ಮಡಿಕೇರಿ : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಇಸ್ರೋ ತಂಡದವರೊಂದಿಗೆ ಕಂಕಣ ಸೂರ್ಯಗ್ರಹಣವನ್ನು ವೀಕ್ಷಣೆ ಮಾಡಿದರು.
ಹಾಸನದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ ಇಸ್ರೋ ತಂಡದ ಅನುಜ್ ಜಗತಾಪ್, ಭಾನುತೇಜ ಹಾಗೂ ಪ್ರಫುಲ್ ಹೆಚ್.ರಾಯ್ ಅವರುಗಳು ಪ್ರಕೃತಿಯ ವಿಸ್ಮಯವಾದ ಸೂರ್ಯಗ್ರಹಣದ ಬಗ್ಗೆ ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಿದರು. ಅಲ್ಲದೆ, ನೀರಿನ ಸಹಾಯದಿಂದ ರಾಕೆಟ್ ಉಡಾವಣೆಯ ಪ್ರಾತ್ಯಕ್ಷಿಕೆಯ ಮೂಲಕ ವಿದ್ಯಾರ್ಥಿಗಳ ಸಂದೇಹಗಳನ್ನು ಪರಿಹರಿಸಿದರು.
ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಸಪ್ರಶ್ನೆ ಮುಂತಾದ ಸ್ಪರ್ಧೆಗಳು ನಡೆದವು. ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಶಾಲೆಯ ಪ್ರಾಂಶುಪಾಲರಾದ ಬಿ.ಎಂ.ಸರಸ್ವತಿ ಅವರು ಮಾತನಾಡಿ, ಇಸ್ರೋ ತಂಡದ ಪ್ರತಿನಿಧಿಗಳಾದ ಅನುಜ್ ಜಗತಾಪ್, ಪ್ರಫುಲ್ ಹೆಚ್.ರಾಯ್ ಹಾಗೂ ಭಾನುತೇಜ ಅವರುಗಳು ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಶಿಷ್ಯರಾಗಿದ್ದು, ವಿದ್ಯಾರ್ಥಿಗಳಿಗೆ ವಿಜ್ಞಾನ ಲೋಕದ ಮಾಹಿತಿ ನೀಡಿರುವುದು ಹೆಮ್ಮೆಯ ವಿಚಾರವೆಂದರು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಲು ಮತ್ತು ಇಸ್ರೋದ ಬಗ್ಗೆ ತಿಳಿದುಕೊಳ್ಳಲು ಈ ಕಾರ್ಯಕ್ರಮ ಸಹಕಾರಿಯಾಯಿತು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೂರಾರು ವಿದ್ಯಾರ್ಥಿಗಳು ಅಪರೂಪದ ಪ್ರಕೃತಿಯ ವಿಸ್ಮಯಕ್ಕೆ ಸಾಕ್ಷಿಯಾದರು, ಸೂರ್ಯಗ್ರಹಣ ನೋಡಿ ಸಂಭ್ರಮಿಸಿದರು.
Click this button or press Ctrl+G to toggle between Kannada and English