ಮಡಿಕೇರಿ : ನಗರಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘ, ಸಂಸ್ಥೆಗಳ ಪ್ರಮುಖರು ನಗರಸಭಾ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಗರಸಭೆಯ 2020-21ನೇ ಸಾಲಿನ ಆಯವ್ಯಯ ಅನುಮೋದನೆಗಾಗಿ ನಡೆದ ಸಭೆಯಲ್ಲಿ ಎದುರಾಯಿತು.
ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಗರಸಭಾ ಆಯುಕ್ತ ಎಂ.ಎಲ್.ರಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಮುಖವಾಗಿ ನಗರದ ರಸ್ತೆ, ಚರಂಡಿ ಅವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆಗಳ ಬಗ್ಗೆ ನಗರದ ನಿವಾಸಿಗಳು ಗಮನ ಸೆಳೆದರು. ಮುಂದಿನ ವರ್ಷದ ಬಜೆಟ್‌ನಲ್ಲಿಯಾದರೂ ತುರ್ತು ಅಭಿವೃದ್ಧಿ ಕಾಮಗಾರಿಗಳಿಗೆ ಮೊದಲ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ರಸ್ತೆ ಪರಿಸ್ಥಿತಿಯ ಬಗ್ಗೆ ನಗರಸಭೆ ತಲೆಕೆಡಿಸಿಕೊಂಡಿಲ್ಲ, ಕಸ ವಿಲೇವಾರಿ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆಯನ್ನೂ ಕೇಳುವವರಿಲ್ಲವೆಂದು ಮಹಿಳೆಯರು ಅಸಮಾಧಾನ ವ್ಯಕ್ತಪಡಿಸಿದರು. ಮಹಿಳಾ ಸ್ವಸಹಾಯ ಸಂಘದ ಜಾಯ್ಸ್ ಮೆನೆಜಸ್ ಮಾತನಾಡಿ, ಚಾಮುಂಡೇಶ್ವರಿ ನಗರ, ಇಂದಿರಾನಗರ ಬಡಾವಣೆಯಲ್ಲಿ ಬೀದಿ ದೀಪಗಳಿಲ್ಲ. ಇದರಿಂದ ಕಳ್ಳತನ ಪ್ರಕರಣ ಹೆಚ್ಚಾಗುತ್ತಿದೆ, ರಸ್ತೆ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಮುಂದಿನ ಸಾಲಿನ ಬಜೆಟ್‌ನಲ್ಲಿಯಾದರೂ ಈ ಭಾಗದ ರಸ್ತೆ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಕೋರಿದರು.
ನಗರದಲ್ಲಿ ಬಿಡಾಡಿ ದನ, ಬೀದಿ ನಾಯಿಗಳ ಹಾವಳಿ ಹೆಚ್ಚುತ್ತಿದೆ. ಇದರಿಂದ ವಾಹನ ಅಪಘಾತಗಳು ಸಂಭವಿಸುತ್ತಿದೆ ಎಂದು ಹೊಸ ಬಡಾವಣೆ ನಿವಾಸಿ ಪ್ರೇಮಾ ಮನವಿ ಮಾಡಿದರು.
ವೀರನಾಡು ರಕ್ಷಣಾ ವೇದಿಕೆ ಅಧ್ಯಕ್ಷ ಹರೀಶ್ ಆಚಾರ್ಯ ಮಾತನಾಡಿ, ನಗರದಲ್ಲಿ ನೀರಿನ ಅಭಾವ ಹೆಚ್ಚುತ್ತಿದೆ, ಕುಂಡಾಮೇಸ್ತ್ರಿ ಯೋಜನೆ ಇನ್ನೂ ಪೂರ್ಣವಾಗಿಲ್ಲ. ದಿನದ 24 ಗಂಟೆ ನೀರು ಸರಬರಾಜಾಗುವ ವ್ಯವಸ್ಥೆಯಾಗಬೇಕು. ಕಳಪೆ ಕಾಮಗಾರಿ ಮಾಡುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವ ಕ್ರಮವಾಗಬೇಕು. ನಗರದ ಸ್ವಚ್ಛತೆಗೆ ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.
ಬಿಡಾಡಿ ದನವನ್ನು ಬಿಡಲು ಖಾಸಗಿಯಾಗಿ ಗೋಶಾಲೆಯೊಂದನ್ನು ಜನವರಿ ತಿಂಗಳಲ್ಲಿ ಪ್ರಾರಂಭಿಸುವ ಚಿಂತನೆವಿದೆ. ಇದಕ್ಕಾಗಿ ಭಾಗಮಂಡಲ ವ್ಯಾಪ್ತಿಯಲ್ಲಿ ಜಾಗ ಗುರುತಿಸಲಾಗಿದೆ ಎಂದು ಹರೀಶ್ ಆಚಾರ್ಯ ಹೇಳಿದರು.
ಈ ಸಂದರ್ಭ ಮಾತನಾಡಿದ ಪೌರಾಯುಕ್ತ ರಮೇಶ್ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಕಸದ ಸಮಸ್ಯೆಗೆ ಹೆಚ್ಚು ಒತ್ತು ನೀಡಲಾಗುವುದು. ವಿವಿಧ ವಾರ್ಡ್‌ಗಳಿಗೆ ಖುದ್ದು ಅಧಿಕಾರಿಗಳನ್ನು ಕಳುಹಿಸಿ ಸ್ಥಳದಲ್ಲೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಗರಸಭೆ ಕಾರ್ಯದರ್ಶಿ ತಾಹಿರ್, ಅಧಿಕಾರಿಗಳಾದ ಜಯಂತಿ, ವನಿತಾ ಮತ್ತಿತರರು ಹಾಜರಿದ್ದರು.
Click this button or press Ctrl+G to toggle between Kannada and English