ನವದೆಹಲಿ : ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್) ಯೋಜನೆಗೆ ಕೇಂದ್ರ ಸಂಪುಟ ಇವತ್ತು ಅನುಮೋದನೆ ನೀಡಿದ ಬೆನ್ನಲ್ಲೇ ಎನ್ಆರ್ಸಿ, ಪೌರತ್ವ ಕಾಯ್ದೆ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಲು ಪ್ರಾರಂಭಿಸಿದ್ಧಾರೆ. ಎನ್ಪಿಆರ್ ಬಗ್ಗೆಯೂ ಅನುಮಾನದ ದೃಷ್ಟಿ ಇರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ ಅವರು ಎನ್ಪಿಆರ್, ಎನ್ಆರ್ಸಿ ಕುರಿತು ಉದ್ಭವಿಸಿರುವ ಅನುಮಾನಗಳಿಗೆ ತೆರೆ ಎಳೆಯಲು ಯತ್ನಿಸಿದ್ಧಾರೆ. ಎನ್ಆರ್ಸಿಗೂ ಎನ್ಪಿಆರ್ಗೂ ಯಾವುದೇ ಸಂಬಂಧವಿಲ್ಲ. ಭಾರತಾದ್ಯಂತ ಎನ್ಆರ್ಸಿ ಜಾರಿಗೊಳಿಸುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ ಎಂದೂ ಅಮಿತ್ ಶಾ ಸ್ಪಷ್ಟಪಡಿಸಿದ್ಧಾರೆ.
“ರಾಷ್ಟ್ರೀಯ ನಾಗರಿಕರ ನೊಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೊಂದಣಿ ಮಧ್ಯೆ ಯಾವುದೇ ಸಂಬಂಧ ಇಲ್ಲ ಎಂದು ಇವತ್ತು ಸ್ಪಷ್ಟಪಡಿಸುತ್ತಿದ್ದೇನೆ. ಎನ್ಪಿಆರ್ನಲ್ಲಿ ಕೆಲ ಹೆಸರು ಕೈಬಿಟ್ಟುಹೋಗುವ ಸಾಧ್ಯತೆ ಇರುತ್ತದೆ. ಆದರೆ, ಇದು ಎನ್ಆರ್ಸಿ ಅಲ್ಲದೇ ಇರುವುದರಿಂದ ಅವರ ಪೌರತ್ವಕ್ಕೆ ಯಾವುದೇ ಧಕ್ಕೆ ಇರುವುದಿಲ್ಲ. ಎನ್ಆರ್ಸಿ ಪ್ರಕ್ರಿಯೆಯೇ ಬೇರೆ ಇದೆ. ಎನ್ಪಿಆರ್ನಿಂದಾಗಿ ಯಾರೂ ಪೌರತ್ವ ಕಳೆದುಕೊಳ್ಳುವುದಿಲ್ಲ” ಎಂದು ಅಮಿತ್ ಶಾ ಹೇಳಿದ್ದಾರೆ.
ಎನ್ಪಿಆರ್ ಯೋಜನೆ ಜಾರಿಗೊಳಿಸಲು ಕೇರಳ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅಮಿತ್ ಶಾ, “ಅಂತಹ ನಿಲುವು ತೆಗೆದುಕೊಳ್ಳಬೇಡಿ. ನಿಮ್ಮ ನಿರ್ಧಾರ ಮರುಪರಿಶೀಲಿಸಿರಿ. ನಿಮ್ಮ ರಾಜಕಾರಣಕ್ಕಾಗಿ ಬಡವರಿಗೆ ಅಭಿವೃದ್ಧಿ ಯೋಜನೆಗಳು ಕೈತಪ್ಪದಂತೆ ಮಾಡಬೇಡಿ ಎಂದು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಎನ್ಆರ್ಸಿ ಯೋಜನೆ ಬಗ್ಗೆ ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದೂ ಅವರು ಕೋರಿದ್ಧಾರೆ. “ಎನ್ಆರ್ಸಿ ಬಗ್ಗೆ ಈಗ ಯಾವುದೇ ಚರ್ಚೆ ನಡೆದಿಲ್ಲ. ಪ್ರಧಾನಿ ಹೇಳಿದಂತೆ ಸಂಪುಟದಲ್ಲಾಗಲೀ ಸಂಸತ್ತಿನಲ್ಲಾಗಲೀ ಚರ್ಚೆ ಆಗಿಲ್ಲ” ಎಂದು ಕೇಂದ್ರ ಗೃಹ ಸಚಿವರು ಸ್ಪಷ್ಟನೆ ನೀಡಿದ್ಧಾರೆ.
ಬಂಧನ ಕೇಂದ್ರಗಳ ಬಗ್ಗೆಯೂ ಮಾತನಾಡಿದ ಅವರು, “ಬಂಧನ ಕೇಂದ್ರಕ್ಕೂ ಎನ್ಆರ್ಸಿಗೂ, ಪೌರತ್ವ ಕಾಯ್ದೆಗೂ ಯಾವುದೇ ಸಂಬಂಧ ಇಲ್ಲ. ಅಕ್ರಮ ವಲಸಿಗರನ್ನು ಇಡಲು ಈ ಡಿಟೆನ್ಷನ್ ಕೇಂದ್ರಗಳು ಹಲವು ವರ್ಷಗಳಿಂದಲೂ ಇವೆ. ಈ ವಿಚಾರದಲ್ಲಿ ತಪ್ಪು ಮಾಹಿತಿ ಹರಡಬೇಡಿ” ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English