ನಾಗರಹೊಳೆಯಲ್ಲಿ ವನ್ಯಜೀವಿ ಕಾಯ್ದೆ ಉಲ್ಲಂಘನೆ : ನಿವೃತ್ತ ಅರಣ್ಯಾಧಿಕಾರಿ ಚಿಣ್ಣಪ್ಪ ಆರೋಪ

9:46 AM, Friday, December 13th, 2019
Share
1 Star2 Stars3 Stars4 Stars5 Stars
(5 rating, 1 votes)
Loading...

World-life

ಮಡಿಕೇರಿ : ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ತೆರಳುವ ಇಬ್ಬದಿ ಅರಣ್ಯ ಪ್ರದೇಶವನ್ನು ಜೆಸಿಬಿ ಬಳಸಿ ಸಮತಟ್ಟು ಮಾಡಲಾಗಿದೆ. ಇದು ವನ್ಯಜೀವಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನಿವೃತ್ತ ಅರಣ್ಯಾಧಿಕಾರಿ, ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ತಿಳಿಸಿದ್ದಾರೆ.

ನಾಗರಹೊಳೆ ಹಾಗೂ ಆನೆಚೌಕೂರು ವನ್ಯಜೀವಿ ವಲಯದಲ್ಲಿ ನಿಯಮಬಾಹಿರವಾಗಿ ಅಧಿಕಾರಿಗಳು ಸಫಾರಿ ಹಾಗೂ ವೀರಾಜಪೇಟೆ-ಮೈಸೂರು ಮುಖ್ಯ ರಸ್ತೆಯ ಇಬ್ಬದಿಯಲ್ಲಿ ತಲಾ 30 ಮೀಟರ್‌ವರೆಗೆ ಅರಣ್ಯವನ್ನು ಕಾರ್ಮಿಕರು ಹಾಗೂ ಜೆಸಿಬಿ ಯಂತ್ರವನ್ನು ಬಳಸಿ ಕಡಿದು ನೆಲಸಮ ಮಾಡಲಾಗುತ್ತಿದೆ.

ವನ್ಯಜೀವಿ ಕಾಯ್ದೆ ಪ್ರಕಾರ ರಾಷ್ಟ್ರೀಯ ಉದ್ಯಾನದಲ್ಲಿ ’ಫೈರ್‌ಲೇನ್’ ಹೊರತುಪಡಿಸಿದರೆ ಈಗಿನ ವಿಧಾನ ಬಳಸುವಂತಿಲ್ಲ ಎಂದು ಅವರು ಹೇಳಿದ್ದಾರೆ.
ಗೋಣಿಕೊಪ್ಪಲು ಲಯನ್ಸ್ ಪ.ಪೂ.ಕಾಲೇಜು ಆಶ್ರಯದಲ್ಲಿ ಜರುಗಿದ ವನ್ಯಜೀವಿ ಸಂರಕ್ಷಣೆ ಕುರಿತಾದ ’ಸ್ಲೈಡ್ ಶೋ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಅರಣ್ಯ ಇಲಾಖೆಯ ಕಾರ್ಯ ವೈಖರಿಗೆ ಬೇಸರ ವ್ಯಕ್ತಪಡಿಸಿದರು.

ಜಿಂಕೆಗಳು ಸೇರಿದಂತೆ ಸಸ್ಯಾಹಾರಿ ಪ್ರಾಣಿಗಳಿಗೆ ಹುಲ್ಲುಗಾವಲು ಅಗತ್ಯ. ಇದೀಗ ಜೆಸಿಬಿ ಮೂಲಕ ನೆಲ ಮಟ್ಟದ ಹಸಿರು ಹುಲ್ಲು ಹಾಗೂ ಸಸ್ಯಗಳನ್ನು ನೆಲಸಮ ಮಾಡಲಾಗುತ್ತಿದ್ದು, ಇದರಿಂದ ಪ್ರಾಣಿಗಳಿಗೆ ಮೇವಿನ ಕೊರತೆ ಉಂಟಾಗಲಿದೆ. ಈ ನಿಟ್ಟಿನಲ್ಲಿ ಹುಣಸೂರು ಅರಣ್ಯ ಸಂರಕ್ಷಣಾಧಿಕಾರಿ ವಿರುದ್ಧ ರಾಜ್ಯ ಪ್ರಧಾನ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವೈಲ್ಡ್ ಲೈಫ್ ಫಸ್ಟ್ ಮೂಲಕ ದೂರು ನೀಡುವ ಮೂಲಕ ಕಾಮಗಾರಿ ತಡೆಗಟ್ಟಲಾಗಿದೆ ಎಂದರು.

ನಾಗರಹೊಳೆಯಲ್ಲಿ ಬೆಂಗಳೂರಿನ ಕಂಪನಿಯೊಂದರ ಒಂದು ಕೋಟಿ ರೂ. ಅನುದಾನದಲ್ಲಿ ’ಚೆಕ್‌ಡ್ಯಾಮ್’ ನಿರ್ಮಾಣ ಮಾಡಲು ಹುಣಸೂರು ಅಧಿಕಾರಿಗಳು ಮುಂದಾಗಿದ್ದು, ಇದು ಕೂಡಾ ವನ್ಯಜೀವಿ ಕಾಯ್ದೆಗೆ ವಿರುದ್ಧವಾಗಿದೆ. ರಾಷ್ಟ್ರೀಯ ಉದ್ಯಾನದಲ್ಲಿ ಜೆಸಿಬಿಯಂತಹ ಕರ್ಕಶ ಸದ್ದು ಮಾಡುವ ವಾಹನ ಬಳಸಿರುವದು ಅಕ್ಷಮ್ಯ. ಇದೀಗ ನಾಗರಹೊಳೆಯಲ್ಲಿ ಪ್ರಾಣಿಗಳಿಗೆ ಕುಡಿಯಲು ಸಾಕಷ್ಟು ನೀರಿದೆ. ಬೇಸಿಗೆಯಲ್ಲಿ ಕಾಡಿಗೆ ಬೆಂಕಿ ಬೀಳುವದನ್ನು ತಡೆಗಟ್ಟಿದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುತ್ತದೆ. ಕಾಡಿಗೆ ಬೆಂಕಿ ಹಚ್ಚುವವರ ವಿರುದ್ಧ ಈವರೆಗೂ ಅರಣ್ಯ ಇಲಾಖಾಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳದಿರುವುದೇ ಬಂಡಿಪುರ, ನಾಗರಹೊಳೆ ಬೆಂಕಿ ಪ್ರಕರಣ ಅಧಿಕವಾಗಲು ಹಾಗೂ ವನ್ಯಪ್ರಾಣಿಗಳು ಅರಣ್ಯದಿಂದ ಜನ ವಸತಿಯತ್ತ, ಕಾಫಿ ತೋಟಗಳಿಗೆ ನುಸುಳಲು ಪ್ರಮುಖ ಕಾರಣ ಎಂದು ಅವರು ದೂರಿದರು.

World-life

ಕಳತ್ಮಾಡುವಿನ ಲಯನ್ಸ್ ಪ.ಪೂ.ಕಾಲೇಜು ವಿದ್ಯಾರ್ಥಿಗಳಿಗೆ ಜರುಗಿದ ಕಾರ್ಯಕ್ರಮದಲ್ಲಿ ಇರುವೆಯಿಂದ ಆನೆಯವರೆಗೂ ಮರ,ಗಿಡ, ಕಾಡು ಬೆಳೆಯಲು ಇರುವ ಪೂರಕ ಸಂಬಂಧಗಳ ಕುರಿತು ಕೆ.ಎಂ.ಚಿಣ್ಣಪ್ಪ ಮಾಹಿತಿ ನೀಡಿದರು.

ಇತ್ತೀಚೆಗೆ ನಾಗರಹೊಳೆ ಪ್ರಕೃತಿ ಶಿಬಿರದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಅತ್ಯುತ್ತಮವಾಗಿ ಪ್ರಬಂಧ ಮಂಡಿಸಿದ ಲಯನ್ಸ್ ಪಿ.ಯು.ಕಾಲೇಜು ವಿದ್ಯಾರ್ಥಿನಿ ವರ್ಷಿತಾಗೆ ಇದೇ ಸಂದರ್ಭ ಚಿಣ್ಣಪ್ಪ ಅವರು ’ಕಾಡಿನೊಳಗೊಂದು ಜೀವ’ ಪುಸ್ತಕವನ್ನು ಬಹುಮಾನವಾಗಿ ನೀಡಿದರು.

ಲಯನ್ಸ್ ಪ.ಪೂ.ಕಾಲೇಜು ಪ್ರಾಂಶುಪಾಲೆ ಪವಿತ್ರಾ ಚಿಣ್ಣಪ್ಪ ಅವರು ವನ್ಯಪ್ರೇಮಿ ಕೆ.ಎಂ.ಚಿಣ್ಣಪ್ಪ ಅವರ ಕಾಡು ಸಂರಕ್ಷಣೆಯ ಕಾಳಜಿ ಕುರಿತು ಪರಿಚಯಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಎ.ಬಿ.ಅಕ್ಕಮ್ಮ, ಶಿಕ್ಷಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English