ಹುಣಸೂರು : ಉಪಚುನಾವಣೆಯಲ್ಲಿ ನಾನು ಸೋತಿರಬಹುದು. ಹಾಗಂತ ನಾನು ಸತ್ತಿಲ್ಲ. ರಾಜಕೀಯವಾಗಿ, ಸಾರ್ವಜನಿಕವಾಗಿ ಅಭಿವೃದ್ಧಿ ವಿಚಾರದಲ್ಲಿ ಬದುಕಿದ್ದೇನೆ ಎಂದು ಹುಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್. ವಿಶ್ವನಾಥ್ ತಿಳಿಸಿದ್ದಾರೆ.
ಸೋಲಿನ ಬಳಿಕ ಮಾತನಾಡಿದ ಅವರು, ಬಿಜೆಪಿ ಸೇರಲು ನಾನು ಹಣ ತಿಂದಿದ್ದೇನೆ ಎಂದು ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಸತ್ಯವಂತರಂತೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಹಣ ತಿಂದವನಲ್ಲ. ತಿನ್ನಿಸಿದವನು. ಯಾರ ಅನ್ನಕ್ಕೂ ಕೈ ಹಾಕಿಲ್ಲ ಎಂದು ಗುಡುಗಿದರು.
ನಾನು ಯಾರ ಅನ್ನವನ್ನು ಕಿತ್ತುಕೊಂಡಿಲ್ಲ. 85ಲಕ್ಷ ಮಕ್ಕಳಿಗೆ ಅನ್ನ ನೀಡಿದ್ದೇನೆ. ಯಶಸ್ವಿನಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಜನರಿಗೆ ಆರೋಗ್ಯ ನೀಡಿದ್ದೇನೆ. ಹುಣಸೂರನ್ನು ನಾನು ಬೇರೆ ರೀತಿ ಅಭಿವೃದ್ಧಿ ಮಾಡಬೇಕು. ನನಗೆ ದೊಡ್ಡ ದೂರದರ್ಶಿತ್ವ ಇದೆ. ಸೋತರು ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ ಎಂದರು.
ಟಿಪ್ಪು ಜಯಂತಿ ವಿಚಾರದಲ್ಲಿ ಈ ಹಿಂದೆ ಕ್ಷೇತ್ರದಲ್ಲಿ ಅನಾವಶ್ಯಕವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಅವರ ವಿರುದ್ಧ ದಾಖಲಾಗಿರುವ ಪ್ರಕರಣ ಹಿಂಪಡೆಯಲು ಸರ್ಕಾರ ಮುಂದಾಗಿದೆ.
ಅನರ್ಹ ಎಂದು ಘೋಷಿಸಿದವರಿಗೆ ಜನ ಸರಿಯಾಗಿ ಉತ್ತರ ಕೊಟ್ಟರು. ಕಪಟ ನಾಟಕದ ಸಮ್ಮಿಶ್ರ ಸರ್ಕಾರ ಪತನವಾಯಿತು. ಅವರ ನಾಟಕಕ್ಕೆ ಜನರು ಉಪಚುನಾವಣೆಯಲ್ಲಿ ಸರಿಯಾಗಿ ಉತ್ತರ ನೀಡಿದ್ದಾರೆ.
Click this button or press Ctrl+G to toggle between Kannada and English