ವಿಶಾಖಪಟ್ಟಣಂ : ಟೀಂ ಇಂಡಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಭಾರತದ ನೆಲದಲ್ಲಿ ಸಿಡಿಸಿದ್ದ ಸಿಕ್ಸರ್ ದಾಖಲೆಯನ್ನು ಹಿಟ್‍ಮ್ಯಾನ್ ರೋಹಿತ್ ಶರ್ಮಾ ಮುರಿದಿದ್ದಾರೆ.
ವಿಶಾಖಪಟ್ಟಣಂನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ದಾಖಲೆ ಮಾಡಿದ್ದಾರೆ. ಏಕದಿನ ಪಂದ್ಯಗಳಲ್ಲಿ ಎಂ.ಎಸ್.ಧೋನಿ ಭಾರತದ ನೆಲದಲ್ಲಿ 186 ಸಿಕ್ಸರ್ ಸಿಡಿಸಿದರೆ, ಹಿಟ್‍ಮ್ಯಾನ್ ರೋಹಿತ್ 187 ಸಿಕ್ಸರ್ ದಾಖಲೆ ಬರೆದಿದ್ದಾರೆ. ಧೋನಿ 186 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದರೆ, ರೋಹಿತ್ 116 ಇನ್ನಿಂಗ್ಸ್ ಗಳಲ್ಲಿ 187 ಸಿಕ್ಸರ್ ಸಿಡಿಸಿದ್ದಾರೆ.
ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡಿಸ್ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೊತೆಯಾಟವನ್ನು ಮುರಿಯಲು ವಿಫಲವಾಯಿತು. ತಾಳ್ಮೆಯ ಆಟ ಪ್ರರ್ದಶಿಸಿದ ಈ ಜೋಡಿಯು ಮೊದಲ ವಿಕೆಟ್ ಗೆ 222 ಎಸೆತಗಳಲ್ಲಿ 227 ರನ್‍ಗಳ ಜೊತೆಯಾಟ ನಡೆಸಿ ಭದ್ರ ಬುನಾದಿ ಹಾಕಿತು. ರೋಹಿತ್ ಶರ್ಮಾ 107 ಎಸೆತಗಳಲ್ಲಿ 28ನೇ ಶತಕ ಹೊಡೆದರು.
ರೋಹಿತ್ ಬೆನ್ನಲ್ಲೇ ಕೆ.ಎಲ್.ರಾಹುಲ್ ಕೂಡ ಶತಕ ಬಾರಿಸಿದರು. ಆದರೆ ಸ್ಫೋಟಕ ಬ್ಯಾಟಿಂಗ್‍ಗೆ ಮುಂದಾಗಿ ವಿಕೆಟ್ ಒಪ್ಪಿಸಿದರು. 104 ಎಸೆತಗಳಲ್ಲಿ ಕೆ.ಎಲ್.ರಾಹುಲ್ (8 ಬೌಂಡರಿ, 3 ಸಿಕ್ಸರ್) 102 ರನ್ ಗಳಿಸಿದರು. ಬಳಿಕ ಮೈದಾಕ್ಕಿಳಿದ ಕೊಹ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಈ ಮೂಲಕ ಕೊಹ್ಲಿ ಏಕದಿನ ಪಂದ್ಯದಲ್ಲಿ 13 ಬಾರಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಹಾಗೂ ಕೊನೆಯ ಟಿ20 ಪಂದ್ಯದಲ್ಲಿ ಮೊದಲ ಸಿಕ್ಸ್ ಸಿಡಿಸಿದ ಹಿಟ್‍ಮ್ಯಾನ್ ರೋಹಿತ್ ಶರ್ಮಾ 400 ಸಿಕ್ಸರ್ ದಾಖಲೆ ಬರೆದಿದ್ದರು. 400 ಸಿಕ್ಸರ್ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಹಾಗೂ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ರೋಹಿತ್ ಪಾತ್ರರಾಗಿದ್ದರು. ಈ ಪಟ್ಟಿಯ ಮೊದಲ ಸ್ಥಾನದಲ್ಲಿ 534 ಸಿಕ್ಸರ್ ಸಿಡಿದ ವೆಸ್ಟ್ ಇಂಡೀಸ್‍ನ ಕ್ರಿಸ್ ಗೇಲ್ ಮತ್ತು ಎರಡನೇ ಸ್ಥಾನದಲ್ಲಿ 476 ಸಿಕ್ಸರ್ ದಾಖಲಿಸಿದ ಪಾಕಿಸ್ತಾನದ ಆಲ್‍ರೌಂಡರ್ ಶಾಹೀದ್ ಆಫ್ರಿದಿ ಇದ್ದಾರೆ.
Click this button or press Ctrl+G to toggle between Kannada and English