ಕುಂದಾಪುರ : ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕನ್ಯಾನ ಕಲ್ಕಂಬ ಎಂಬಲ್ಲಿ ಡಿ.17ರಂದು ನಡೆದ ಚೋರ್ಮಕ್ಕಿ ಬಾಬು ಶೆಟ್ಟಿ ಎಂಬವರ ಭೀಕರ ಕೊಲೆ ಪ್ರಕರಣದ ಆರು ಮಂದಿ ಆರೋಪಿಗಳನ್ನು ಬುಧವಾರ ರಾತ್ರಿ ಬಂಧಿಸುವಲ್ಲಿ ಕುಂದಾಪುರ ಉಪ ವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ನೇತೃತ್ವದ ಪೊಲೀಸರ ತಂಡ ಯಶಸ್ವಿಯಾಗಿದೆ.
ನೇರಳಕಟ್ಟೆ ನಿವಾಸಿ ತೇಜಪ್ಪ ಶೆಟ್ಟಿ (68) ಇಡೀ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಶೆಟ್ರಕಟ್ಟೆ ನಿವಾಸಿ ಉದಯ್ ರಾಜ್ ಶೆಟ್ಟಿ(55) ಕೊಲೆಯ ಸಂಪೂರ್ಣ ಯೋಜನೆ ರೂಪಿಸಿದವರಾಗಿದ್ದಾರೆ. ಉಳಿದಂತೆ ಕೊಲೆಗೆ ಸಹಕರಿಸಿದ ಕೆಂಚನೂರಿನ ರಮೇಶ್ ಪೂಜಾರಿ (25), ಆನಗಳ್ಳಿ ನಿವಾಸಿ ಪ್ರವೀಣ್ ಪೂಜಾರಿ (25), ಬಸ್ರೂರು ನಿವಾಸಿ ಸಚಿನ್ ಪೂಜಾರಿ (21) ಹಾಗೂ ಆನಗಳ್ಳಿಯ ರಾಘವೇಂದ್ರ ಪೂಜಾರಿ (24) ಬಂಧಿತರಾಗಿರುವ ಉಳಿದ ಆರೋಪಿಗಳು.
ಕೊಲೆಯ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ತೇಜಪ್ಪ ಶೆಟ್ಟಿ ನಂತರ ಊರಿಗೆ ಬಂದಿದ್ದು, ಪೊಲೀಸರು ಹುಡುಕಾಡುತ್ತಿರುವ ಸುದ್ದಿ ತಿಳಿದು ದೂರದೂರಿಗೆ ತೆರಳಲು 25ರ ಸಂಜೆ 7 ಗಂಟೆಗೆ ರೈಲು ನಿಲ್ದಾಣಕ್ಕೆ ಬಂದಿದ್ದಾಗ ಉಳಿದ ಆರೋಪಿಗಳೊಂದಿಗೆ ಬಂಧಿಸಲಾಗಿತ್ತು. ಆತ ತನ್ನ ತಪ್ಪನ್ನು ಒಪ್ಪಿಕೊಂಡಿರುವುದಾಗಿ ಹೇಳಲಾಗಿದೆ.
ವೈಯಕ್ತಿಕ ವೈಮನಸ್ಸು ಕೊಲೆಗೆ ಹೇತು: ಪ್ರಕರಣದ ಕುರಿತಂತೆ ಇಂದು ಕಂಡ್ಲೂರು ಠಾಣೆಯಲ್ಲಿ ಸುದ್ದಿಗಾರರಿಗೆ ಮಾಹಿತಿಗಳನ್ನು ನೀಡಿದ ಹರಿರಾಂ ಶಂಕರ್, ಕೊಲೆಯಾದ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ಅವರ ನಡುವೆ ಕಳೆದ 10-15 ವರ್ಷಗಳಿಂದಲೂ ವೈಮನಸ್ಸಿದ್ದು ಇಬ್ಬರ ನಡುವೆ ಆಗಾಗ ಜಗಳ, ಗಲಾಟೆ ನಡೆಯುತ್ತಿತ್ತು.
ತನ್ನ ಮಗ ರವಿರಾಜನಿಗೆ ಬಾಬು ಶೆಟ್ಟಿ ಕಡೆಯ ಹರೀಶ್ ಶೆಟ್ಟಿ ಹಲ್ಲೆ ನಡೆಸಿದ್ದು, ಹಲ್ಲೆ ಬಳಿಕ ತಲೆಮರೆಸಿಕೊಂಡಿದ್ದ ಹರೀಶ್ ಶೆಟ್ಟಿ ನಂತರ ಜಾಮೀನು ಪಡೆದು ಊರಿನಲ್ಲಿ ರಾಜಾರೋಷವಾಗಿ ತಿರುಗುತಿದ್ದ. ಈ ಬಗ್ಗೆ ಬಾಬು ಶೆಟ್ಟಿ , ಸಿಕ್ಕ ಸಿಕ್ಕ ಕಡೆಗಳಲ್ಲಿ ತೇಜಪ್ಪ ಶೆಟ್ಟಿಗೆ ಹಿಯಾಳಿಸಿ ಕೇವಲವಾಗಿ ಮಾತನಾಡುತಿದ್ದ ಇದರಿಂದ ರೋಸಿಹೋಗಿ ಉದಯರಾಜ್ ಹಾಗೂ ರಮೇಶ್ ಪೂಜಾರಿ ಜೊತೆ ಸೇರಿ ಕೊಲೆಗೆ ಒಳಸಂಚು ರೂಪಿಸಿದ್ದಾಗಿ ತೇಜಪ್ಪ ಶೆಟ್ಟಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ನೇರಳಕಟ್ಟೆ ಭಾಗದಲ್ಲಿ ಇತ್ತೀಚೆಗೆ ನಡೆದ ಹರೀಶ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಹತ್ಯಾ ಯತ್ನ ಪ್ರಕರಣದಲ್ಲಿ ಕೂಡ ಬಾಬು ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ನಡುವೆ ಘರ್ಷಣೆಯಾಗಿತ್ತು. ತೇಜಪ್ಪ ಶೆಟ್ಟಿ ಇದನ್ನು ಗಂಭೀರವಾಗಿ ತೆಗೆದುಕೊಂಡು, ಬಾಬು ಶೆಟ್ಟಿಯನ್ನು ಕೊಲ್ಲಬೇಕೆಂದು ಸಂಚು ರೂಪಿಸಿದ್ದ. ಕೊಲೆಗೆ 50,000ರೂ. ನಗದು ಹಾಗೂ ಕೇಸಿನ ಎಲ್ಲಾ ಖರ್ಚುಗಳನ್ನು ತಾನೇ ನಿಭಾಯಿಸುವುದಾಗಿ ಉದಯ ಮತ್ತು ರಮೇಶಗೆ ಮಾತುಕೊಟ್ಟಿದ್ದಾಗಿ ತೇಜಪ್ಪ ಶೆಟ್ಟಿ ಬಾಯ್ಬಿಟ್ಟಿದ್ದಾನೆ. ಉಳಿದ ಆರೋಪಿಗಳು ಸಹ ವಿಚಾರಣೆಯ ವೇಳೆ ಇದೇ ತರಹದ ಹೇಳಿಕೆಯನ್ನು ನೀಡಿದ್ದು ಎಲ್ಲಾ ಆರೋಪಿಗಳನ್ನು ಬುಧವಾರ ರಾತ್ರಿ 10ಕ್ಕೆ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆದ ದಿನ ಡಿ.17ರಂದು ಅಪರಾಹ್ನ ಬಾಬು ಶೆಟ್ಟಿಗೆ ಕರೆ ಮಾಡಿದ ಆರೋಪಿಗಳು ಗೊಬ್ಬರ ಸಾಗಾಟ ಮಾಡಬೇಕಿದ್ದು ಅದನ್ನು ತೋರಿಸುತ್ತೇವೆ ಬನ್ನಿ ಎಂದಿದ್ದರು. ಸ್ವಂತ ಟೆಂಪೊವನ್ನು ಹೊಂದಿದ್ದ ಬಾಬು ಶೆಟ್ಟಿ, ತಲ್ಲೂರು ಮಾರ್ಗವಾಗಿ ನೇರಳಕಟ್ಟೆಗೆ ಸಾಗುವ ಹಾಗೂ ಹೆಮ್ಮಾಡಿ ಕೊಲ್ಲೂರು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಹಟ್ಟಿಯಂಗಡಿ ಗ್ರಾಪಂ ವ್ಯಾಪ್ತಿಯ ಜಾಡಿ ಕಲ್ಕಂಬ ಎಂಬಲ್ಲಿಗೆ ಬೈಕಿನಲ್ಲಿ ಬಂದಾಗ ಆರೋಪಿಗಳು ಬಾಬು ಶೆಟ್ಟಿಯ ಎದೆ, ತಲೆ, ಹೊಟ್ಟೆಗೆ ಮಾರಣಾಂತಿಕವಾಗಿ ಇರಿದು ಕೊಲೆ ಮಾಡಿ ಪರಾರಿಯಾಗಿದ್ದರು. ಹತ್ಯೆಯ ಸಂದರ್ಭ ಉದಯ ಶೆಟ್ಟಿ ಮತ್ತು ತೇಜಪ್ಪ ಶೆಟ್ಟಿ ಸ್ಥಳದಲ್ಲಿ ಇದ್ದಿದ್ದು ಖಚಿತ ಪಟ್ಟಿದೆ.
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರಕಾಯುಧಗಳು, ಸಿಮ್, ಬಟ್ಟೆ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದು, ಮಾರುತಿ ಓಮ್ನಿ ಕಾರು ಹಾಗೂ ಎರಡು ಮೋಟಾರು ಸೈಕಲ್‌ಗಳನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಿದೆ.
ಉಡುಪಿ ಎಸ್ಪಿನಿಶಾ ಜೇಮ್ಸ್ ಮಾರ್ಗದರ್ಶನದಲ್ಲಿ, ಎಎಸ್ಪಿ ಹರಿರಾಂ ಶಂಕರ್, ಡಿಸಿಐಬಿ ಇನ್ಸ್‌ಪೆಕ್ಟರ್ ಕಿರಣ್, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಆರ್.ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್‌ಐ ರಾಜಕುಮಾರ್, ಶಂಕರನಾರಾಯಣ ಠಾಣೆ ಪಿಎಸ್‌ಐ ಶ್ರೀಧರ್ ನಾಯ್ಕಾ, ಕುಂದಾಪುರ ಪಿಎಸ್‌ಐ ಹರೀಶ್ ಆರ್. ಹಾಗೂ ಸಿಬ್ಬಂದಿಗಳ ತಂಡ ಆರೋಪಿಗಳನ್ನು ಒಂಭತ್ತು ದಿನಗಳಲ್ಲಿ ಬಂಧಿಸಲಾಗಿದೆ.
Click this button or press Ctrl+G to toggle between Kannada and English