ಬೆಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸುವ ವೇಳೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತೆ ಹಿಂದುತ್ವದ ಬಗ್ಗೆ ಅವಹೇಳನಾಕಾರಿ ಪೋಸ್ಟರ್ ಪ್ರದರ್ಶಿಸಿದ್ದ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ಶುಕ್ರವಾರ ಸಂಜೆ ವಿದ್ಯಾರ್ಥಿಗಳ ಗುಂಪೊಂದು ಸಿಎಎ ವಿರುದ್ಧ ಪ್ರತಿಭಟನೆ ನಡೆಸಿತ್ತು. ಆ ವೇಳೆ ಹಿಂದುತ್ವವನ್ನು ಅವಾಚ್ಯವಾಗಿ ನಿಂದಿಸುವ ಪೋಸ್ಟರ್ ಪ್ರದರ್ಶಿಸಿದ್ದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆಗಳನ್ನು ಕೂಗಿದ್ದರು. ಈ ಪೋಸ್ಟರ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿದ್ಯಾರ್ಥಿಗಳ ಕ್ರಮಕ್ಕೆ ತೀವ್ರ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಧರ್ಮದ ಅವಹೇಳನೆ ಮೂಲಕ ಜನರ ಭಾವನೆಗಳಿಗೆ ದಕ್ಕೆ ತಂದಿರುವುದಕ್ಕೆ ಸುಮಾರು ಎಂಟು ವಿದ್ಯಾರ್ಥಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಪ್ರತಿಭಟನೆ ಬಳಿಕವೂ ಅಲ್ಲಿಂದ ತೆರಳದೆ ಆಯೋಜಕರು ಮೈದಾನದಲ್ಲಿ ಅನುಮತಿ ಇಲ್ಲದೆ ಕಾರ್ಯಕ್ರಮ ನಡೆಸಿದ್ದಾರೆ. ಇದರ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲರಾದ ನೀಲಮತಿ ಬೇರೆ ದೂರು ನೀಡಿದ್ದಾರೆ. ಕಾಲೇಜಿನಲ್ಲಿ ಅಕ್ರಮ ಕೂಟ ಮಾಡಿಕೊಂಡು ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಿರುವುದಾಗಿ ಚೇತನ್ ಸಿಂಗ್ ವಿವರಿಸಿದರು.
ಕ್ರೈಸ್ಟ್ ಕಾಲೇಜ್, ಸೆಂಟ್ರಲ್ ಕಾಲೇಜ್ ಸೇರಿದಂತೆ ವಿವಿಧ ಕಾಲೇಜುಗಳ 25-30 ವಿದ್ಯಾರ್ಥಿಗಳು ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ (ಗ್ಯಾಸ್) ಸೇರಿದ್ದರು. ಈ ವೇಳೆ ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಅಲ್ಲಿಂದ ತೆರಳುವಂತೆ ಸೂಚಿಸಿದರೂ ಅದನ್ನು ವಿದ್ಯಾರ್ಥಿಗಳು ಉಲ್ಲಂಘಿಸಿದ್ದಾರೆ. ಹೀಗಾಗಿ ಸರೋವರ್, ಗೌತಮ್ ರಾಜ್, ಅಮೃತಾ, ಮಲ್ಲಿಕಾರ್ಜುನ್, ಅಮೂಲ್ಯ, ಆಂಡ್ರಿಯಾ, ರಾಜಗೋಪಾಲ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಡಿಸಿಪಿ ಚೇತನ್ ಸಿಂಗ್ ರಾಥೋರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 188 (ಸಾರ್ವಜನಿಕ ಅಧಿಕಾರಿಗಳ ಆದೇಶ ಉಲ್ಲಂಘನೆ), 153 ಎ (ಧರ್ಮ, ಜನಾಂಗ, ಭಾಷೆ ಮುಂತಾದವುಗಳ ಆಧಾರದಲ್ಲಿ ಎರಡು ಗುಂಪುಗಳ ನಡುವೆ ವೈರತ್ವ ಸೃಷ್ಟಿಸುವುದು) ಮತ್ತು 295 ಎ (ಉದ್ದೇಶಪೂರ್ವಕ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದುವರೆಗೂ ಯಾರನ್ನೂ ಬಂಧಿಸಿಲ್ಲ. ತನಿಖೆ ನಡೆಸಿದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ವಿದ್ಯಾರ್ಥಿಗಳ ಹೆಸರು ಮತ್ತು ವಿವರಗಳನ್ನು ಸಂಗ್ರಹಿಸಿದ್ದಾರೆ. ಆದರೆ ಅವರ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಪ್ರತಿಭಟನೆಯಲ್ಲಿ ಕಾಣಿಸಿಕೊಂಡಿರುವ ವಿದ್ಯಾರ್ಥಿಗಳ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಈ ಪ್ರತಿಭಟನೆಯ ಫೋಟೊ ಮತ್ತು ವಿಡಿಯೋಗಳನ್ನು ಕಳುಹಿಸಲಾಗುತ್ತದೆ. ಆಡಳಿತ ಮಂಡಳಿಯವರು ಅದರಲ್ಲಿ ಇರುವ ತಮ್ಮ ಕಾಲೇಜಿನ ವಿದ್ಯಾರ್ಥಿಗಳನ್ನು ಗುರುತಿಸಿ ಅದನ್ನು ಪೊಲೀಸರಿಗೆ ದೃಢಪಡಿಸಬೇಕು. ಬಳಿಕವೇ ವಿದ್ಯಾರ್ಥಿಗಳನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ.
ಒಂದು ವೇಳೆ ಕಾಲೇಜು ಆಡಳಿತ ಮಂಡಳಿಯವರು ತಮ್ಮ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರೂ ಅದನ್ನು ಮರೆಮಾಚಲು ಪ್ರಯತ್ನಿಸಿದರೆ ಅವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ನೀಡಿರುವ ನೋಟಿಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಪೊಲೀಸರು ತಮ್ಮ ಮೂಲಗಳಿಂದ ವಿದ್ಯಾರ್ಥಿಗಳನ್ನು ಗುರುತಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಬೇರೆ ಹೆಸರುಗಳಿಂದ ಗುರುತಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಇದರಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದ ವಿದ್ಯಾರ್ಥಿಗಳು ಬಲಿಪಶುಗಳಾಗುವ ಅಪಾಯವಿದೆ. ಈ ಕಾರಣದಿಂದ ದುಡುಕದೆ, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳನ್ನು ಗುರುತಿಸಲು ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.
Click this button or press Ctrl+G to toggle between Kannada and English