲಿಂಗ್ ನಿರ್ದೇಶಕಿ ಹಿಲ್ಡಾ ರಾಯಪ್ಪನ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

linga

2019ನೇ ಸಾಲಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಕಿ ಅಂಶ ಪ್ರಕಾರ ಜಿಲ್ಲೆಯ ಅರ್ಧದಷ್ಟು ಗ್ರಾಮಗಳಲ್ಲಿ 0-6 ವರ್ಷ ಪ್ರಾಯದ ಹೆಣ್ಮಕ್ಕಳ ಸಂಖ್ಯೆ ಸಾಕಷ್ಟು ಕಡಿಮೆಯಿದೆ. ಬಾಳದಲ್ಲಿ 36:21, ಪಡುಪೆರಾರ ಗ್ರಾಮದಲ್ಲಿ 81:52 ಅನುಪಾತವಿದೆ. ಸರಾಸರಿ 26 ವರ್ಷಕ್ಕೆ ಮದುವೆಯಾಗುತ್ತಿದ್ದ ಹೆಣ್ಣಕ್ಕಳಿಗೆ ಇಂದು 21-22 ವರ್ಷದಲ್ಲಿ ಮದುವೆ ಮಾಡಲಾಗುತ್ತಿದೆ. ಇದು ಶಿಕ್ಷಣ, ಜೀವನದ ಮೇಲೆ ಪರಿಣಾಮ ಬೀಳುತ್ತಿದೆ. ಕೆಲವು ಗ್ರಾಮಗಳಲ್ಲಿ ಹೆಣ್ಮಕ್ಕಳೇ ಹುಟ್ಟುತ್ತಿಲ್ಲ ಎನ್ನುವುದೂ ಅಧ್ಯಯನ ಭೇಟಿಯ ವೇಳೆ ತಿಳಿದು ಬಂದಿದೆ. ಜನರು ಆರ್ಥಿಕವಾಗಿ ಅಭಿವೃದ್ಧಿಯಾಗುತ್ತಿರುವುದೂ ಲಿಂಗಾನುಪಾತ ಕಡಿಮೆಯಾಗಲು ಒಂದು ಕಾರಣ ಎಂದು ಮರ್ಲಿನ್ ಮಾರ್ಟಿಸ್ ಮತ್ತು ರೀಟಾ ನರೋನ್ಹ ಅಭಿಪ್ರಾಯಪಟ್ಟರು.

ಪ್ರಜ್ಞಾ ಕೌನ್ಸೆಲಿಂಗ್ ನಿರ್ದೇಶಕಿ ಹಿಲ್ಡಾ ರಾಯಪ್ಪನ್, ಜನರು ತಮ್ಮ ಯೋಚನೆಗಳನ್ನ ಬದಲಾಯಿಸಬೇಕು. ಈ ವಿಚಾರದಲ್ಲಿ ಕೇವಲ ಮಹಿಳೆಯರ ಜತೆ ಮಾತ್ರ ಸಮಾಲೋಚನೆ ಮಾಡುವುದು ಸರಿಯಲ್ಲ, ಪುರಷರನ್ನೊಳಗೊಂಡು ಸಮಾಲೋಚನೆ ನಡೆಸಬೇಕು. ಇಂದು 4 ಗೋಡೆಗಳ ನಡುವೆ ಮಹಿಳೆಯವ ಮೇಲೆ ನಡೆಯುವ ಹಿಂಸೆ ಜೋರಾಗಿದ್ದು, ಇವೆಲ್ಲ ಕಡಿಮೆಯಾಗದ ಹೊರತು ಲಿಂಗಾನುಪಾತ ಸಹಸ ಸ್ಥಿತಿಗೆ ಬರುವುದು ಕಷ್ಟ. ಅಬಾರ್ಷನ್ ವಿಚಾರದಲ್ಲಿ ವೈದ್ಯರೂ ಗಟ್ಟಿ ನಿಲುವು ತಾಳಬೇಕಾಗಿದೆ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಉಪಸ್ಥಿತರಿದ್ದರು. ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಖಾದರ್ ಶಾ ಸ್ವಾಗತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ವಂದಿಸಿದರು. ಪತ್ರಕರ್ತ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು.

ತಾರತಮ್ಯ ಸಲ್ಲದು : ಮಕ್ಕಳು ಬೆಳೆಸುವಾಗಲೂ ತಾರತಮ್ಯ ಮಾಡಲಾಗುತ್ತದೆ. ಗಂಡು ಮಗುವಿಗೆ ಹೆಚ್ಚಿನ ಸ್ವಾತಂತ್ರೃ ನೀಡಿ ಹೆಣ್ಣಿಗೆ ತನ್ನನ್ನು ತಾನು ರಕ್ಷಿಸುವ ಕುರಿತೂ ಹೇಳಿಕೊಡಲು ಮುಂದಾಗುವುದಿಲ್ಲ. ಇದರಿಂದಾಗಿಯೇ ಮನೆಯವರು, ಕುಟುಂಬಸ್ಥರಿಂದಲೇ ಹೆಣ್ಣು ಶೋಷಣೆಗೆ ಒಳಗಾಗುತ್ತಾಳೆ. ಲಿಂಗ ಅಸಮಾನತೆಯ ನೇರ ಪರಿಣಾಮ ಬೀಳುವುದೇ ಪುರುಷನ ಮೇಲೆ. ಜಿಲ್ಲೆಯಲ್ಲಿ ನಡೆಯುವ ಆತ್ಮಹತ್ಯೆಗಳಲ್ಲಿ ಹೆಣ್ಮಕ್ಕಳಿಗಿಂತ ಎರಡೂವರೆ ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಂಕಿ ಅಂಶದಿಂದ ತಿಳಿದು ಬರುತ್ತದೆ ಮರ್ಲಿನ್ ಮಾರ್ಟಿಸ್ ಹೇಳಿದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English