ಮಂಗಳೂರು: ಸೆಪ್ಟೆಂಬರ್ 25ರ ತಡರಾತ್ರಿ ಕಡಬ ಬಳಿಯ ಕೋಡಿಂಬಾಳ ಗ್ರಾಮದ ಉಂಡಿಲದಲ್ಲಿ ನಡೆದ ಜೋಡಿಕೊಲೆ ಪ್ರಕರಣಕ್ಕೆ ಸಂಬಂದಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ತಿಳಿದುಬಂದಿದೆ.
ಸೋಮವಾರಪೇಟೆಯ ಕರ್ಕಳ್ಳಿ ನಿವಾಸಿ ಮಹಮ್ಮದ್ ರಫೀಕ್, ಪುಂಜಾಲಕಟ್ಟೆ ತಣ್ಣೀರುಪಂಥ ಗ್ರಾಮದ ಕಲ್ಲೇರಿ ನಿವಾಸಿ ಸಯೀದ್ ಎಂಬುವವರು ಆರೋಪಿಗಳಾಗಿದ್ದಾರೆ. ಮಹಮ್ಮದ್ ರಫೀಕ್ ಕೋಡಿಂಬಾಳದಲ್ಲಿಯೇ ಕೆಂಪುಕಲ್ಲಿನ ಲಾರಿಯ ಚಾಲಕನಾಗಿದ್ದು ಈತನ ಪತ್ನಿಯ ಸಂಬಂಧಿಯಾಗಿದ್ದ ಸಯೀದ್ ಈತನಿಗೆ ಪರಿಚಿತನಾಗಿದ್ದ. ಮೃತ ಥಾಮಸ್ ರವರು ತಮ್ಮ ಮನೆಯ ಆವರಣದ ಗೋಡೆ ನಿರ್ಮಿಸಲು ಸಯೀದ್ ನ ಲಾರಿಯಲ್ಲಿಯೇ ಕಲ್ಲು ತರಿಸಿದ್ದರು ಈ ಮೂಲಕ ಸಯೀದ್ ಬೇಬಿ ಥಾಮಸ್ ಗೆ ಪರಿಚಿತನಾಗಿದ್ದ, ಸಯೀದ್ ನ ಮೂಲಕ ಮಹಮ್ಮದ್ ರಫೀಕ್ ಬೇಬಿ ಥಾಮಸ್ ಗೆ ನಿಕಟನಾಗಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.
ಆರಂಭದಲ್ಲಿ ಈ ಕೊಲೆಗೆ ಸಂಬಂಧಪಟ್ಟಂತೆ ಯಾವುದೇ ಸುಳಿವು ಪೊಲೀಸರಿಗೆ ಲಭ್ಯವಾಗದಿದ್ದರು ಮೃತರ ಮೊಬೈಲ್ ಫೋನ್ ಆರೋಪಿಗಳ ಪತ್ತೆಗೆ ನೆರವಾಗಿದೆ. ಮೃತ ಬೇಬಿ ಥಾಮಸ್ ಬಳಸುತ್ತಿದ್ದ ಮೊಬೈಲ್ ಫೋನ್ ಶನಿವಾರ ಸಂತೆ ಮತ್ತು ಸೋಮವಾರ ಪೇಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ಪತ್ತೆ ಹಚ್ಚಿದ ಪೊಲೀಸರು, ಫೋನ್ ಗಳ ಮೂಲಕ ನಡೆಯುತ್ತಿದ್ದ ಸಂಭಾಷಣೆಗಳ ವಿವರಗಳನ್ನು ಪಡೆದ ಪೊಲೀಸರು ಆರೋಪಿಗಳನ್ನು ಹಿಡಿಯಲು ಸೋಮವಾರ ಪೇಟೆಗೆ ತೆರಳಿದ್ದರು. ಬಸ್ ನಿಲ್ದಾಣದ ಬಳಿ ರಫೀಕ್ ನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ನೈಜ ಮಾಹಿತಿಯನ್ನು ರಫೀಕ್ ಪೊಲೀಸರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.
ಚಿನ್ನಾಭರಣ ಹಾಗೂ ಹಣದ ಆಸೆಗಾಗಿ ಕೊಲೆ ನಡೆಸಲಾಗಿದ್ದು, ಕೃತ್ಯಕ್ಕೆ ಬಳಸಿದ ಚಾಕುಗಳನ್ನು ಕಡಬದ ಪಂಜ ರಸ್ತೆಯಲ್ಲಿರುವ ರೈಸ್ಮಿಲ್ ಬಳಿಯಿಂದ ವಶಪಡಿಸಿಕೊಂಡಿದ್ದಾರೆ ಹಾಗೂ ಅಪಹರಿಸಿದ್ದ ಚಿನ್ನಾಭರಣಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
Click this button or press Ctrl+G to toggle between Kannada and English