ನಾಳೆ ಪಂಪ್‌ವೆಲ್ ಮೇಲ್ಸೇತುವೆ ಅಣಕು ಉದ್ಘಾಟನೆ : ಕಾಂಗ್ರೆಸ್

3:43 PM, Tuesday, December 31st, 2019
Share
1 Star2 Stars3 Stars4 Stars5 Stars
(5 rating, 1 votes)
Loading...

pumpwell

ಮಂಗಳೂರು : ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಪಂಪ್‌ವೆಲ್ ಮೇಲ್ಸೇತುವೆ (ಫ್ಲೈಓವರ್) ಕಾಮಗಾರಿ ಇನ್ನೂ ಪೂರ್ಣಗೊಳ್ಳದೆ ಇರುವ ಹಿನ್ನೆಲೆಯಲ್ಲಿ ಜನವರಿ 1ರಂದು ಸಂಜೆ ಇದರ ಅಣಕು ಉದ್ಘಾಟನೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ತಿಳಿಸಿದ್ದಾರೆ.

ಫ್ಲೈಓವರ್ ಕಾಮಗಾರಿ ಪ್ರಗತಿಯ ಬಗ್ಗೆ ಪರಿಶೀಲಿಸಲು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿದ ದ.ಕ. ಜಿಲ್ಲಾ ಕಾಂಗ್ರೆಸ್‌ನ ಸತ್ಯಶೋಧನಾ ಸಮಿತಿಯಲ್ಲಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.

ಜನವರಿ ಪ್ರಥಮ ವಾರದಲ್ಲಿ ಫ್ಲೈಓವರ್ ಲೋಕಾರ್ಪಣೆಯಾಗುತ್ತದೆ ಎಂದು ದ.ಕ. ಸಂಸದರು ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿಪಡಿಸಿದ ಗಡುವಿನ ಪ್ರಕಾರ ಈ ಮೇಲ್ಸೇತುವೆಯ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಮೂಲಕ ಜನವರಿ 1ರಂದು ಸಂಜೆ ಮೇಲ್ಸೇತುವೆಯ ಅಣಕು ಉದ್ಘಾಟನೆ ನಡೆಯಲಿದೆ ಎಂದು ಐವನ್ ಡಿಸೋಜ ತಿಳಿಸಿದ್ದಾರೆ.

ಸತ್ಯಶೋಧನಾ ಸಮಿತಿಯಲ್ಲಿದ್ದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಜನರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಹೊರತಾದ ಹೇಳಿಕೆಯನ್ನು ನೀಡಿ ಸಂಸದರು ಕಾಲ ಕಳೆಯುತ್ತಿದ್ದಾರೆ ಎಂದು ಟೀಕಿಸಿದರು.

ಹತ್ತು ವರ್ಷಗಳಿಂದ ನಡೆಯುತ್ತಿದ್ದರೂ ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿ ಯನ್ನು ಪೂರ್ಣ ಗೊಳಿಸಲು ಸಾಧ್ಯವಾಗಿಲ್ಲ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇಂತಹ ಸಂಗತಿಗಳ ಬಗ್ಗೆ ಸಂಸದರು ಗಮನಹರಿಸದೆ ಅಭಿವೃದ್ದಿ ವಿಚಾರದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ, ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಜನವರಿ ಅಂತ್ಯದೊಳಗೆ ಉದ್ಘಾಟನೆಯಾಗದಿದ್ದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಗೆ ಮತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಮಾತನಾಡಿ, ಅಸಮರ್ಪಕ ಮೇಲ್ಸೇತುವೆಯ ಕಾಮಗಾರಿಯೂ ಅಸಮರ್ಪಕವಾಗಿದೆ.

ನಿಗದಿತ ಎತ್ತರವಿಲ್ಲದ ಕಾರಣ ಮೇಲ್ಸೇತುವೆಯಡಿಯಲ್ಲಿ ಆಳ ಮಾಡಲು ಹೊರಟಿದ್ದಾರೆ. ಪಡೀಲ್ ಕೆಳ ಸುರಂಗ ಮಾರ್ಗವೂ ಸಮರ್ಪಕವಾಗಿಲ್ಲ. ಮಂಗಳೂರು-ಕಾರ್ಕಳ ಹೆದ್ದಾರಿ ಕಾಮಗಾರಿ ಮಂಜೂರಾದರೂ ಪ್ರಗತಿ ಇಲ್ಲ. ನಂತೂರು, ಕೆಪಿಟಿ ವೃತ್ತದ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ಟೀಕಿಸಿದರು.

ಈ ಸಂದರ್ಭ ಜಿಲ್ಲಾ ಮಾಜಿ ಸಚಿವ ಕೆ.ಅಭಯ ಚಂದ್ರ ಜೈನ್, ಮನಪಾ ಸದಸ್ಯರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜ, ಸಮಿತಿಯ ಸದಸ್ಯರಾದ ನಾಗೇಂದ್ರ, ವಿಶ್ವಾಸ್ ದಾಸ್, ಅಬ್ದುರ್ರವೂಫ್, ನಝೀರ್ ಬಜಾಲ್ ಮತ್ತಿತರರು ಉಪಸ್ಥಿತರಿದ್ದರು .

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English