ಮಂಗಳೂರು: ಸೋಮವಾರ ಮಂಗಳೂರು ಪುರಭವನದಲ್ಲಿ ನಡೆದ ಜೆಡಿಎಸ್ ನ ಸಮಾನ ಮನಸ್ಕರ ಸಮಾವೇಶದಲ್ಲಿ ಭಾಗವಹಿಸಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀ ದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿದರು.
ಜೆಡಿಎಸ್ ಕರಾವಳಿ ಜಿಲ್ಲೆಗಳಲ್ಲಿ ತನ್ನ ಖಾತೆ ತೆರೆಯಲು ಶ್ರಮಿಸುತಿದ್ದು ಇತ್ತೀಚೆಗಷ್ಟೇ ಬಿಜೆಪಿ ಪಕ್ಷದಲ್ಲಿದ್ದ ನಾಗರಾಜ ಶೆಟ್ಟಿಯವರು ಪಕ್ಷವನ್ನು ತೊರೆದು ಜೆ.ಡಿ.ಎಸ್ ಸೇರಿದ್ದರು. ಇವರ ನೇತೃತ್ವದಲ್ಲಿ ಕರಾವಳಿಯ ಇನ್ನಷ್ಟು ನಾಯಕರು ಈ ಸಮಾರಂಭದಲ್ಲಿ ಜೆ.ಡಿ.ಎಸ್ ಪಕ್ಷಕ್ಕೆ ಸೇರಿದರು. ಬಳಿಕ ಮಾತನಾಡಿದ ಎಚ್.ಡಿ. ಕುಮಾರಸ್ವಾಮಿ ಇಲ್ಲಿಯವರೆ ಈ ಭಾಗ ನಮ್ಮ ಕೈ ಹಿಡಿಯಲಿಲ್ಲ ಎಂಬ ಬೇಸರವಿತ್ತು, ಕರಾವಳಿ ಜಿಲ್ಲೆಯಲ್ಲಿ ಹೊಸ ಬದಲಾವಣೆ ಈ ಬಾರಿ ನಡೆಯಲಿದೆ ಹಾಗೂ ಕರಾವಳಿಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂಬ ಭರವಸೆ ಇದೆ ಎಂದರು.
ರಾಜ್ಯ ಸರಕಾರದ ಮೇಲೆ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ ರಾಜ್ಯದಲ್ಲಿ ಆದಾಯವಿಲ್ಲದಿದ್ದರೂ ಒಂದು ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸುವ ಮೂಲಕ ರಾಜ್ಯದ ಜನತೆಯ ಮೇಲೆ 1.16,000 ಕೋಟಿ ರೂಪಾಯಿ ಆರ್ಥಿಕ ಹೊರೆಯನ್ನು ಬಿಜೆಪಿ ಸರಕಾರ ನೀಡಿದೆ, ಕಳೆದ ನಾಲ್ಕೂವರೆ ವರ್ಷದಿಂದ ಬಿಜೆಪಿ ರಾಜ್ಯದ ಖಜಾನೆ ಲೂಟಿ ಮಾಡಿದೆ. ಬಿಜೆಪಿ ಒಡೆದು ಹೋದ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎನ್ನುವ ಭ್ರಮೆ ಕಾಂಗ್ರೆಸ್ ನಲ್ಲಿದೆ ಎಂದರು. ಅಡಕೆ ಬೆಳೆಗಾರರು, ವಿಕಲಚೇತನರ ಬಗ್ಗೆ ಸರಕಾರ ಯಾವುದೇ ಯೋಜನೆ ಹಮ್ಮಿಕೊಂಡಿಲ್ಲ ಜೆ.ಡಿ.ಎಸ್ ಅಧಿಕಾರಕ್ಕೆ ಬಂದರೆ ಪ್ರಣಾಳಿಕೆಯಲ್ಲಿ ಘೊಷಿಸಿದ ಕಾರ್ಯಕ್ರಮವನ್ನು ಒಂದು ವರ್ಷದ ಅವಧಿಯಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದರು. ಒಗ್ಗಟ್ಟಿನಿಂದ ಪಕ್ಷಕ್ಕಾಗಿ ಕೆಲಸ ಮಾಡಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆ.ಡಿ.ಎಸ್ ಇನ್ನಷ್ಟು ಬಲಿಷ್ಠವಾಗಲಿದೆ ಎಂದು ಜಿಲ್ಲಾ ನಾಯಕರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಜೆಡಿಎಸ್ ಮುಖಂಡರಾದ ಎಂ.ಸಿ ನಾಣಯ್ಯ, ಮಧು ಬಂಗಾರಪ್ಪ, ಕೆ. ಅಮರನಾಥ ಶೆಟ್ಟಿ, ಬಿ.ನಾಗರಾಜ ಶೆಟ್ಟಿ, ನಂದಿನಿ ಗೌಡ, ದೇವಿಪ್ರಸಾದ್ ಶೆಟ್ಟಿ, ವಿಟ್ಲ ಮಹಮ್ಮದ್ ಕುಂಞ, ಯು.ಆರ್ ಸಭಾಪತಿ. ಚಿತ್ತರಂಜನ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English