ಮಂಗಳೂರು : ಮಂಗಳೂರು ಕಮಿಷನರೆಟ್ ವ್ಯಾಪ್ತಿಯಲ್ಲಿ ರವಿವಾರ ಮಧ್ಯರಾತ್ರಿಯ ವರೆಗೆ ಕರ್ಫ್ಯೂ ಮುಂದುವರಿಸಲಾಗಿದ್ದು, ಹೆಚ್ಚುವರಿಯಾಗಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಕರ್ಫ್ಯೂ ವಿಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಶನಿವಾರವೂ ರಜೆಯನ್ನು ವಿಸ್ತರಿಸಲಾಗಿದೆ. ಮದ್ಯ ಮಾರಾಟವನ್ನೂ ನಿಷೇಧಿಸಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ಶನಿವಾರ ಮಧ್ಯಾಹ್ನ 3 ರಿಂದ 6 ರ ವರೆಗೆ ಕರ್ಫ್ಯೂ ಸಡಿಲಿಸಲಾಗಿದೆ. ವಾಹನ ಸಂಚಾರಕ್ಕೆ ಅವಕಾಶವಿದೆ, ಸಂಜೆ ಆರರಿಂದ ಮತ್ತೆ ಕರ್ಫ್ಯೂ ಮುಂದುವರಿಯಲಿದೆ.
ನಗರದ ಅಲ್ಲಲ್ಲಿ ಬ್ಯಾರಿಕೇಡ್ ಅಳವಡಿಸಿ ತಪಾಸಣೆ ನಡೆಸಲಾಗುತ್ತಿದ್ದು, ಸಂಚಾರಕ್ಕೆ ನಿರ್ಬಂಧ ವಿಧಿಸಲಾಗುತ್ತಿದೆ. ಸಿಐಡಿ ವಿಭಾಗದ ಎಡಿಜಿಪಿ ದಯಾನಂದ್ ಸಹಿತ ಬೆಂಗಳೂರಿ ನಿಂದ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಕಾನೂನು ಸುವ್ಯವಸ್ಥೆಯನ್ನು ಅವಲೋಕಿಸುತ್ತಿದ್ದಾರೆ.
ಬಂದರು ಪ್ರದೇಶದ ಅಜೀಜುದ್ದೀನ್ ರಸ್ತೆ, ನೆಲ್ಲಿಕಾಯಿ ರಸ್ತೆ, ಸ್ಟೇಟ್ ಬ್ಯಾಂಕ್, ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರದೇಶಗಳಲ್ಲಿ ಪೊಲೀಸ್ ಪಹರೆ ಬಿಗಿಗೊಳಿಸಲಾಗಿತ್ತು. ನಗರ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಿದ್ದ ರಿಂದ ಜನಜೀವನ ಸ್ತಬ್ಧಗೊಂಡಿತ್ತು. ಖಾಸಗಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಕೆಲವೇ ಕೆಲವು ಖಾಸಗಿ ವಾಹನಗಳು ಸಂಚರಿಸಿದವು.
ಕರ್ಫ್ಯೂ ಮಾಹಿತಿ ಇಲ್ಲದ ಕಾರಣ ಹೊರ ಜಿಲ್ಲೆ, ರಾಜ್ಯಗಳಿಂದ ನಗರಕ್ಕೆ ರೈಲು, ಬಸ್ ಮತ್ತು ವಿಮಾನಗಳಲ್ಲಿ ಆಗಮಿಸಿದ್ದ ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದರು.
ಮಂಗಳೂರಲ್ಲಿ ಈಗಾಗಲೇ ಇರುವ ಪೊಲೀಸ್ ಪಡೆಗೆ ಸೇರ್ಪಡೆಯಾಗಿ ನಗರ ಸಶಸ್ತ್ರ ಮೀಸಲು ಪಡೆಯ 10 ತುಕಡಿ, ಕೆಎಸ್‌ಆರ್‌ಪಿ 26 ತುಕಡಿ, ನಾಲ್ಕು ಮಂದಿ ಎಸ್‌ಪಿ, 11 ಡಿವೈಎಸ್‌ಪಿ, 10 ಮಂದಿ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಓರ್ವ ಸಬ್ ಇನ್‌ಸ್ಪೆಕ್ಟರ್ ಅವರನ್ನು ಕರೆಸಲಾಗಿದೆ.
ಜಲೀಲ್ ಮತ್ತು ನೌಶೀನ್ ಅವರ ಮೃತದೇಹಗಳ ಮರಣೋತ್ತರ ಪರೀಕ್ಷೆಯನ್ನು ನಗರದ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ನಡೆಸಿ ಮಧ್ಯಾಹ್ನ ಸುಮಾರು 3 ಗಂಟೆ ವೇಳೆಗೆ ಕುಟುಂಬದವರಿಗೆ ಹಸ್ತಾಂತರಿಸಲಾಯಿತು. ಮರಣೋತ್ತರ ಪರೀಕ್ಷೆಯ ಸಂದರ್ಭದಲ್ಲಿ ಮೃತರ ಕುಟುಂಬ ಸದಸ್ಯರಿಗೆ ಮಾತ್ರ ಶವಾಗಾರದ ಬಳಿ ಬರಲು ಅವಕಾಶ ಮಾಡಲಾಗಿತ್ತು. ಶಾಸಕ ಯು.ಟಿ. ಖಾದರ್, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಮತ್ತು ಮಾಜಿ ಶಾಸಕ ಬಿ.ಎ. ಮೊದಿನ್ ಬಾವಾ ಸ್ಥಳಕ್ಕೆ ಭೇಟಿ ನೀಡಿದರು.
ಮಂಗಳೂರಿನ ಪರಿಸ್ಥಿತಿ ಬಗ್ಗೆ ವರದಿ ಮಾಡಲು ಆಗಮಿಸಿದ್ದ ಕೇರಳದ ಕೆಲವು ಪತ್ರಕರ್ತರನ್ನು ಪೊಲೀಸರು ವಶಕ್ಕೆ ಪಡೆದ ಪ್ರಕರಣ ವಿವಾದಕ್ಕೆ ಕಾರಣವಾಗಿತ್ತು. ಅಧಿಕೃತ ಗುರುತು ಪತ್ರ ಹೊಂದಿಲ್ಲದೆ ಇದ್ದುದರಿಂದ ಪೊಲೀಸರು ಶುಕ್ರವಾರ ಬೆಳಗ್ಗೆ ವಶಕ್ಕೆ ಪಡೆದಿದ್ದರು. ಅನಂತರ ವಿಚಾರಣೆ ನಡೆಸಿ ತಲಪಾಡಿಯ ವರೆಗೆ ತನಕ ಕರೆದೊಯ್ದು ಮಂಜೇಶ್ವರ ಪೊಲೀಸರಿಗೆ ಒಪ್ಪಿಸಲಾಯಿತು.
ಈ ಪ್ರಕರಣವು ಕೇರಳದಲ್ಲಿ ಗೊಂದಲ ಸೃಷ್ಟಿಸಿದೆ. ಸಿಎಂ ಪಿಣರಾಯಿ ವಿಜಯನ್ ಅವರಿಗೂ ಮಾಹಿತಿ ಲಭಿಸಿ ಅವರು ಯಡಿಯೂರಪ್ಪನವರಿಗೆ ಪತ್ರಕರ್ತರ ಬಿಡುಗಡೆಗೆ ಮನವಿ ಮಾಡಿದ್ದರು. ಇದಕ್ಕೆ ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿದ್ದ ಯಡಿಯೂರಪ್ಪನವರು, ಗುರುತಿನ ಚೀಟಿ ಹೊಂದಿರದ ಕಾರಣಕ್ಕೆ ವಶಕ್ಕೆ ಪಡೆದಿದ್ದ ಕೆಲವು ಪತ್ರಕರ್ತರನ್ನು ಬಿಡುಗಡೆಗೊಳಿಸಿ ಕೇರಳಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಅಹಿತಕರ ಘಟನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯ ಕ್ರಮವಾಗಿ ಮಂಗಳೂರು ನಗರ ಸಹಿತ ಜಿಲ್ಲೆಯಲ್ಲಿ ಶುಕ್ರವಾರ ಇಡೀ ದಿನ ಇಂಟರ್‌ನೆಟ್ ಸೇವೆ ಸ್ಥಗಿತಗೊಂಡಿದ್ದು, ಶನಿವಾರವೂ ವ್ಯತ್ಯಯ ಮುಂದುವರಿಯಲಿದೆ. ಇದರಿಂದ ಹಲವು ಆನ್‌ಲೈನ್ ಆಧಾರಿತ ಸೇವಾ ಚಟುವಟಿಕೆಗಳು ಬಾಧಿತವಾಗಿದ್ದವು.
Click this button or press Ctrl+G to toggle between Kannada and English