ಮಡಿಕೇರಿ : ಕೊಡಗು ಜಿಲ್ಲೆಯ ಕೆಲವು ಪ್ರವಾಸಿ ಕೇಂದ್ರಗಳು ಮತ್ತು ಹೆದ್ದಾರಿ ಬದಿಯಲ್ಲಿ ತಲೆ ಎತ್ತಿರುವ ಸ್ಪೈಸಸ್ ಮಳಿಗೆಗಳಲ್ಲಿ ನಿಯಮಬಾಹಿರವಾಗಿ ಹೋಂಮೇಡ್ ಚಾಕಲೇಟ್ ಹೆಸರಿನಲ್ಲಿ ನಕಲಿ ಚಾಕಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿದ್ದು, ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ವಿವಿಧ ಸಂಘಟನೆಗಳು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯನ್ನು ಒತ್ತಾಯಿಸಿವೆ.
ನಕಲಿ ಚಾಕಲೇಟ್ ಮತ್ತು ಆಹಾರ ಪದಾರ್ಥಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದ್ದು, ಆಹಾರ ಮಾರಾಟದ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ ಎಂದು ಮಡಿಕೇರಿ ರಕ್ಷಣಾ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ವೇದಿಕೆ ಆರೋಪಿಸಿದೆ.
ಆಹಾರ ಇಲಾಖೆಯ ಸಹಾಯಕ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ದೂರುದಾರ ಎಂ.ಎನ್.ಚಂದ್ರಮೋಹನ್, ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪ್ರವಾಸಿ ಕೇಂದ್ರಗಳಲ್ಲಿ ಹೋಂಮೇಡ್ ಹೆಸರಿನಲ್ಲಿ ನಕಲಿ ಚಾಕಲೇಟ್ ಮಾರಾಟ ದಂಧೆ ನಡೆಯುತ್ತಿದೆ. ಈ ಬಗ್ಗೆ ವಿವಿಧ ಇಲಾಖೆಗಳ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ತಯಾರಕರ ಹೆಸರು, ತಯಾರಾದ ದಿನ, ಬೆಲೆ ಇದ್ಯಾವುದನ್ನೂ ನಮೂದಿಸದೆ ಆಹಾರ ಕಾಯ್ದೆಯಡಿ ಸೂಚಿಸಿರುವ ನಿಯಮಗಳನ್ನು ಉಲ್ಲಂಘಿಸಿ ಚಾಕಲೇಟ್ ಸ್ಲ್ಯಾಬ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಆರೋಗ್ಯದ ಬಗ್ಗೆ ಯಾವುದೇ ಖಾತ್ರಿ ಇಲ್ಲದ ಈ ಚಾಕಲೇಟ್ ಸ್ಲ್ಯಾಬ್‌ಗಳು ಪ್ರವಾಸಿಗರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಚಂದ್ರಮೋಹನ್ ಗಮನ ಸೆಳೆದರು.
ಹೈದರಾಬಾದ್‌ನಿಂದ ಚಾಕಲೇಟ್ ಸ್ಲ್ಯಾಬ್‌ಗಳು ಕೊಡಗು ಜಿಲ್ಲೆಗೆ ಸರಬರಾಜಾಗುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ, ಆದರೆ ಇದೇ ಸ್ಲ್ಯಾಬ್‌ಗಳನ್ನು ಕೊಡಗಿನ ಹೋಂಮೇಡ್ ಚಾಕಲೇಟ್ ಎಂದು ಮಾರಾಟ ಮಾಡಲಾಗುತ್ತಿದೆ. ಜೊತೆಯಲ್ಲಿ ಕಳಪೆ ಗುಣಮಟ್ಟದ ವೈನ್‌ಗಳನ್ನು ಕೂಡ ಮಾರಾಟ ಮಾಡಲಾಗುತ್ತಿದ್ದು, ಕೊಡಗಿನ ಪ್ರವಾಸೋದ್ಯಮಕ್ಕೆ ಮಸಿ ಬಳಿಯಲಾಗುತ್ತಿದೆ ಎಂದು ಚಂದ್ರಮೋಹನ್ ಆರೋಪಿಸಿದರು.
ಟನ್‌ಗಟ್ಟಲೆ ತೂಕದ ದಾಸ್ತಾನುಗಳು ಅಕ್ರಮವಾಗಿ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತಕ್ಷಣ ಆಹಾರ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಇಲಾಖೆಯ ಸಹಾಯಕ ನಿರ್ದೇಶಕ ಗೌರವ್ ಕುಮಾರ್ ಶೆಟ್ಟಿ, ಜಿಲ್ಲಾಧಿಕಾರಿಗಳ ಗಮನ ಸೆಳೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಗ್ರಾಹಕರ ವೇದಿಕೆಯ ಅಧ್ಯಕ್ಷ ಎ.ಎ.ಚಂಗಪ್ಪ ಅವರು ಕೂಡ ನಿಯಮ ಬಾಹಿರ ಚಾಕಲೇಟ್ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. ಖಜಾಂಚಿ ಗಿರೀಶ್, ಮಡಿಕೇರಿ ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ, ಕಾರ್ಯದರ್ಶಿ ಅಜಿತ್ ಕೊಟ್ಟಕೇರಿಯನ, ಖಜಾಂಚಿ ಉಮೇಶ್ ಗೌಡ, ಮಹಿಳಾ ಘಟಕದ ಅಧ್ಯಕ್ಷೆ ರಶ್ಮಿ ಶೆಟ್ಟಿ, ಸದಸ್ಯೆ ಟೀನಾ, ಮಡಿಕೇರಿ ತಾಲ್ಲೂಕು ಆದಿದ್ರಾವಿಡ ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಟಿ.ರವಿ ಮತ್ತಿರರು ಈ ಸಂದರ್ಭ ಹಾಜರಿದ್ದರು.
Click this button or press Ctrl+G to toggle between Kannada and English