ಬಳ್ಳಾರಿ : ವಿಜಯನಗರ ಕ್ಷೇತ್ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಹಿನ್ನೆಲೆ ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಸಭೆಯಲ್ಲಿ ಕೈ ಕಾರ್ಯಕರ್ತರು ಆಕ್ರೋಶಗೊಂಡು ಬ್ಯಾನರ್ ಹರಿದುಹಾಕಿದ್ದಾರೆ. ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ವೇದಿಕೆಗೆ ಹಾಕಲಾಗಿದ್ದ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹಾಗೂ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಇರುವ ಬ್ಯಾನರ್ ಹರಿದು ಹಾಕಿ ತಮ್ಮ ಆಕ್ರೋಶವನ್ನ ಹೊರ ಹಾಕಿದರು.
ಸದ್ಯ ವಿಜಯನಗರ ಉಪ ಚುನಾವಣೆಯ ನಂತರ ಬಳ್ಳಾರಿ ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಎನ್ನುವಂತಾಗಿದೆ. ವಿಜಯನಗರ ಚುನಾವಣೆಯ ಸೋಲಿನ ಹೊಣೆಯನ್ನ ಚುನಾವಣೆ ಉಸ್ತುವಾರಿ ಹೊತ್ತವರೇ ಹೋರಬೇಕು. ಸೋಲಿಗೆ ಕಾರಣರಾದ ಮಾಜಿ ಸಂಸದ ಉಗ್ರಪ್ಪ ಹಾಗೂ ಬಳ್ಳಾರಿ ಜಿಲ್ಲಾಧ್ಯಕ್ಷ ಶಿವಯೋಗಿ ಬ್ಯಾನರ್ ಹರಿದು ಹಾಕಿ ಸಭೆ ನಡೆಸಿದರು. ಎಲ್ಲದಕ್ಕಿಂತ ಹೆಚ್ಚಾಗಿ ಅಭ್ಯರ್ಥಿಯಾಗಿದ್ದ ವೆಂಕಟರಾವ್ ಘೋರ್ಪಡೆಯವರೇ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನೆಲ ಕಚ್ಚುವುದಕ್ಕೆ ಪ್ರಮುಖ ಕಾರಣ ಎಂದು ಕಾರ್ಯಕರ್ತರೇ ನಾಯಕರ ವಿರುದ್ದ ಹರಿಹಾಯ್ದರು.
ನಿನ್ನೆ ಹೊಸಪೇಟೆಯ ಕಾಂಗ್ರೆಸ್ ಕಚೇರಿಯಲ್ಲಿ ಜರುಗಿದ ಪರಾಮರ್ಶೆ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಸಮ್ಮುಖದಲ್ಲಿಯೇ ಕೈ ನಾಯಕರ ವಿರುದ್ದವೇ ಕಾರ್ಯಕರ್ತರು ನೇರವಾಗಿ ಹರಿ ಹಾಯ್ದು ಆಕ್ರೋಶ ವ್ಯಕ್ತಪಡಿಸಿದರು. ವಿಜಯನಗರ ಉಪ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಚುನಾವಣೆಯಲ್ಲಿ ಸೋಲನುಭವಿಸಿದ ಕೈ ಅಭ್ಯಾರ್ಥಿ ವೆಂಕಟರಾವ್ ಘೋರ್ಪಡೆ ಕ್ಷೇತ್ರದ ಕಾರ್ಯಕರ್ತರೊಂದಿಗೆ ಸೋಲಿನ ಆತ್ಮಾವಲೋಕನ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಸೋಲನುಭವಿಸಿದ ವೆಂಕಟರಾವ್ ಘೋರ್ಪಡೆಯವರ ವಿರುದ್ದವೇ ಕಾರ್ಯಕರ್ತರು ಹರಿ ಹಾಯ್ದಿದ್ದಾರೆ.
ಕಾರಣ ಚುನಾವಣೆಗೆ ಬರುವ ಮುನ್ನ ಅಭ್ಯರ್ಥಿಗಳು ಸಂಪನ್ಮೂಲ ಕ್ರೋಡಿಕರಿಸಿಕೊಂಡು ಚುನಾವಣೆಗೆ ಇಳಿಯಬೇಕು. ಅದರ ಬದಲಾಗಿ ಘೋರ್ಪಡೆ ಯುದ್ದದ ಸಂದರ್ಭದಲ್ಲಿ ಶಸ್ತ್ರಾಭ್ಯಾಸ ಮಾಡಿದಂತಾಗಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಇನ್ನು ಘೋರ್ಪಡೆ ಅವರನ್ನು ಹುರಿದುಂಬಿಸಿ ಅವರಿಗೆ ಟಿಕೆಟ್ ಕೊಡಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನೆಲ ಕಚ್ಚುವಂತೆ ಮಾಡಿದ್ದು ಬಳ್ಳಾರಿ ಮಾಜಿ ಸಂಸದ ವಿ ಎಸ್.ಉಗ್ರಪ್ಪ ಮತ್ತು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ನ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ. ಈ ಇಬ್ಬರು ಹೈಕಮಾಂಡ್ ಗೆ ತಪ್ಪು ಸಂದೇಶವನ್ನ ರವಾನಿಸಿ ಗೆಲ್ಲುವಂತ ಅಭ್ಯರ್ಥಿಯ ಬದಲಿಗೆ ಘೋರ್ಪಡೆಯವರಿಗೆ ಟಿಕೆಟ್ ಕೊಡಿಸಿದ್ದರು.
ಇದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷ ಈ ಇಬ್ಬರ ವಿರುದ್ದ ಕೂಡಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು. ಈ ಕುರಿತು ರಾಜ್ಯ ನಾಯಕರಿಗೆ ಹೈಕಮಾಂಡ್ ದೂರು ಸಲ್ಲಿಸಲು ಅಲ್ಲಿಯ ಕೆಲ ಕೈ ನಾಯಕರು ನಿರ್ಧರಿಸಿದ್ದಾರೆ.
Click this button or press Ctrl+G to toggle between Kannada and English