ಮಂಗಳೂರು : ಪೇಜಾವರ ಶ್ರೀಗಳು ಇನ್ನಿಲ್ಲ ಎಂಬುದನ್ನು ಕೇಳಿ ನಮಗೆ ಅತೀವ ದುಃಖವಾಗಿದೆ. ಶ್ರೀಗಳ ನಿಧನದಿಂದ ಜಗತ್ತಿನಾದ್ಯಂತ ಇರುವ ಅವರ ಶಿಷ್ಯಂದಿರಿಗೆ, ಭಕ್ತಾಭಿಮಾನಿಗಳಿಗೆ ಅತೀವ ದುಃಖವಾಗಿದೆ. ಅವರ ದುಃಖದಲ್ಲಿ ನಾವೂ ಸಹಭಾಗಿಗಳಾಗಿದ್ದೇವೆ.
ಡಾ. ಅಂಬೇಡ್ಕರ್ ಚಿಂತನೆಗೆ ತದ್ವಿರುದ್ಧವಾದ ಮಾಧ್ವ ಪರಂಪರೆಯ ಅತ್ಯಂತ ಹಿರಿಯ ಚೇತನವಾಗಿದ್ದ ಶ್ರೀಗಳು, ತಾವು ನಂಬಿದ ತತ್ವಗಳ ಪಾಲನೆ ಪೋಷಣೆಯಲ್ಲೇ ತಮ್ಮ ಜೀವನ ಸವೆಸಿದರೂ ನಿರಂತರ ದಲಿತರ ಹಿತೈಷಿಯಾಗಿದ್ದರು.
ತಮ್ಮ ರಾಜಕೀಯ ನಡೆಯಿಂದ ಸದಾ ವಿವಾದಾತ್ಮಕರಾಗುತ್ತಿದ್ದ ಶ್ರೀಗಳು, ತಮ್ಮ ಇಳಿ ವಯಸ್ಸಿನಲ್ಲೂ ತಾವು ನಂಬಿದ ತತ್ವಗಳ ರಕ್ಷಣೆ ಮತ್ತು ಅನುಷ್ಠಾನಕ್ಕಾಗಿ ಎಳೆಯ ಮಕ್ಕಳನ್ನು, ಯುವ ಪೀಳಿಗೆಯನ್ನು ಸಿದ್ಧಗೊಳಿಸುವ ಕಾರ್ಯವೈಖರಿ, ಅಪರಿಮಿತ ಪರಿಶ್ರಮ ಮತ್ತು ಬದ್ಧತೆ ಯಾವನೇ ಒಬ್ಬ ಸಾಮಾಜಿಕ ಕಾರ್ಯಕರ್ತನಿಗೂ ಸದಾ ಸ್ಫೂರ್ತಿದಾಯಕವಾಗಿತ್ತು.
ಮುಗ್ಧತೆಯ ಎಳೆಯ ವಯಸ್ಸಿನಲ್ಲೇ, ಬಾಲ್ಯಾವಸ್ಥೆಯಿಂದಲೇ, ಸನ್ಯಾಸತ್ವಕ್ಕೆ ಕೊರಳು ಕೊಡುವಂತಾಗಿ ಮಾನವ ಸಹಜ ಜೀವನದಿಂದ ವಂಚಿತರಾಗಿದ್ದ ಶ್ರೀಗಳು, ತಮ್ಮ ಮಠದ ಕಠಿಣ ಚೌಕಟ್ಟಿನಲ್ಲಿ ಸಂಪೂರ್ಣವಾಗಿ ಉಳಿಯಲಾರದೆ ಹಾಗೂ ಕಾಲದ ಅನಿವಾರ್ಯವಾದ ಸಾಮಾಜಿಕ ಪರಿವರ್ತನೆಗೂ ಸಂಪೂರ್ಣವಾಗಿ ತೆರೆದುಕೊಳ್ಳಲು ಸಾಧ್ಯವಾಗದೆ ತಮ್ಮೊಳಗೆ ಒಂದು ರೀತಿಯ ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರು.
ವರ್ಣ, ಜಾತಿ ವ್ಯವಸ್ಥೆ ಬಗ್ಗೆ ನಂಬಿಕೆ ಇರಿಸಿದ್ದ ಶ್ರೀಗಳು, ಅಸ್ಪೃಶ್ಯತೆ ಬಗ್ಗೆ ಮಾತ್ರಾ ತೀವ್ರ ಅಸಹನೆ ಹೊಂದಿದ್ದರು. ಪ್ರಖರ ಹಿಂದುತ್ವವಾದಿಯಾಗಿದ್ದ ಅವರು ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆಗೆ, ಪಂಚಮ ವರ್ಗಕ್ಕೆ ಅವಕಾಶವೇ ಇಲ್ಲ ಎಂದು ವಾದಿಸುದಿದ್ದರು.
ದೇಶದ ಅತ್ಯಂತ ದೊಡ್ಡ ಗುಂಪಾದ ದಲಿತರು ಅಸ್ಪೃಶ್ಯತೆಯ ಕಾರಣಕ್ಕಾಗಿ ಮತಾಂತರಗೊಂಡು ಹಿಂದೂ ಧರ್ಮ ತೊರೆದರೆ ದೇಶಕ್ಕೆ ದೊಡ್ಡ ಗಂಡಾಂತರ ಎಂದು ಅವರು ದೃಢವಾಗಿ ನಂಬಿದ್ದರು.
ಸುಮಾರು 15 ವರ್ಷಗಳ ಹಿಂದೆ, 2004ರಲ್ಲಿ, ಬಿ ಸಿ ರೋಡ್ ನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ನಡೆದ ಸಭೆಯೊಂದರಲ್ಲಿ, ಈ ದೇಶದಲ್ಲಿ ಅಸ್ಪೃಶ್ಯತೆ ನಾಶವಾಗುವವರೆಗೆ ತಾನು ವಿಶ್ರಮಿಸುವುದಿಲ್ಲ ಎಂದು ಘೋಷಿಸಿದ್ದರು. ಆ ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ನ ಕಲ್ಲಡ್ಕ ಪ್ರಭಾಕರ್ ಭಟ್, ವಿ ಹೆಚ್ ಪಿ ಯ ಎಂ ಬಿ ಪುರಾಣಿಕ್ ಮತ್ತು ಹಲವಾರು ಮಠಾಧಿಪತಿಗಳು ಉಪಸ್ಥಿತಿ ಇದ್ದರು. ಆದರೆ, ಈ ನಿಟ್ಟಿನಲ್ಲಿ ರಚನಾತ್ಮಕ ವಾದುದೇನನ್ನೂ ಮಾಡಲು ಅವರಿಗೆ ಕೊನೆವರೆಗೂ ಸಾಧ್ಯ ವಾಗಲೇ ಇಲ್ಲ. ಅವರ ಜತೆ ಇದ್ದವರು ಯಾರೂ ಈ ಬಗ್ಗೆ ತಲೆ ಕೆಡಿಸಿ ಕೊಂಡಿಲ್ಲ.
ಉಡುಪಿಯ ಅಷ್ಟ ಮಠಗಳಲ್ಲಿನ ಪಂಕ್ತಿ ಬೇಧವನ್ನು ಪ್ರತಿಭಟಿಸಿ, ಕೃಷ್ಣ ಮಠಕ್ಕೆ ಮುತ್ತಿಗೆ ಹಾಕಲು ‘ಉಡುಪಿ ಚಲೋ’ ಕಾರ್ಯಕ್ರಮದಲ್ಲಿ ಗುಜರಾತಿನ (ಈಗಿನ ಶಾಸಕ) ಜಿಗ್ನೇಶ್ ಮೇವಾಣಿ ಕರೆ ನೀಡಿದಾಗ, ದಲಿತರು ಇತರರ ಧಾರ್ಮಿಕ ಹಕ್ಕುಗಳ ಮೇಲೆ ಅತಿಕ್ರಮಣ ಮಾಡಬಾರದು ಎಂದು ನಾನು ಬಹಿರಂಗವಾಗಿಯೇ ಪ್ರತಿಭಟಿಸಿದ್ದೆ. ಆಗ ಸಾಕಷ್ಟು ಗೆಳೆಯರು ನನ್ನ ವಿರುದ್ಧ ಬೇಕಾದಂತೆ ಜರೆದಿದ್ದರು. ನಾನು ಇದಾವುದಕ್ಕೂ ತಲೆಕೆಡಿಸಿಕೊಂಡಿರಲಿಲ್ಲ.
ಪೇಜಾವರ ಶ್ರೀಗಳ ಚಿಂತನೆ ಮತ್ತು ಕಾರ್ಯವೈಖರಿ ಬಗ್ಗೆ ನಮಗೆ ತೀವ್ರ ಭಿನ್ನಮತ ಇದ್ದಾಗ್ಯೂ ಅವರ ಬಗ್ಗೆ ವಿಶೇಷ ಪ್ರೀತಿ ಮತ್ತು ಗೌರವ ಇತ್ತು. ಅವರ ಚಿಂತನೆಗೆ ವಿರುದ್ಧವಾದ ನಮ್ಮ ಚಿಂತನೆಯನ್ನು, ವಾದವನ್ನು ಕೇಳುವ ತಾಳ್ಮೆ, ಸಹನೆ ಅವರಲ್ಲಿತ್ತು. ಅಂತಹ ಸಹನೆ ಸಾಕಷ್ಟು ಸೆಕ್ಯುಲರ್, ಪ್ರಗತಿಪರ ಎಂಬ ಜನರಲ್ಲೂ ನಾನು ಕಾಣಿಲ್ಲ!
ಪೇಜಾವರ ಶ್ರೀಗಳ ಸರಳತೆ, ಸಾಮಾಜಿಕ ಬದ್ಧತೆ, ವಿವಾದಾತ್ಮಕ ರಾಜಕೀಯ ನಿಲುವುಗಳು ಮತ್ತು ಸಮಾಜಕ್ಕೆ ಅವರು ನೀಡಿದ ಕೊಡುಗೆಗಳನ್ನು ಜನ ಸದಾ ಸ್ಮರಿಸುತ್ತಾರೆ.
Click this button or press Ctrl+G to toggle between Kannada and English