ನವದೆಹಲಿ : ದೇಶದ ಹಲವೆಡೆ ಉಗ್ರ ಪ್ರತಿಭಟನೆಗೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಜಾಮಾ ಮಸೀದಿಯ ಶಾಹಿ ಇಮಾಮರು ಪ್ರತಿಕ್ರಿಯಿಸಿದ್ಧಾರೆ. ಪೌರತ್ವ ಕಾಯ್ದೆಯಲ್ಲಿ ಭಾರತೀಯ ಮುಸ್ಲಿಮರಿಗೆ ಧಕ್ಕೆ ಆಗುವಂಥದ್ದೇನಿಲ್ಲ. ಇಂಥ ಸಂದರ್ಭದಲ್ಲಿ ಜನರು ಭಾವಾವೇಶಕ್ಕೆ ಒಳಗಾಗದೇ ಸಂಯಮ ಕಾಯ್ದುಕೊಳ್ಳಬೇಕೆಂದು ಪ್ರತಿಭಟನಾನಿರತ ಮುಸ್ಲಿಮ್ ಬಾಂಧವರಿಗೆ ಶಾಹಿ ಇಮಾಮ್ ಸಯದ್ ಅಹ್ಮದ್ ಬುಖಾರಿ ಕರೆ ನೀಡಿದ್ದಾರೆ.
“ಪೌರತ್ವ ತಿದ್ದುಪಡಿ ಕಾಯ್ದೆಯ ಪ್ರಕಾರ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ನಾಡುಗಳಿಂದ ಬರುವ ಮುಸ್ಲಿಮ್ ವಲಸಿಗರಿಗೆ ಭಾರತೀಯ ಪೌರತ್ವ ಸಿಗುವುದಿಲ್ಲ. ಆದರೆ, ಭಾರತದಲ್ಲಿ ವಾಸಿಸುತ್ತಿರುವ ಮುಸ್ಲಿಮರಿಗೂ ಇದಕ್ಕೂ ಸಂಬಂಧವಿಲ್ಲ” ಎಂದು ದಿಲ್ಲಿಯ ಜಾಮಾ ಮಸೀದಿ ಶಾಹಿ ಇಮಾಮರು ಅಭಿಪ್ರಾಯಪಟ್ಟಿದ್ದಾರೆ.
ಮುಸ್ಲಿಮರ ಕಳವಳಕ್ಕೆ ಕಾರಣವಾಗಿರುವ ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ಆರ್ಸಿ) ಬಗ್ಗೆಯೂ ಅವರು ಪ್ರತಿಕ್ರಿಯಿಸಿದ್ಧಾರೆ. “ಪೌರತ್ವ ತಿದ್ದುಪಡಿ ಕಾಯ್ದೆಗೂ ರಾಷ್ಟ್ರೀಯ ಪೌರತ್ವ ನೊಂದಣಿಗೂ ವ್ಯತ್ಯಾಸವಿದೆ. ಪೌರತ್ವ ಕಾಯ್ದೆಯು ಕಾನೂನಾಗಿರುತ್ತದೆ. ಆದರೆ, ಎನ್ಆರ್ಸಿಯನ್ನು ಸದ್ಯಕ್ಕೆ ಘೋಷಿಸಲಾಗಿದೆಯೇ ಹೊರತು ಅದು ಇನ್ನೂ ಕಾನೂನಾಗಿಲ್ಲ” ಎಂದು ಸಯದ್ ಬುಖಾರಿ ಹೇಳಿದ್ಧಾರೆ.
ಕಳೆದ ವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆ ಪಡೆದಿರುವ ಪೌರತ್ವ ತಿದ್ದುಪಡಿ ಮಸೂದೆಯ ಪ್ರಕಾರ ಆಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ದೇಶಗಳಿಂದ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿರುವ ಅಲ್ಲಿಯ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ಹೊಂದಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ, ಈ ಕಾಯ್ದೆಯಲ್ಲಿ ಮುಸ್ಲಿಮ್ ವಲಸಿಗರನ್ನು ಕೈಬಿಡಲಾಗಿದೆ. ಮುಸ್ಲಿಮ್ ಸಮುದಾಯದವರನ್ನು ಪರೋಕ್ಷವಾಗಿ ಗುರಿಯಾಗಿಸಲಾಗುತ್ತಿದೆ ಎಂಬುದು ಪ್ರತಿಭಟನಾಕಾರರ ಪ್ರಮುಖ ಆಕ್ಷೇಪವಾಗಿದೆ.
ಇದೇ ವೇಳೆ, ಪೌರತ್ವ ಕಾಯ್ದೆಯನ್ನು ಕೇಂದ್ರ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿದೆ. ಕಾಯ್ದೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಅದರ ಜಾರಿ ನಿಶ್ಚಿತ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನಿನ್ನೆ ಬಹಳ ಸ್ಪಷ್ಟವಾಗಿ ಹೇಳಿದ್ಧಾರೆ.
Click this button or press Ctrl+G to toggle between Kannada and English