ನವದೆಹಲಿ : ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ದೇಶದ ಮೊದಲು ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ನೆಮಕಗೊಂಡಿದ್ದಾರೆ. 62 ವರ್ಷದ ಬಿಪಿನ್ ರಾವತ್ ಅವರು ಸೇನಾ ಮುಖ್ಯಸ್ಥರಾಗಿ ನಿವೃತ್ತಿ ಹೊಂದಲು ಒಂದು ದಿನ ಇರುವಂತೆಯೇ ಅಚ್ಚರಿಯ ಬೆಳವಣಿಗೆಯಲ್ಲಿ ಸಿಎಎಸ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಕೇಂದ್ರ ಸರ್ಕಾರ ಕೂಡ ಬಿಪಿನ್ ರಾವತ್ ಅವರಿಗೆ ಅನುಕೂಲವಾಗುವಂತೆ ಕಾನೂನು ತಿದ್ದುಪಡಿ ಮಾಡಿದೆ. ಸೇನಾ ಮುಖ್ಯಸ್ಥರ ವಯೋಮಿತಿಯನ್ನು 62ರಿಂದ 65 ವರ್ಷಕ್ಕೆ ನಿನ್ನೆ ಏರಿಸಿತ್ತು.
ಕೆಲ ದಿನಗಳ ಹಿಂದಷ್ಟೇ ರಕ್ಷಣಾ ಪಡೆಗಳ ಮುಖ್ಯಸ್ಥ (ಚೀಫ್ ಆಫ್ ಡಿಫೆನ್ಸ್ ಸ್ಟಾಫ್) ಹುದ್ದೆಯನ್ನು ಸೃಷ್ಟಿಸಲಾಗಿತ್ತು. ಭಾರತದ ಮಿಲಿಟರಿಯಲ್ಲಿರುವ ಭೂ ಸೇನೆ, ನೌಕಾ ಪಡೆ ಹಾಗೂ ವಾಯುಪಡೆ ವಿಭಾಗಗಳಿವೆ. ಈ ಮೂರೂ ಸೇನೆಗಳಲ್ಲಿ ಸಹಕಾರ, ಸಮನ್ವಯತೆ ಮತ್ತು ಹೊಂದಾಣಿಕೆ ಏರ್ಪಡಿಸುವ ಜವಾಬ್ದಾರಿ ಸಿಡಿಎಸ್ಗೆ ಇರುತ್ತದೆ. ತುರ್ತು ಸಂದರ್ಭದಲ್ಲಿ ತ್ವರಿತ ನಿರ್ಧಾರ ಕೈಗೊಳ್ಳಲು ಈ ಹುದ್ದೆ ಸಹಾಯಕವಾಗುವ ನಿರೀಕ್ಷೆ ಇದೆ. ಸರ್ಕಾರವು ಮೂರು ಸೇನಾಪಡೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ಸಮಾಲೋಚಿಸುವ ಪ್ರಮೇಯ ಇರುವುದಿಲ್ಲ. ಸೇನಾ ವಿಚಾರದಲ್ಲಿ ಸಿಡಿಎಸ್ ಅವರೇ ಸರ್ಕಾರದ ಪಾಲಿಗೆ ಏಕಗವಾಕ್ಷಿಯಾಗಿರಲಿದ್ದಾರೆ.
ಒಬ್ಬರೇ ಪರಮೋಚ್ಚ ಮಿಲಿಟರಿ ಅಧಿಕಾರಿ ಇರಬೇಕೆಂಬ ಕೂಗು ದಶಕಗಳಿಂದಲೂ ಇದೆ. 1999ರಲ್ಲಿ ಪಾಕಿಸ್ತಾನವು ಕಾರ್ಗಿಲ್ನಲ್ಲಿ ಎರಗಿ ಬಂದಾಗ ಭಾರತೀಯ ಸೇನಾ ಪಡೆ ಪ್ರತಿರೋಧ ತೋರಿ ಶತ್ರುಗಳನ್ನೇನೋ ಹಿಮ್ಮೆಟ್ಟಿಸಿತ್ತು. ಆದರೆ, ಆ ಯುದ್ಧದಲ್ಲಿ ಸೇನೆಯ ಹಲವು ಲೋಪದೋಷಗಳು ಕಣ್ಣಿಗೆ ಕಟ್ಟುವಂತಿದ್ದವು. ಅದನ್ನು ಪರಿಶೀಲಿಸಲು ರಚನೆಯಾಗಿದ್ದ ಸಮಿತಿ ಕೂಡ ಭಾರತದ ಮೂರು ಸೇನೆಯ ಮಧ್ಯೆ ಸಮನ್ವಯತೆ ಸಾಧಿಸುವ ಒಬ್ಬ ಮಿಲಿಟರಿ ಸಲಹೆಗಾರನ ಅಗತ್ಯ ಇದೆ ಎಂದು ಶಿಫಾರಸು ಮಾಡಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಈ ಶಿಫಾರಸನ್ನು ಈಗ ಜಾರಿಗೆ ತಂದಿದ್ಧಾರೆ.
ಇದೇ ವೇಳೆ, ಕೇಂದ್ರ ಸರ್ಕಾರದಿಂದ ನೂತನವಾಗಿ ಸ್ಥಾಪಿಸಲಾಗಿರುವ ಮಿಲಿಟರಿ ವ್ಯವಹಾರಗಳ ವಿಭಾಗಕ್ಕೂ ಬಿಪಿನ್ ರಾವತ್ ಅವರೇ ಮುಖ್ಯಸ್ಥರಾಗಿರಲಿದ್ದಾರೆ. ಸರ್ಕಾರಕ್ಕೆ ಮಿಲಿಟರಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ.
1958, ಮಾರ್ಚ್ 16ರಂದು ಉತ್ತರಾಖಂಡ್ನ ಪೌರಿಯಲ್ಲಿ ಜನಿಸಿದ ಬಿಪಿನ್ ರಾವತ್ 1978ರಲ್ಲಿ ಗೂರ್ಖಾ ರೆಜಿಮೆಂಟ್ ಮೂಲಕ ಸೇನೆಗೆ ನಿಯುಕ್ತಿಗೊಂಡವರು. ಸೈನಿಕ ಕುಟುಂಬದ ಹಿನ್ನೆಲೆಯವರಾದ ಅವರು ಹಂತ ಹಂತವಾಗಿ ಮೇಲೇರಿ 2016ರಲ್ಲಿ ಭಾರತೀಯ ಸೇನಾ ಪಡೆ ಮುಖ್ಯಸ್ಥರಾದರು.
1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿಯಾದಾಗ ಬಿಪಿನ್ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. 2015ರಲ್ಲಿ ಮಯನ್ಮಾರ್ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರವಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು. ಹಲವು ಸೇನಾನುಭವ ಮತ್ತು ಯುದ್ಧಾನುಭವ ಹೊಂದಿರುವ ಬಿಪಿನ್ ರಾವತ್ ಬಗ್ಗೆ ಮೋದಿ ಸರ್ಕಾರ ಸಹಜ ಒಲವು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರದ ನಿಲುವಿಗೆ ಪೂರಕವಾದ ಹೇಳಿಕೆಗಳನ್ನೂ ರಾವತ್ ನೀಡುತ್ತಾ ಬಂದಿದ್ದು ಗಮನಾರ್ಹ.
Click this button or press Ctrl+G to toggle between Kannada and English