ಮಡಿಕೇರಿ : ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ರಾಷ್ಟ್ರೀಯ ಪೌರತ್ವ ನೋಂದವಣಿ ಮಸೂದೆಯು ಅನಗತ್ಯ, ದುರುದ್ದೇಶಪೂರಿತ ಮತ್ತು ಮುಸ್ಲಿಂ ಸಮಾಜವನ್ನು ನೇರವಾಗಿ ಆಕ್ರಮಿಸುವ ಸಂವಿಧಾನ ವಿರೋಧಿ ನಡೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಈಗಾಗಲೇ ಅಸ್ಸಾಂನಲ್ಲಿ 1300 ಕೋಟಿ ರೂಪಾಯಿ ಖರ್ಚುಮಾಡಿ ಪೌರತ್ವ ನೋಂದಣಿ ಯೋಜನೆ ಜಾರಿ ಮಾಡಿದ್ದರಿಂದ 19 ಲಕ್ಷ ಮಂದಿ ಅತಂತ್ರರಾಗಿದ್ದು, ಇವರನ್ನು ಏನು ಮಾಡಬೇಕೆಂಬ ತೀರ್ಮಾನಕ್ಕೆ ಬರಲು ಈವರೆಗೂ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ್ದಾರೆ. ಅಸ್ಸಾಂ ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರವೇ ಎನ್‌ಆರ್‌ಸಿ ಪಟ್ಟಿ ಸರಿಯಿಲ್ಲವೆಂದು ತಿರಸ್ಕರಿಸಿದ್ದರೂ, ಬಾಂಗ್ಲಾದೊಂದಿಗೆ ಗಡಿ ಹೊಂದಿರುವ ಕಾರಣದಿಂದ ಅಸ್ಸಾಮಿನಲ್ಲಿ ವಲಸಿಗರಿದ್ದಾರೆ ಎಂದು ಹೇಳಿ ಎನ್‌ಆರ್‌ಸಿ ಜಾರಿ ಮಾಡಿದ ಸರಕಾರ, ಇದೀಗ ಅಂತಹ ಗಡಿಗಳನ್ನು ಹೊಂದಿಲ್ಲದ ಇತರ ರಾಜ್ಯಗಳಲ್ಲೂ ಏಕೆ ಇದನ್ನು ಹೇರುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಒಂದು ರಾಜ್ಯಕ್ಕೆ 1300 ಕೋಟಿ ವ್ಯಯಿಸಿದ ಸರ್ಕಾರ, ಇಡೀ ದೇಶಕ್ಕಾಗಿ ಎಷ್ಟು ಖರ್ಚು ಮಾಡಬೇಕಾಗುತ್ತದೆ. ಮೊದಲೇ ದೇಶವು ಆರ್ಥಿಕವಾಗಿ ಪಾತಾಳ ಮುಟ್ಟುತ್ತಿರುವ ಸಂದರ್ಭದಲ್ಲಿ ಭಾರಿ ಮೊತ್ತದ ಹಣವನ್ನು ಈ ರೀತಿ ಪೋಲು ಮಾಡುವ ಬದಲು ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಲ್ಲವೇ ಎಂದು ಅಭಿಪ್ರಾಯಪಟ್ಟಿದ್ದಾರೆ. ಸರಿಯಾದ ಜನನ, ಮರಣ ಪ್ರಮಾಣ ಪತ್ರಗಳನ್ನು ಕೂಡ ಹೊಂದಿಲ್ಲದ ಅಸಂಖ್ಯಾತ ಜನ ದೇಶದಲ್ಲಿದ್ದು, ಅವರು ಪೌರತ್ವ ಸಾಬೀತುಪಡಿಸಲು ಆಗದಿದ್ದಲ್ಲಿ ಸರಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎನ್ನುವುದು ಮೊದಲು ಸಾಬೀತಾಗಬೇಕು. ಎಲ್ಲಾ ವಲಸಿಗರ ಮೇಲೆ ಒಂದೇ ಕ್ರಮ ಕೈಗೊಳ್ಳಬೇಕು, ಇಲ್ಲಿ ಜಾತಿ, ಮತ ಆಧಾರದ ಮೇಲೆ ಪಕ್ಷಪಾತ ಧೋರಣೆ ಮಾಡಬಾರದು. ವಿವಿಧ ಧರ್ಮದ ಜನರಿಗೆ ಭದ್ರತೆಯ ಭರವಸೆ ನೀಡುವ ಸರಕಾರ ಮಸ್ಲಿಮರನ್ನು ಮಾತ್ರ ಹೊರಗಿಟ್ಟಿರುವುದು ಸಂವಿಧಾನ ವಿರೋಧಿ ಕ್ರಮವಾಗಿ ಎಂದು ಟೀಕಿಸಿದ್ದಾರೆ. ಯಾವುದೇ ಕಾರಣಕ್ಕೂ ಮಸೂದೆ ಜಾರಿಯಾಗಬಾರದು ಎಂದು ಒತ್ತಾಯಿಸಿರುವ ಅವರು, ಬಹುಮತದ ಬಲದಲ್ಲಿ ಸರಕಾರ ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದರಿಂದ ಪಕ್ಷಾತೀತವಾಗಿ ರಾಷ್ಟ್ರ ವ್ಯಾಪಿ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಗೆ ಕೇವಲ ಚುನಾವಣಾ ಬಂಡವಾಳವಾಗಿದ್ದ ಅಯೋಧ್ಯೆ ವಿವಾದದಲ್ಲಿ ಕೋರ್ಟಿನ ತೀರ್ಪನ್ನು ಮುಸ್ಲಿಮರು ಒಪ್ಪಿರುವುದರಿಂದ ನಿರಾಸೆಗೊಂಡ ಪ್ರಧಾನಿ ನರೇಂದ್ರಮೋದಿ ಹಾಗೂ ಸಚಿವ ಅಮಿತ್ ಶಾ ಜೋಡಿ ಮುಂದಿನ ಚುನಾವಣೆಯಲ್ಲಿ ಭಾವನಾತ್ಮಕ ಅಲೆಗಳನ್ನು ಮೂಡಿಸುವುದಕ್ಕಾಗಿಯೇ ಇಂತಹ ವಿವಾದದ ಹುತ್ತಕ್ಕೆ ಕೈ ಹಾಕಿದೆ. ದೇಶದ ಆರ್ಥಿಕ ಪರಿಸ್ಥಿತಿ ದಿನದಿಂದ ದಿನಕ್ಕೆ ಕುಸಿಯುತ್ತಿರುವುದರಿಂದ ಅಸಮಾಧಾನಗೊಂಡಿರುವ ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಕೇಂದ್ರ ಸರ್ಕಾರ ಇಂತಹ ವಿವಾದಾತ್ಮಾಕ ಮಸೂದೆಗಳನ್ನು ಜಾರಿಗೆ ತರುತ್ತಿದೆ ಎಂದು ಉಸ್ಮಾನ್ ಆರೋಪಿಸಿದ್ದಾರೆ.
Click this button or press Ctrl+G to toggle between Kannada and English