ಕೋಲ್ಕತ : ಏರಿಳಿತದ ಹಾದಿಯಲ್ಲಿ ಸಾಗಿ ರುವ ಹಾಲಿ ಚಾಂಪಿಯನ್ ಬೆಂಗಳೂರು ಎಫ್ಸಿ ತಂಡಕ್ಕೆ ಐಎಸ್ಎಲ್ ಫುಟ್ಬಾಲ್ ಟೂರ್ನಿಯ ಅಭಿಯಾನದಲ್ಲಿ ಇನ್ನೊಂದು ಸೋಲು ಎದುರಾಗಿದೆ. ಎರಡನೇ ಅವಧಿಯ ಆಟದಲ್ಲಿ ಡೇವಿಡ್ ವಿಲಿಯಮ್ಸ್ ಬಾರಿಸಿದ ಆಕರ್ಷಕ ಗೋಲಿಗೆ ಹಿನ್ನಡೆ ಕಂಡ ಬೆಂಗಳೂರು ಎಫ್ಸಿ ತಂಡ ಆತಿಥೇಯ ಎಟಿಕೆ ವಿರುದ್ಧ 0-1ರಿಂದ ಆಘಾತ ಎದುರಿಸಿದೆ. ಎಟಿಕೆ ವಿರುದ್ಧದ 10ನೇ ಪಂದ್ಯದಲ್ಲಿ ಬಿಎಫ್ಸಿ 2ನೇ ಸೋಲು ಕಂಡಿದೆ.
ಸಾಲ್ಟ್ಲೇಕ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರೋಚಕ ವಾಗಿದ್ದ ಮೊದಲ ಅವಧಿಯ ಆಟದಲ್ಲಿ ಎರಡೂ ತಂಡಗಳು ಗೋಲಿಗಾಗಿ ಹೋರಾಟ ನಡೆಸಿದರೂ, ಮುನ್ನಡೆ ಗಳಿಸುವಲ್ಲಿ ಯಶ ಕಾಣ ಲಿಲ್ಲ. ಆದರೆ, 2ನೇ ಅವಧಿ ಆರಂಭವಾದ ಎರಡೇ ನಿಮಿಷದಲ್ಲಿ ಎಟಿಕೆ ಮುನ್ನಡೆ ಕಂಡುಕೊಂಡಿತು.
ರಾಹುಲ್ ಭೀಕೆ ಹಾಗೂ ಜಯೇಶ್ ರಾಣೆ ಚೆಂಡಿನ ಮೇಲೆ ಹತೋಟಿ ಸಾಧಿಸಲು ಪ್ರಯತ್ನ ಪಡುತ್ತಿರುವ ವೇಳೆಯಲ್ಲಿ ಗೋಲುಪೆಟ್ಟಿಗೆಯ ಬಲಭಾಗದಲ್ಲಿ ನಿಂತಿದ್ದ ಡೇವಿಡ್ ವಿಲಿಯಮ್ಸ್ರತ್ತ ಚೆಂಡು ಪಾಸ್ ಆಯಿತು. ಈ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡ ವಿಲಿಯಂಮ್ಸ್, ಗೋಲು ಪೆಟ್ಟಿಗೆಯತ್ತ ಗುರಿಯಾಗಿ ಚೆಂಡನ್ನು ಒದ್ದರು. ಬಿಎಫ್ಸಿ ಗೋಲ್ಕೀಪರ್ ಗುರುಪ್ರೀತ್ ಸಿಂಗ್ ಸಂಧುರ ಕೈಬೆರಳಿಗೆ ತಾಕಿ ಚೆಂಡು ಗೋಲುಪೆಟ್ಟಿಗೆ ಸೇರಿತು. ಅದರೊಂದಿಗೆ ಡೇವಿಡ್ ವಿಲಿಯಮ್ಸ್, ಹಾಲಿ ಋತುವಿನಲ್ಲಿ ಐದನೇ ಗೋಲು ಬಾರಿಸಿದ ಶ್ರೇಯ ಸಂಪಾದಿಸಿದರು. ಬಳಿಕ ತನ್ನ ಆಟದ ಶೈಲಿಯಲ್ಲಿ ಬದಲಾವಣೆ ಮಾಡಿದ ಬಿಎಫ್ಸಿ ತಂಡ, ಎಟಿಕೆಯ ರಕ್ಷಣಾ ವಿಭಾಗವನ್ನು ಬೇಧಿಸುವ ಗುರಿಯಲ್ಲಿ ಹಲವು ಪ್ರಯತ್ನಗಳನ್ನು ಮಾಡಿತು.
87ನೇ ನಿಮಿಷದಲ್ಲಿ ಉದಾಂತ ಸಿಂಗ್ ಮೂಲಕ ಸಮಬಲದ ಗೋಲಿನ ಅವಕಾಶ ಸಿಕ್ಕಿತ್ತು. ಗೋಲುಪೆಟ್ಟಿಗೆಯತ್ತ ಬಾರಿಸಿದ ಚೆಂಡನ್ನು ಎಟಿಕೆಯ ಗೋಲ್ಕೀಪರ್ ಆಕರ್ಷಕವಾಗಿ ತಡೆದರು. ಇಂಜುರಿ ಟೈಮ್ ಕೊನೇ ನಿಮಿಷದಲ್ಲಿ ಸಿಕ್ಕ ಕಾರ್ನರ್ ಅವಕಾಶದಲ್ಲಿ ಎರಿಕ್ ಪಾರ್ಟಾಲು ಬಾರಿಸಿದ ಶಾಟ್ಅನ್ನು ಗೋಲಾಗಿ ಪರಿವರ್ತಿಸಲು ಬಿಎಫ್ಸಿಯ ಡಿಫೆಂಡರ್ಗಳು ಗೋಲು ಪೆಟ್ಟಿಗೆಯ ಮುಂದೆ ನಿಂತಿದ್ದರು. ಆದರೆ, ಎಟಿಕೆ ಗೋಲ್ಕೀಪರ್ ಅರಿಂದಮ್ ಇದನ್ನು ತಡೆದು ತಂಡದ ಗೆಲುವಿಗೆ ಕಾರಣರಾದರು. ಎಟಿಕೆ ಅಂಕಪಟ್ಟಿಯಲ್ಲಿ 18 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದರೆ, 16 ಅಂಕ ಹೊಂದಿರುವ ಬಿಎಫ್ಸಿ 3ನೇ ಸ್ಥಾನಕ್ಕೆ ಕುಸಿಯಿತು.
Click this button or press Ctrl+G to toggle between Kannada and English