ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ಸದ್ಯದಲ್ಲೇ ವಿಸ್ತರಣೆಯಾಗಲಿದೆ. ಸಚಿವ ಸಂಪುಟ ವಿಸ್ತರಣೆ ಮಾಡುವಂತೆ ಸಿಎಂ ಯಡಿಯೂರಪ್ಪಗೆ ನೂತನ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಹಾಗಾಗಿ ಮುಂದಿನ ವರ್ಷ ಜನವರಿ ಮೊದಲ ವಾರದಲ್ಲೇ ಸಚಿವ ಸಂಪುಟ ಮಾಡುವ ನಿರ್ಧಾರ ಸಿಎಂ ಬಿ.ಎಸ್ ಯಡಿಯೂರಪ್ಪ ಕೈಗೊಂಡಿದ್ದಾರೆ ಎನ್ನಲಾಗಿದೆ.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಬಿಜೆಪಿ ಹೈಕಮಾಂಡ್ ಜತೆ ಚರ್ಚಿಸುವ ಸಲುವಾಗಿ ವಾರಾಂತ್ಯಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾರೊಂದಿಗೆ ಬಿ.ಎಸ್ ಯಡಿಯೂರಪ್ಪ ಈ ಬಗ್ಗೆ ಚರ್ಚಿಸಲಿದ್ದಾರೆ ಎನ್ನುತ್ತಿವೆ ಉನ್ನತ ಮೂಲಗಳು.
ನೂತನ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ತವಕದಲ್ಲಿದ್ದಾರೆ. ಸಂಪುಟ ವಿಸ್ತರಣೆ ಮಾಡಿದ ಬಿಜೆಪಿ ಮೂಲೆ ಗುಂಪಾಗಲಿದೆ. ಈಗಾಗಲೇ ಯಶವಂತಪುರ ಶಾಸಕ ಎಸ್.ಟಿ ಸೋಮಶೇಖರ್ ಸೇರಿದಂತೆ ಹಲವು ನೂತನ ಶಾಸಕರು ಮಾಧ್ಯಮದ ಮುಂದೆ ಈ ಬಗ್ಗೆ ಪರೋಕ್ಷವಾಗಿ ಅಸಮಾನ ತೋಡಿಕೊಂಡಿದ್ದಾರೆ. ಯಾವುದೇ ಭಿನ್ನಾಭಿಪ್ರಾಯ ಭುಗಿಲೇಳುವ ಮುನ್ನವೇ ಸಂಪುಟ ವಿಸ್ತರಣೆ ಮಾಡುವುದು ಒಳಿತು ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಬಿಜೆಪಿ ಹೈಕಮಾಂಡ್ಗೆ ಮನವರಿಕೆ ಮಾಡಲಿದ್ದಾರೆ ಎಂದೇಳಲಾಗುತ್ತಿದೆ.
ಇತ್ತೀಚೆಗಷ್ಟೇ ಕರ್ನಾಟಕ ವಿಧಾನಸಭಾ ಉಪಚುನಾವಣೆಯಲ್ಲಿ ಭರ್ಜರಿ ಜಯಭೇರಿ ಬಾರಿಸಿದ ನೂತನ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದರು. ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಂದ ಆಯ್ಕೆಯಾಗಿರುವ ಎಲ್ಲಾ ನೂತನ ವಿಧಾನಸಭಾ ಸದಸ್ಯರು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ವಿಧಾನಸೌಧದ ಬಾಂಕ್ವೇಟ್ ಹಾಲ್ನಲ್ಲಿ ಈ ಸಮಾರಂಭ ನಡೆದಿತ್ತು. ಈ ವೇಳೆ ರಾಜ್ಯ ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ನೂತನ ಶಾಸಕರಿಗೆ ಪ್ರಮಾಣ ವಚನ ಬೋಧಿಸಿದ್ದರು.
ಕಾಂಗ್ರೆಸ್-ಜೆಡಿಎಸ್ ತೊರೆದು ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದ ಕೆ.ಆರ್ ಪುರಂ ಕ್ಷೇತ್ರದ ಭೈರತಿ ಬಸವರಾಜ, ಯಶವಂತಪುರದ ಎಸ್.ಟಿ ಸೋಮಶೇಖರ್, ಚಿಕ್ಕಬಳ್ಳಾಪುರದ ಡಾ.ಕೆ ಸುಧಾಕರ್, ಕೆ.ಆರ್ ಪೇಟೆಯ ಕೆ.ಸಿ.ನಾರಾಯಣಗೌಡ, ಹಿರೇಕೆರೂರು ಕ್ಷೇತ್ರದ ಬಿ.ಸಿ ಪಾಟೀಲ್, ಗೋಕಾಕ್ನ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕಮಟಳ್ಳಿ, ರಾಣೇಬೆನ್ನೂರಿನ ಅರುಣ್‌ಕುಮಾರ್, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕೆ. ಗೋಪಾಲಯ್ಯ, ವಿಜಯನಗರದ ಆನಂದ್‌ಸಿಂಗ್, ಕಾಗವಾಡದ ಶ್ರೀಮಂತ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಯೇ ಇದೇ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದ ಶಿವಾಜಿನಗರದ ರಿಜ್ವನ್ ಅರ್ಶದ್, ಹುಣಸೂರು ಕ್ಷೇತ್ರದ ಎಚ್.ಪಿ ಮಂಜುನಾಥ್ ಮತ್ತು ಹೊಸಕೋಟೆಯಲ್ಲಿ ಎಂಟಿ ನಾಗರಾಜ್ ವಿರುದ್ಧವೇ ಗೆದ್ದ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಕೂಡ ಪ್ರಮಾಣ ವಚನ ತೆಗೆದುಕೊಂಡಿದ್ದರು.
ಬಿಜೆಪಿ 12 ಕ್ಷೇತ್ರಗಳಲ್ಲಿ ಗೆದ್ದು ಸರ್ಕಾರ ಭದ್ರಪಡಿಸಿಕೊಂಡಿದೆ. ಕನಿಷ್ಠ 9 ಕ್ಷೇತ್ರಗಳಲ್ಲಿ ಗೆಲುವು ಕಾಣುವ ನಿರೀಕ್ಷೆ ಇಟ್ಟುಕೊಂಡಿದ್ದ ಕಾಂಗ್ರೆಸ್ ಪಕ್ಷ ಕೇವಲ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ. ಹುಣಸೂರು ಮತ್ತು ಶಿವಾಜಿನಗರ ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಉಳಿದ ಕ್ಷೇತ್ರಗಳು ಪಕ್ಷದ ಕೈ ತಪ್ಪಿವೆ.
Click this button or press Ctrl+G to toggle between Kannada and English