ಉಡುಪಿ : ಉಸಿರಾಟದ ಸಮಸ್ಯೆಯಿಂದ ಶುಕ್ರವಾರ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿರುವ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್, ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಆರೋಗ್ಯ ಸಾಕಷ್ಟು ಸುಧಾರಿಸಿದೆ. ಪ್ರತಿ ಹಂತದಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಬೆಂಗಳೂರಿನಿಂದ ತಜ್ಞ ವೈದ್ಯರು ಬಂದಿದ್ದಾರೆ. ಏಮ್ಸ್ ವೈದ್ಯರ ಜೊತೆಗೂ ನಿರಂತರ ಸಂಪರ್ಕ ಹೊಂದಿದ್ದೇವೆ. ಕೇಂದ್ರ ಆರೋಗ್ಯ ಸಚಿವರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಸದ್ಯ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರಲು ಇನ್ನಷ್ಟು ಕಾಲಾವಕಾಶ ಬೇಕು. ಶ್ರೀಗಳಿಗೆ ವಯಸ್ಸು ಜಾಸ್ತಿ ಆಗಿರುವುದರಿಂದ ಆರೋಗ್ಯ ಸುಧಾರಣೆ ನಿಧಾನವಾಗುತ್ತಿದೆ. ಶ್ರೀಗಳಿಗೆ ಶ್ವಾಸಕೋಶದ ಸೋಂಕು ತಗುಲಿದೆ. ಶ್ರೀಗಳ ಬಗ್ಗೆ ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಸ್ವಾಮೀಜಿಯನ್ನು ಏರ್ ಲಿಫ್ಟ್ ಮಾಡಿ ಬೇರಾವುದೇ ಆಸ್ಪತ್ರೆಗೂ ಶಿಫ್ಟ್ ಮಾಡುವುದಿಲ್ಲ. ಕೆಎಂಸಿಯಲ್ಲೇ ಎಲ್ಲ ರೀತಿಯ ಸೂಕ್ತ ಚಿಕಿತ್ಸೆ ನೀಡಲು ಸೌಕರ್ಯಗಳಿವೆ. ಹೆಚ್ಚುವರಿ ವೈದ್ಯರ ಅವಶ್ಯಕತೆ ಇಲ್ಲ ಎಂದು ಡಾ. ಅವಿನಾಶ್ ಸ್ಪಷ್ಟಪಡಿಸಿದ್ದಾರೆ.
ಪೇಜಾವರ ಶ್ರೀಗಳ ಶ್ವಾಸಕೋಶಕ್ಕೆ ನ್ಯುಮೋನಿಯಾ ದಾಳಿಯಾಗಿದೆ. ಈಗ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಶ್ರೀಗಳ ದೇಹ ಸ್ವಲ್ಪ ನಿತ್ರಾಣಗೊಂಡಿದೆ. ನಿತ್ರಾಣದಿಂದ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನೂ 1 ತಿಂಗಳವರೆಗೆ ಚಿಕಿತ್ಸೆ ನೀಡಬೇಕಾದೀತು. ಸ್ವಾಮೀಜಿಗೆ ನಡೆಸಬೇಕಾದ ಎಲ್ಲಾ ಪರೀಕ್ಷೆ ನಡೆಸಲಾಗಿದೆ.ದೈನಂದಿನ ಸಣ್ಣ ಪರೀಕ್ಷೆಗಳು ನಡೆಯುತ್ತಿವೆ. ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ಆದರೆ ಸ್ಥಿರವಾಗಿದೆ. ಅವರು ಸಂಪೂರ್ಣ ಗುಣಮುಖರಾಗಲು ಇನ್ನಷ್ಟು ಸಮಯ ಬೇಕಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಪೇಜಾವರ ಶ್ರೀಗಳ ಶ್ವಾಸಕೋಶಕ್ಕೆ ಸೋಂಕು ತಗುಲಿದೆ. ಮೊದಲ ದಿನಕ್ಕೆ ಹೋಲಿಸಿದರೆ ಅವರ ಆರೋಗ್ಯ ಸುಧಾರಣೆಯಾಗಿದೆ. ಕಫದ ಪ್ರಮಾಣ ಕಡಿಮೆಯಾಗುತ್ತಿದೆ. ಕೃತಕ ಉಸಿರಾಟ ತೆಗೆಯಲಾಗಿದ್ದು, ಶ್ರೀಗಳು ಉಸಿರಾಡಲು ಪ್ರಯತ್ನಿಸುತ್ತಿದ್ದಾರೆ. ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿದೆ. ವೆಂಟಿಲೇಟರ್ ನಲ್ಲಿ ಇನ್ನೂ ಸಾಕಷ್ಟು ಸಮಯ ಇರಿಸ ಬೇಕಾಗಬಹುದು. ಆರು ಜನ ತಜ್ಞ ವೈದ್ಯರ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ತಿಳಿಸಿದ್ದಾರೆ.
Click this button or press Ctrl+G to toggle between Kannada and English