ಕೇಸರಿ ಬಟ್ಟೆ ಬಗ್ಗೆ ಟೀಕಿಸಿದ್ದ ಪ್ರಿಯಾಂಕಾ ಗಾಂಧಿ ವಾದ್ರಾಗೆ ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಕೆ

12:39 PM, Tuesday, December 31st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

yogi-adhithyanath

ಲಕ್ನೋ : ಕೇಸರಿ ಬಟ್ಟೆ ಯೋಗಿ ಆದಿತ್ಯನಾಥ್ ಅವರ ಸ್ವತ್ತಲ್ಲ ಎಂಬ ಹೇಳಿಕೆ ನೀಡಿದ್ದ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ತಿರುಗೇಟು ನೀಡಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ‘ನಾನು ಎಲ್ಲವನ್ನೂ ತ್ಯಾಗ ಮಾಡಿಯೇ ಸಾರ್ವಜನಿಕ ಸೇವೆಗೆ ಬಂದವನು’ ಎಂದು ಹೇಳಿದ್ದಾರೆ.

ಸಿಎಎ ವಿರುದ್ಧದ ಹೋರಾಟವನ್ನು ಬೆಂಬಲಿಸಿ ಲಕ್ನೋ ಪ್ರವಾಸದಲ್ಲಿರುವ ಪ್ರಿಯಾಂಕಾ ಗಾಂಧಿ ಸೋಮವಾರ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡುವಾಗ ಯೋಗಿ ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದರು. ಸಿಎಂ ಯೋಗಿ ಆದಿತ್ಯನಾಥ್ ಕೇಸರಿ ಉಡುಪನ್ನು ಧರಿಸುತ್ತಾರೆ. ಈ ಕೇಸರಿ ಬಣ್ಣ ಅವರ ಸ್ವತ್ತಲ್ಲ, ದೇಶದ ಸ್ವತ್ತು. ಕೇಸರಿ ಹಿಂದೂ ಧರ್ಮದ ಸಂಕೇತ ಎಂದಿದ್ಧಾರೆ. ಹಿಂದೂ ಧರ್ಮದಲ್ಲಿ ದ್ವೇಷ ಸಾಧನೆ ಹಾಗೂ ಹಿಂಸೆಗೆ ಅವಕಾಶವಿಲ್ಲ. ಕೇಸರಿ ಬಟ್ಟೆ ಧರಿಸಿರುವ ಯೋಗಿ ಆದಿತ್ಯನಾಥ್ ಧರ್ಮವನ್ನು ಪಾಲಿಸಬೇಕು ಎಂದಿದ್ದರು.

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯಿಂದ ಹಿಂದಿಯಲ್ಲಿ ಟ್ವೀಟ್ ಮಾಡಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಮ್ಮದೆಲ್ಲವನ್ನೂ ತ್ಯಾಗ ಮಾಡಿದ ನಂತರವೇ ಕೇಸರಿ ಬಟ್ಟೆ ಧರಿಸಿ ಸಾರ್ವಜನಿಕ ಸೇವೆಗೆ ಬಂದಿದ್ದಾರೆ. ಅವರು ಕೇಸರಿ ಬಟ್ಟೆಯನ್ನು ಧರಿಸುವುದು ಮಾತ್ರವಲ್ಲದೆ ಅದನ್ನು ಪ್ರತಿನಿಧಿಸುತ್ತಾರೆ ಎಂದು ತಿರುಗೇಟು ನೀಡಲಾಗಿದೆ.

ಇದರ ಜೊತೆಗೆ ಇನ್ನೊಂದು ಟ್ವೀಟ್ ಕೂಡ ಮಾಡಿರುವ ಉತ್ತರ ಪ್ರದೇಶ ಸಿಎಂ ಕಚೇರಿ, ಸಾರ್ವಜನಿಕ ಸೇವೆ ಮತ್ತು ಅಭಿವೃದ್ಧಿಗೆ ಯೋಗಿ ಆದಿತ್ಯನಾಥ್ ಮಾಡುತ್ತಿರುವ ನಿರಂತರ ಯಜ್ಞ ಮತ್ತು ಸನ್ಯಾಸಿ ಜೀವನಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅವರಿಗೆ ಶಿಕ್ಷೆ ಖಚಿತ ಎಂದು ಪ್ರಿಯಾಂಕಾ ಗಾಂಧಿಗೆ ಎಚ್ಚರಿಕೆ ನೀಡಲಾಗಿದೆ.

ಕೆಲವರು ವಂಶ ಪಾರಂಪರ್ಯವಾಗಿ ರಾಜಕೀಯ ಅಧಿಕಾರ ಪಡೆದು ದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸುತ್ತಿದ್ದಾರೆ. ಅಂಥವರಿಗೆ ಸಾರ್ವಜನಿಕ ಸೇವೆಯ ಅರ್ಥವೇನೆಂದು ಗೊತ್ತಿರಲು ಹೇಗೆ ಸಾಧ್ಯ? ಎಂದು ಪ್ರಿಯಾಂಕಾ ಗಾಂಧಿಗೆ ಬಗ್ಗೆ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಡಲಾಗಿದೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English