ನವದೆಹಲಿ : ಖಾಸಗಿ ಏರ್ ಲೈನ್ಸ್ ನಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾಕೆ ಗೆಸ್ಟ್ ಹೌಸ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬುಧವಾರ ಗುರುಗ್ರಾಮ್ ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಪೈಸ್ ಜೆಟ್ ವಿಮಾನದಲ್ಲಿ ಗಗನಸಖಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಿಸ್ಥು ಸರ್ಕಾರ್ ಗುರುಗ್ರಾಮ್ ನಲ್ಲಿರುವ ಗೆಸ್ಟ್ ಹೌಸ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಈಕೆ ಪಶ್ಚಿಮಬಂಗಾಳದ ಸಿಲಿಗುರಿ ನಿವಾಸಿ ಎಂದು ವರದಿ ತಿಳಿಸಿದೆ. ಪಿಜಿ ಮಾಲೀಕ ಈಕೆ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಎಂದು ಗಗನಸಖಿ ತಂದೆ ಆರೋಪಿಸಿದ್ದಾರೆ.
ಅಲ್ಲದೇ ಪದೇ, ಪದೇ ಕಿರುಕುಳ ನೀಡುತ್ತಿದ್ದ ಪಿಜಿ ಮಾಲೀಕನ ಬಗ್ಗೆ ಭಯಗೊಂಡಿರುವುದಾಗಿಯೂ ದೂರಿದ್ದಾರೆ. ಮಂಗಳವಾರ ಮುಂಜಾನೆ 2ಗಂಟೆಗೆ ಮಗಳು ನನಗೆ ಕರೆ ಮಾಡಿ, ಪಿಜಿ ಮಾಲೀಕ ಅಮರೀಂದರ್ ಸಿಂಗ್(ಲೈಂಗಿಕ)ಕಿರುಕುಳ ನೀಡುವುದನ್ನು ಮುಂದುವರಿಸಿದ್ದಾನೆ ಎಂದು ತಿಳಿಸಿದ್ದಳು ಎಂಬುದಾಗಿ ಮಿಸ್ಥು ತಂದೆ ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಅಂದು ರಾತ್ರಿ ಪಿಜಿಗೆ ಮರಳಿದಾಗ ಸಿಂಗ್ ಬಾಯಿಗೆ ಬಂದಂತೆ ಬೈದಿದ್ದು, ನಂತರ ಹೊರಹೋಗದಂತೆ ಬಂಧನದಲ್ಲಿ ಇಟ್ಟಿರುವುದಾಗಿ ಮಗಳು ಅಳುತ್ತಾ ಕರೆ ಮಾಡಿದ್ದಳು ಎಂದು ಸಂತ್ರಸ್ತೆ ತಂದೆ ಹವಾಲು ಚಂದ್ ಸರ್ಕಾರ್ ಅಲವತ್ತುಕೊಂಡಿದ್ದಾರೆ. ಅಲ್ಲದೇ ತಾನು ಈ ಕಿರುಕುಳದಿಂದ ತಪ್ಪಿಸಿಕೊಳ್ಳಲು ಸಿಲಿಗುರಿಗೆ ವಾಪಸ್ ಬರುವುದಾಗಿ ಹೇಳಿದ್ದಳು. ಮಾತನಾಡುತ್ತಿರುವಾಗಲೇ ಮೊಬೈಲ್ ಕರೆ ಕಡಿತಗೊಂಡಿತ್ತು ಎಂದು ಎಫ್ ಐಆರ್ ನಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English