ನವದೆಹಲಿ : ದೇಶದಾದ್ಯಂತ ವಿವಾದಕ್ಕೆ ಈಡಾಗಿರುವ ನೂತನ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಇಂದು ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಮುಂದಾಗಿದೆ. ಈ ಮೂಲಕ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಬಹುಮತದಿಂದ ಒಪ್ಪಿಗೆ ಪಡೆದ ಮಸೂದೆ ತನ್ನ ಮೊದಲ ಕಾನೂನಾತ್ಮಕ ಸವಾಲನ್ನು ಎದುರಿಸುವಂತಾಗಿದೆ.
ಧರ್ಮ ಆಧಾರಿತ ಪೌರತ್ವವನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ 14ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಹೀಗಾಗಿ ಸಂಸತ್ನಲ್ಲಿ ಅಂಗೀಕಾರವಾಗಿರುವ ನೂತನ ಪೌರತ್ವ ತಿದ್ದುಪಡಿ ಮಸೂದೆಯನ್ನು ತಮ್ಮ ಸಂಘಟನೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.
ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ಸೇರಿದಂತೆ ನೆರೆರಾಷ್ಟ್ರಗಳಲ್ಲಿ ಧರ್ಮದ ಕಾರಣಕ್ಕೆ ಕಿರುಕುಳ ಅನುಭವಿಸುತ್ತಿರುವ ಮುಸ್ಲೀಮೇತರ ನಿರಾಶ್ರಿತರಿಗೆ ಮಾತ್ರ ಭಾರತೀಯ ಪೌರತ್ವ ನೀಡುವ ಈ ಮಸೂದೆಯನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಕಟುವಾಗಿ ಟೀಕೆಸಿವೆ.
ನೂತನ ಮಸೂದೆಯ ಕುರಿತು ಕಿಡಿಕಾರಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ, “ಇದು ಭಾರತೀಯ ಇತಿಹಾಸದ “ಕರಾಳ ದಿನ, ದೇಶದ ಬಹುತ್ವದ ಮೇಲೆ ಸಂಕುಚಿತ ಮನಸ್ಸಿನ ಮತ್ತು ಧರ್ಮಾಂದ ಶಕ್ತಿಗಳ ವಿಜಯ” ಎಂದು ಟೀಕಾಪ್ರಹಾರ ನಡೆಸಿದ್ದಾರೆ.
ಬುಧವಾರ ರಾಜ್ಯಸಭೆಯಲ್ಲಿ ಮಂಡಿಸಲಾದ “ನೂತನ ಪೌರತ್ವ ತಿದ್ದುಪಡಿ ಮಸೂದೆ” ಯ ಪರವಾಗಿ 125 ಮತಗಳು ಚಲಾವಣೆಯಾಗಿದ್ದರೆ, ಈ ಮಸೂದೆಯ ವಿರುದ್ಧವಾಗಿ 105 ಮತಗಳು ಚಲಾವಣೆಯಾಗಿದ್ದವು. ಬಿಜೆಪಿಯ ಮಿತ್ರ ಪಕ್ಷಗಳಾದ ಜನತಾದಳ (ಜೆಡಿಯು), ಶಿರೋಮಣಿ ಅಕಾಲಿ ದಳ, ಬಿಜು ಜನತಾದಳ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟ್ರ ಕಳಗಂ (ಎಐಎಡಿಎಂಕೆ) ತೆಲುಗು ದೇಶಂ ಪಾರ್ಟಿ ಮತ್ತು ವೈಎಸ್ಆರ್ ಕಾಂಗ್ರೆಸ್ ಈ ಮಸೂದೆಯನ್ನು ರಾಜ್ಯಸಭೆಯಲ್ಲಿ ಬೆಂಬಲಿಸಿದೆ. ಇದೇ ಕಾರಣಕ್ಕೆ ಮಸೂದೆ ಅಂಗೀಕಾರವಾಗಿದೆ.
ಈ ನೂತನ ಮಸೂದೆಯ ಕುರಿತು ಬುಧವಾರ ರಾಜ್ಯಸಭೆಯಲ್ಲಿ ನಡೆದ ಆರೂವರೆ ಗಂಟೆಗಳ ಚರ್ಚೆಯಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಗೃಹಖಾತೆ ಸಚಿವ ಅಮಿತ್ ಶಾ, “ನೆರೆಯ ಮೂರೂ ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪ ಸಂಖ್ಯಾತರಿಗೆ ಭಾರತೀಯ ಪೌರತ್ವ ನೀಡಲು ಈ ಮಸೂದೆ ಯತ್ನಿಸುತ್ತಿದೆ. ಆದರೆ, ಯಾರ ಪೌರತ್ವವನ್ನೂ ಕಸಿದುಕೊಳ್ಳುತ್ತಿಲ್ಲ. ಅಲ್ಲದೆ, ಈ ಮಸೂದೆ ಮುಸ್ಲಿಮರ ವಿರುದ್ಧವಾಗಿದೆ ಎಂಬ ಪ್ರತಿಪಕ್ಷದ ಆರೋಪ ಸರಿಯಲ್ಲ” ಎಂದು ತಿಳಿಸಿದ್ದರು.
ಮಸೂದೆಯ ಬಗ್ಗೆ ಆರೂವರೆ ಗಂಟೆಗಳ ಚರ್ಚೆಗೆ ಉತ್ತರಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಮೂರು ದೇಶಗಳಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಪೌರತ್ವ ನೀಡಲು ಮಸೂದೆ ಯತ್ನಿಸುತ್ತಿದೆ. ಆದರೆ, ಈ ಮಸೂದೆ ಮುಸ್ಲಿಮರ ವಿರುದ್ಧ ಇದೆ. ಮುಸ್ಲಿಮರ ಪೌರತ್ವ ಕಸಿದುಕೊಳ್ಳಲಿದೆ ಎಂಬ ವಿರೋಧ ಪಕ್ಷಗಳ ಆರೋಪ ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಅಸ್ಸಾಂ ಸೇರಿದಂತೆ ಈಶಾನ್ಯ ಭಾರತ ಈ ಮಸೂದೆಯ ವಿರುದ್ಧ ತೀವ್ರ ಹೋರಾಟಕ್ಕೆ ಮುಂದಾಗಿದೆ. ಬುಧವಾರದ ಹೋರಾಟ ಹಿಂಸಾಚಾರಕ್ಕೆ ತಿರುಗಿದ್ದು, ಗುವಾಹಟಿಯಲ್ಲಿ ಅನಿರ್ದಿಷ್ಟಾವಧಿ ಕರ್ಪ್ಯೂ ಜಾರಿ ಮಾಡಲಾಗಿದೆ. ಅಲ್ಲದೆ, ಬುಧವಾರ ಸಂಜೆ 7 ಗಂಟೆಯಿಂದ 24 ಗಂಟೆಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಕಡಿತಗೊಳಿಸಲಾಗಿದೆ.
Click this button or press Ctrl+G to toggle between Kannada and English