ಮೈಸೂರು : ಕಳೆದ ತಿಂಗಳಷ್ಟೇ ಐನಾತಿಯೊಬ್ಬ ತನ್ನ ಬುಲೆಟ್ ಬೈಕ್ ನ ನಂಬರನ್ನು ಬದಲಾಯಿಸಿಕೊಂಡು ಸ್ಕೂಟರ್ ಒಂದರ ನಂಬರ್ ಹಾಕಿಕೊಂಡು ಸಂಚಾರ ನಿಯಮ ಉಲ್ಲಂಘನೆ ಮಾಡುತಿದ್ದ ಬಗ್ಗೆ ವರದಿ ಆಗಿತ್ತು. ಬರೋಬ್ಬರಿ 48 ಬಾರಿ ಸಂಚಾರ ನಿಯಮ ಉಲ್ಲಂಘನೆಯ ಆರೋಪ ಹೊಂದಿದ್ದ ಬುಲೆಟ್ ಸವಾರನನ್ನು ಕೊನೆಗೂ ಪೋಲೀಸರು ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ್ದರು. ಇದೀಗ ಅಂತಹುದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಇಲ್ಲಿನ ಕುವೆಂಪುನಗರದ ನಿವಾಸಿ ಅರಬಿಂದೋ ಬಿಸ್ವಾಸ್ ಎಂಬುವರಿಗೆ ನೀಲಿ ಬಣ್ಣದ ಸುಜುಕಿ ಲೆಟ್ಸ್ ಸ್ಕೂಟರ್ (ಕೆಎ-09, ಹೆಚ್‌ಎಫ್ -3106)ಅನ್ನು ಹೂಟಗಳ್ಳಿ ಜಂಕ್ಷನ್ ಹತ್ತಿರ ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದ ಬಗ್ಗೆ ಪೋಸ್ಟ್ ಮೂಲಕ ನೋಟಿಸ್ ಬಂದಿತ್ತು. ಈ ಸಂಬಂಧ ಪೊಲೀಸ್ ಆಯುಕ್ತರ ಕಚೇರಿಯ ಆಟೋಮೇಷನ್ ಸೆಂಟರ್‌ಗೆ ಬಂದು ಪರಿಶೀಲಿಸಿದಾಗ ಅವರಿಗೆ ಅಚ್ಚರಿ ಕಾದಿತ್ತು.ಬಿಳಿ ಬಣ್ಣದ ಸುಜುಕಿ ಆಕ್ಸೆಸ್ ವಾಹನ ಸವಾರನೋರ್ವ ಅರಬಿಂದೋ ಅವರ ವಾಹನದ ನೋಂದಣಿ ಸಂಖ್ಯೆಯನ್ನು ತನ್ನ ವಾಹನಕ್ಕೆ ಹಾಕಿಕೊಂಡು ಸಂಚರಿಸುವ ಮಾಹಿತಿ ಬಯಲಾಗಿತ್ತು. ಅಲ್ಲದೆ ಈವರೆಗೆ 5 ಪ್ರಕರಣಗಳು ದಾಖಲಾದ ಬಗ್ಗೆ ತಿಳಿದ ಅರಬಿಂದೋ ಅವರು ಈ ಸಂಬಂಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.ದೂರಿನನ್ವಯ ಸಂಚಾರ ವಿಭಾಗದ ಏಸಿಪಿ ಸಂದೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿ, 23 ರಂದು ಎನ್. ಆರ್. ಸಂಚಾರಿ ಪೊಲೀಸರು ಇಲ್ಲಿನ ಅಶೋಕ ರಸ್ತೆಯಲ್ಲಿ ನಕಲಿ ನಂಬರ್ ಸ್ಕೂಟರನ್ನು ಪತ್ತೆ ಮಾಡಿ, ಆರೋಪಿ ಯನ್ನು ಬಂಧಿಸಿದ್ದಾರೆ.
ಸದ್ಯ ವಾಹನ ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಯನ್ನು ವಿಚಾರಣೆ ನಡೆಸಿದ್ದಾರೆ.ಬಿಳಿಯ ಬಣ್ಣದ ಸುಜುಕಿ ಆಕ್ಸಸ್ ಸ್ಕೂಟರ್ ಮಾಲೀಕ ಅಭಿಲಾಶ್ ಎಂಬುವರು ತನ್ನ ವಾಹನವನ್ನು ಮೈಸೂರು ತಾಲೂಕಿನ ಇಲವಾಲ ನಿವಾಸಿ ವಿನೋದ್ ಎಂಬಾತನ ಬಳಿ ಅಡವು ಇಟ್ಟಿದ್ದು , ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣದ ದಂಡವನ್ನು ಪಾವತಿಸುವುದರಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಿನೋದ್ ನೋಂದಣಿ ಸಂಖ್ಯೆ ಬದಲಾಯಿಸಿಕೊಂಡಿರುವ ವಿಷಯ ವಿಚಾರಣೆ ವೇಳೆ ಬಯಲಾಗಿದೆ. ಪೋಲೀಸರು ತನಿಖೆ ನಡೆಸುತಿದ್ದಾರೆ.
Click this button or press Ctrl+G to toggle between Kannada and English