ಮಂಗಳೂರು : ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕಾಮಗಾರಿ ಗುತ್ತಿಗೆ ಪಡೆದಿರುವ ನವಯುಗ ಸಂಸ್ಥೆ ವಿರುದ್ಧ ಬಿಜೆಪಿ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿ ನೇತೃತ್ವದಲ್ಲಿ ತಲಪಾಡಿಯ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.
ತಲಪಾಡಿಯಲ್ಲಿರುವ ನವಯುಗ ಉಡುಪಿ ಪ್ರೈವೇಟ್ ಲಿಮಿಟೆಡ್ನ ಟೋಲ್ ಗೇಟ್ ಅನ್ನು ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಜನವರಿ 1ಕ್ಕೆ ಈ ಸೇತುವೆ ಉದ್ಘಾಟನೆ ಆಗಲಿದೆ ಎಂದು ಸಂಸ್ಥೆ ಮಾತು ಕೊಟ್ಟಿತ್ತು. ಆದರೆ, ಇನ್ನೂ ಸಹ ಕಾಮಗಾರಿಯನ್ನು ಪೂರ್ಣಗೊಳಿಸಿಲ್ಲ. ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನಿನ್ನೆ ತಲಪಾಡಿ ಟೋಲ್ ಗೇಟ್ ಅನ್ನು ಒಂದು ತಿಂಗಳು ಬಂದ್ ಮಾಡುವ ಎಚ್ಚರಿಕೆ ನೀಡಿದ್ದರು. ಆದರೆ, ಇಂದು ಬಿಜೆಪಿ ಕಾರ್ಯಕರ್ತರು ಸಾಂಕೇತಿಕವಾಗಿ ಒಂದು ದಿನ ಬಂದ್ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್ ಅವರು, ಜನವರಿ 31ರೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ, ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇಂದು ಸಂಜೆ 6 ಗಂಟೆಯವರೆಗೆ ಟೋಲ್ ಗೇಟ್ ಬಂದ್ ಇರಲಿದೆ. ವಾಹನಗಳಿಂದ ಯಾವುದೇ ಸುಂಕ ಸಂಗ್ರಹಿಸಲಾಗುತ್ತಿಲ್ಲ.
Click this button or press Ctrl+G to toggle between Kannada and English