ಮಡಿಕೇರಿ : ಕೊಡಗು ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಮತ್ತು ವಸತಿ ವ್ಯವಸ್ಥೆಗಳನ್ನು ಕಲ್ಪಸಿಕೊಡುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳೆರಡೂ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆರೋಪಿಸಿದ್ದಾರೆ.
ಮಡಿಕೇರಿ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಕ್ಷಣವೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ರಾಜ್ಯ ಸರ್ಕಾರ ಮುಂದಾಗದಿದ್ದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರಿಗೆ ಹಿಂದಿನ ಮೈತ್ರಿ ಸರ್ಕಾರ 10 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಮಂಜೂರಾತಿಯನ್ನು ನೀಡಿದ್ದಲ್ಲದೆ, ಮನೆ ಕಳೆದುಕೊಂಡವರಿಗೆ ಮನೆ ಬಾಡಿಗೆಯಾಗಿ 10 ಸಾವಿರ ರೂ.ಗಳನ್ನು ಒದಗಿಸಿತ್ತು. ಆದರೆ, ಈಗಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಸಂತ್ರಸ್ತರಿಗೆ ಆರಂಭಿಕ 10ಸಾವಿರ ಪರಿಹಾರ, 5 ಸಾವಿರ ಮನೆ ಬಾಡಿಗೆ ಮತ್ತು ಮನೆ ನಿರ್ಮಾಣಕ್ಕೆ 5 ಲಕ್ಷ ನೀಡುವುದಾಗಿ ತಿಳಿಸಿದ್ದರು, ಅದು ಕನಸಾಗಿಯೇ ಉಳಿದಿದ್ದು ಕಾರ್ಯರೂಪಕ್ಕೆ ಬಂದಿಲ್ಲವೆಂದು ಆರೋಪಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಎಂ.ಎ. ಉಸ್ಮಾನ್, ವಕ್ತಾರ ಟಿ.ಇ. ಸುರೇಶ್, ಸಮಾಜಿಕ ಜಾಲತಾಣ ಘಟಕದ ಜಿಲ್ಲಾ ಸಂಚಾಲಕ ಸೂರಜ್ ಹೊಸೂರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕ ತೆನ್ನಿರ ಮೈನ , ಬ್ಲಾಕ್ ಅಧ್ಯಕ್ಷರುಗಳಾದ ಪಟ್ಟಡ ರಂಜಿ ಪೂಣಚ್ಚ, ಇಸ್ಮಾಯಿಲ್, ಸತೀಶ್, ಕೆ.ಯು.ಅಬ್ದುಲ್ ರಜಾಕ್, ಸಂಪತ್ ಸೋಮಣ್ಣ ಹಾಗೂ ಪ್ರಮುಖರಾದ ಹೆಚ್.ಎಂ. ನಂದ ಕುಮಾರ್, ಕುಮುದಾ ಧರ್ಮಪ್ಪ, ನಗರ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್ ಮೊದಲಾದವರು ಹಾಜರಿದ್ದರು.
Click this button or press Ctrl+G to toggle between Kannada and English