ಮಡಿಕೇರಿ : ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಕಾಮಗಾರಿಯಲ್ಲಿ ತ್ವರಿತಗತಿ ಮತ್ತು ಗುಣಮಟ್ಟ ಕಾಯ್ದುಕೊಳ್ಳದಿದ್ದಲ್ಲಿ ಅಂತಹ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ.
ಶಾಸಕ ಅಪ್ಪಚ್ಚು ರಂಜನ್ ಮತ್ತು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರುಗಳು ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆ ಆಲಿಸುವುದರ ಜೊತೆಗೆ ದುರವಸ್ಥೆಯಲ್ಲಿರುವ ರಸ್ತೆಗಳು, ಒಳಚರಂಡಿ, ಮಡಿಕೇರಿ ಸ್ಕ್ವೇರ್ ಯೋಜನೆಗಳನ್ನು ಪರಿಶೀಲನೆ ನಡೆಸಿದರು. ಗುಂಡಿಬಿದ್ದ ರಸ್ತೆಗಳು ಮತ್ತು ಕೆಲ ಬಡಾವಣೆಗಳಲ್ಲಿ ಉಲ್ಬಣಗೊಂಡಿರುವ ಒಳಚರಂಡಿ ಸಮಸ್ಯೆಗಳನ್ನು ವೀಕ್ಷಿಸಿದರು. ಸಾರ್ವಜನಿಕರಿಗೆ ರಸ್ತೆ, ಒಳಚರಂಡಿ, ಕುಡಿಯುವ ನೀರಿನ ಸಮಸ್ಯೆಗಳನ್ನು ಶೀಘ್ರವೇ ಪರಿಹರಿಸಬೇಕು. ಅವ್ಯವಸ್ಥೆಯಿಂದ ಕೂಡಿರುವ ಮತ್ತು ಸಾರ್ವಜನಿಕ ದೂರುಗಳಿರುವ ಕಾಮಗಾರಿಗಳನ್ನು ಖುದ್ದು ಪರಿಶೀಲನೆ ನಡೆಸಿ, ಅವುಗಳನ್ನು ದುರಸ್ಥಿಪಡಿಸುವಂತೆ ಅಪ್ಪಚ್ಚು ರಂಜನ್ ನಗರಸಭೆ ಪೌರಾಯುಕ್ತ ರಮೇಶ್‌ಗೆ ಸೂಚಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ನಗರದ ಖುದ್ದು ಭೇಟಿಯ ಮೂಲಕ ನೈಜ್ಯ ಸಮಸ್ಯೆ ಅರಿಯುವ ಪ್ರಯತ್ನ ಮಾಡಲಾಗುತ್ತಿದ್ದು, ಇದೀಗ ೨ನೇ ಬಾರಿಗೆ ನಗರ ಪ್ರದಕ್ಷಿಣೆ ಹಮ್ಮಿಕೊಳ್ಳಲಾಗಿದೆ. ನಗರದ ಸ್ಥಿತಿಗತಿಯ ಬಗ್ಗೆ ಚಿತ್ರಣ ಪಡೆದುಕೊಂಡಿದ್ದೇನೆ. ನೈಜ್ಯ ಸಮಸ್ಯೆಯನ್ನು ಸಂಬಂಧಪಟ್ಟ ಇಂಜಿನಿಯರ್‌ಗಳು ಹಾಗೂ ಗುತ್ತಿಗೆದಾರರು ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಗುಣಮಟ್ಟ ಜತೆಗೆ ತ್ವರಿತವಾಗಿ ಕೆಲಸ ನಿರ್ವಹಿಸಬೇಕು. ಗುತ್ತಿಗೆದಾರರು ಕಾಮಗಾರಿ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ನಿರ್ಧಾಕ್ಷಿಣ್ಯವಾಗಿ ಕಪ್ಪುಪಟ್ಟಿಗೆ ಸೇರಿಸಿ, ರಾಜ್ಯದಲ್ಲಿಯೂ ಕೆಲಸ ನೀಡದಂತೆ ಮಾಡಲಾಗುವುದು ಎಂದು ಅಪ್ಪಚ್ಚು ರಂಜನ್ ಎಚ್ಚರಿಸಿದರು.
ನಗರದಲ್ಲಿ ಹದಗೆಟ್ಟಿರುವ ರಸ್ತೆಗಳಿಗೆ ಯುಜಿಡಿ ಮೂಲ ಕಾರಣವಾಗಿದೆ. ರೂ.29 ಕೋಟಿಯ ಕಾಮಗಾರಿ ಪೂರ್ಣಗೊಳ್ಳಬೇಕಾಗಿದೆ. ಇದೀಗ ಪೂರ್ಣಗೊಂಡಿರುವ ಕಾಮಗಾರಿಗಳು ನಿರ್ವಹಣೆಯ ಕೊರತೆ ಎದುರಿಸುತ್ತಿದ್ದು ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಬೇಕು. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ದೇಶನ ನೀಡಲಾಗುವುದು ಎಂದರು. ನಗರದ ಹೃದಯ ಭಾಗದಲ್ಲಿ ಉದ್ದೇಶಿತ ಮಡಿಕೇರಿ ಸ್ಕ್ವೇರ್ ಯೋಜನೆ ಸ್ಥಗಿತಗೊಂಡಿದೆ. ಆಡಳಿತ ಪ್ರಕ್ರಿಯೆಗಳಿಂದ ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ 4ಜಿ ವಿನಾಯಿತಿ ನೀಡುವ ಅಥವಾ ಟೆಂಡರ್ ಬಗ್ಗೆ ನಿರ್ಧಾರ ತೆಗೆದು ಕೊಳ್ಳಲಾಗುವುದು. ಉದ್ದೇಶಿತ ಯೋಜನೆ ಸಾಕಾರಗೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಆಡಳಿತ ಯಂತ್ರ ವೇಗವಾಗಬೇಕು ಎಂದು ಅಭಿಪ್ರಾಯಪಟ್ಟರು. ಸ್ಥಳೀಯ ನಗರಸಭೆ ಆಡಳಿತ ಇಲ್ಲದೆ ಒಂದೂವರೆ ವರ್ಷ ಕಳೆದಿದ್ದು, ಅಧಿಕಾರಿಗಳ ಇಚ್ಛಾಶಕ್ತಿಯ ಕೊರತೆಯೂ ಮೇಲ್ನೋಟಕ್ಕೆ ಕಾಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಡಾವಣೆಗಳಲ್ಲಿ ಏರ್ಪಟ್ಟಿರುವ ಚರಂಡಿ ಸಮಸ್ಯೆಗೆ ಜನರು ಕೂಡ ಪರೋಕ್ಷವಾಗಿ ಕಾರಣವಾಗಿದ್ದಾರೆ. ನಿಯಮದ ಪ್ರಕಾರ ಜಾಗ ನೀಡದಿರುವುದು, ಚರಂಡಿಯಿಂದ ನೀರು ಸರಾಗವಾಗಿ ಹರಿಯದಿರುವುದು ಸಮಸ್ಯೆಗೆ ಕಾರಣವಾಗಿದೆ. ಶುಚಿತ್ವಕ್ಕೆ ಮೊದಲ ಆಧ್ಯತೆ ನೀಡಬೇಕಿದ್ದು, ಆಡಳಿತದೊಂದಿಗೆ ಜನತೆ ಕೈಜೋಡಿಸಬೇಕು ಎಂದು ಶಾಸಕ ರಂಜನ್ ಮನವಿ ಮಾಡಿದರು. ಕಾವೇರಿ ಕಲಾಕ್ಷೇತ್ರಕ್ಕೆ ಬಿಡುಗಡೆಯಾಗಿರುವ ರೂ.೧ ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭ ನಗರದ ಶ್ರೀಚೌಡೇಶ್ವರಿ ದೇವಾಲಯದ ಕಾಂಕ್ರೀಟ್ ರಸ್ತೆ ಹದಗೆಟ್ಟ ಬಗ್ಗೆ ಶಾಸಕ ರಂಜನ್ ಗುತ್ತಿಗೆದಾರರನ್ನು ಫೋನ್ ಮೂಲಕ ತರಾಟೆಗೆ ತೆಗೆದುಕೊಂಡರು. ಮಡಿಕೇರಿ ಸ್ಕ್ವೇರ್ ಯೋಜನೆಗೆ ೪ಜಿ ವಿನಾಯಿತಿ ದೊರೆತ್ತಿಲ್ಲ. ಟೆಂಡರ್ ಪ್ರಕ್ರಿಯೆಗೆ ಸೂಚಿಸಲಾಗಿದ್ದು ಸರ್ಕಾರದಿಂದ ಅನುಮೋದನೆ ದೊರೆತ್ತಿಲ್ಲ ಎಂದು ನಗರಸಭೆ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು. ನಗರ ಭೇಟಿಯ ವೇಳೆ ಅಬ್ದುಲ್ ಕಲಾಂ ಬಡಾವಣೆಯಲ್ಲಿ ಮೊಹಮ್ಮದ್ ಅಲಿ ಅವರಿಗೆ ಸೇರಿದ ತಿಂಡಿ ತಯಾರಿಕಾ ಘಟಕದಲ್ಲಿ ಶುಚಿತ್ವ ಕೊರತೆ ಕಂಡು ಬಂದ ಹಿನ್ನೆಲೆ ಶಾಸಕರು ಘಟಕ ಸ್ಥಗಿತಕ್ಕೆ ಸೂಚಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ ಸುನೀಲ್ ಸುಬ್ರಮಣಿ ಮಾತನಾಡಿ, ಆಡಳಿತ ವ್ಯವಸ್ಥೆ, ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರು ಕೂಡ ಅಭಿವೃದ್ಧಿ ಕಾರ್ಯಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು. ಚರಂಡಿ ಸಮಸ್ಯೆಗೆ ಪರೋಕ್ಷವಾಗಿ ಸಾರ್ವಜನಿಕರು ಕಾರಣರಾಗಿದ್ದಾರೆ. ಅಧಿಕಾರಿಗಳ ಲೋಪ ಕೂಡ ಇದೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಲಾಗುವುದು. ಉಸ್ತುವಾರಿ ಸಚಿವರೊಂದಿಗೆ ಅಭಿವೃದ್ಧಿ ಬಗ್ಗೆ ಸಮಾಲೋಚಿಸಲಾಗುವುದು ಎಂದು ಹೇಳಿದರು. ಚರಂಡಿ ಸಮಸ್ಯೆ ಬಗ್ಗೆ ಸಂಬಂಧಪಟ್ಟ ಅಧಿಕಾರಿ ನಾಚಪ್ಪ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು. ಜನಪರ ಹಾಗೂ ನಿಯಮಬದ್ಧವಾಗಿ ಕೆಲಸ ಮಾಡಿ ಎಂದು ಸುನೀಲ್ ಸುಬ್ರಮಣಿ ಸೂಚಿಸಿದರು.
ಈ ಸಂದರ್ಭ ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಜೈನಿ, ನಗರ ಮಂಡಲ ಅಧ್ಯಕ್ಷ ಮನು ಮಂಜುನಾಥ್, ನಗರ ಸಭೆಯ ಮಾಜೀ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ಮಾಜಿ ಸದಸ್ಯರುಗಳಾದ ಉಮೇಶ್ ಸುಬ್ರಮಣಿ, ಅರುಣ್ ಕುಮಾರ್, ಸವಿತಾ ರಾಕೇಶ್, ಅನಿತಾ ಪೂವಯ್ಯ, ಲಕ್ಷ್ಮಿ, ಮಹಿಳಾ ಮೋರ್ಚಾದ ಕನ್ನಿಕೆ, ನಗರಸಭೆ ಅಧಿಕಾರಿಗಳು, ಇಂಜಿನಿಯರ್‌ಗಳು, ನಗರ ಬಿಜೆಪಿ ಮುಖಂಡರು ಹಾಜರಿದ್ದರು.
Click this button or press Ctrl+G to toggle between Kannada and English