ಮಡಿಕೇರಿ : ಭತ್ತ ಖರೀದಿ ಸಂಬಂಧ ಬೆಂಬಲ ಬೆಲೆ ಯೋಜನೆಯಡಿ ರೈತರ ಹೆಸರು ನೋಂದಾಯಿಸುವ ಪ್ರಕ್ರಿಯೆಯು ಜನವರಿ 01 ರಿಂದ ಆರಂಭವಾಗಲಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಂಬಲ ಬೆಲೆಯಡಿ ಭತ್ತ ಖರೀದಿ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಭತ್ತ ಬೆಳೆದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರವು ಬೆಂಬಲ ಬೆಲೆ ಘೋಷಿಸಿದ್ದು, ಇದರ ಉಪಯೋಗವನ್ನು ರೈತರು ಪಡೆದುಕೊಳ್ಳುವಂತೆ ಬೆಂಬಲ ಬೆಲೆ ಯೋಜನೆಯಡಿ 2019-20ನೇ ಸಾಲಿನ ಭತ್ತ ಖರೀದಿ ಸಂಬಂಧ ರೈತರ ಹೆಸರು ನೋಂದಣಿ ಪ್ರಕ್ರಿಯೆಯು ಜನವರಿ, 10 ರಿಂದ ಆರಂಭವಾಗಲಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವಂತಾಗಲು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ನಗರದ ಎಪಿಎಂಸಿ ಆವರಣ, ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಎಪಿಎಂಸಿ ಆವರಣ ಮತ್ತು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಎಪಿಎಂಸಿ ಆವರಣದಲ್ಲಿ ಭತ್ತ ಖರೀದಿ ಕೇಂದ್ರ ಸ್ಥಾಪಿಸಲಾಗಿದ್ದು, ಭತ್ತ(ಸಾಮಾನ್ಯ) ರೂ.1,815, ಭತ್ತ(ಗ್ರೇಡ್ ಎ) ರೂ.1,835ದರದಲ್ಲಿ ಖರೀದಿಸಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ ಅವರು ಮಾಹಿತಿ ನೀಡಿದರು.
ರೈತರು ನೋಂದಣಿ ಮಾಡಿಸಲು ಅವರಿಗೆ ಕೃಷಿ ಇಲಾಖೆಯಿಂದ ನೀಡಿರುವ ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ಗುರುತಿನ ಸಂಖ್ಯೆಯೊಂದಿಗೆ ಸಂಬಂಧಿಸಿದ ನೋಂದಣಿ ಕೇಂದ್ರಕ್ಕೆ ಬಂದು ನೋಂದಣಿ ಮಾಡಿಸಿಕೊಳ್ಳಬೇಕು. ಅಂದರೆ ರೈತರು ಬೇರಾವುದೇ ದಾಖಲೆಗಳನ್ನು ತರುವ ಅಗತ್ಯವಿರುವುದಿಲ್ಲ ಎಂದರು.
ಫ್ರೂಟ್ಸ್ ಐ.ಡಿ ಇಲ್ಲದೇ ಇರುವ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಫ್ರೂಟ್ಸ್ ಐ.ಡಿಯನ್ನು ಪಡೆದುಕೊಳ್ಳತಕ್ಕದ್ದು. ಹೆಚ್ಚಿನ ಮಾಹಿತಿಗೆ ದ್ರುತಿ ಡಿ.ಎಂ(ಮಡಿಕೇರಿ)-8971655609, ಸುನೀಲ್ ಕೆ.ಬಿ(ಕುಶಾಲನಗರ)- 9591307614 ಮತ್ತು ಸ್ಮಿತ(ಪೊನ್ನಂಪೇಟೆ)-9480670471 ನ್ನು ಸಂಪರ್ಕಿಸಬಹುದು ಎಂದರು.
ರೈತರ ನೋಂದಣಿಯಾದ ನಂತರ ಭತ್ತದ ತರಲು ದಿನಾಂಕವನ್ನು ನೀಡಲಾಗುವುದು. ಭತ್ತದ ಮಾದರಿಯನ್ನು ಕೃಷಿ ಇಲಾಖೆಯ ಗುಣಮಟ್ಟ ಪರಿಶೋಧಕರು ಪರಿಶೀಲಿಸಿದ ನಂತರ ದಾಸ್ತಾನನ್ನು ತರಬೇಕಾದ ದಿನಾಂಕ, ದಾಸ್ತಾನು ಮಳಿಗೆ ಅಥವಾ ಅಕ್ಕಿ ಗಿರಣಿಯ ಬಗ್ಗೆ ಮಾಹಿತಿಯನ್ನು ಮೊಬೈಲ್ ಸಂದೇಶದ ಮೂಲಕ ರೈತರಿಗೆ ನೀಡಲಾಗುವುದು ಎಂದರು.
ರೈತರಿಂದ ಖರೀದಿ ಕೇಂದ್ರಗಳಲ್ಲಿ ಖರೀದಿಸುವ ಪ್ರಮಾಣದ ಮಿತಿ: ರೈತರು ಬೆಳೆದಿರುವ ಭತ್ತವನ್ನು ಪ್ರತಿ ಎಕರೆಯಿಂದ 16 ಕ್ವಿಂಟಾಲ್, ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಾಲ್ ಭತ್ತ ಖರೀದಿಸಲಾಗುವುದು. ರೈತರ ನೋಂದಣಿ, ಖರೀದಿ ಮತ್ತು ಬೆಂಬಲ ಬೆಲೆ ಪಾವತಿ ಕಾರ್ಯವನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಮೈಸೂರು/ ಕೊಡಗು ಜಿಲ್ಲೆ ಇವರು ನಿರ್ವಹಿಸುತ್ತಾರೆ ಎಂದು ಅವರು ಮಾಹಿತಿ ನೀಡಿದರು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಮೈಸೂರು/ ಕೊಡಗು ಜಿಲ್ಲೆ-9972829289, ಗೋಧಾಮು ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ, ಮಡಿಕೇರಿ-7899585528 ನ್ನು ಸಂಪರ್ಕಿಸಬಹುದು ಎಂದರು.
Click this button or press Ctrl+G to toggle between Kannada and English