ಜ.5 ರಂದು ಮಡಪ್ಪಾಡಿಯಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ, ಉಚಿತ ವೈದ್ಯಕೀಯ, ರಕ್ತದಾನ ಶಿಬಿರ

9:32 AM, Friday, January 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

Blood-donate

ಮಂಗಳೂರು : ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ದ.ಕ. ಜಿ.ಪಂ., ತಾ.ಪಂ. ಮತ್ತು ಮಡಪ್ಪಾಡಿ ಗ್ರಾ.ಪಂ. ಸಹಭಾಗಿತ್ವದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಜ.5 ರಂದು ಸುಳ್ಯದ ಮಡಪ್ಪಾಡಿ ಸರಕಾರಿ ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಎ.ಜೆ.ವೈದ್ಯಕೀಯ ಮಹಾ ವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರ ಸಹಭಾಗಿತ್ವದಲ್ಲಿ ಉಚಿತ ವೈದ್ಯಕೀಯಮತ್ತು ದಂತ ಚಿಕಿತ್ಸಾ ಶಿಬಿರ, ಇಂಡಿಯನ್ ರೆಡ್ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕದಿಂದ ರಕ್ತ ಗುಂಪು ವರ್ಗಿಕರಣ , ರಕ್ತದಾನ ಶಿಬಿರ, ಪುತ್ತೂರು ಅಂಚೆ ವಿಭಾಗದ ವತಿಯಿಂದ ಆಧಾರ್ ನೋಂದಣಿ, ತಿದ್ದುಪಡಿ ಸೌಲಭ್ಯ ಮತ್ತಿತರ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ.

ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆ ವತಿಯಿಂದ ಅರಿವು ಕಾರ್ಯಕ್ರಮ,ವಿವಿಧ ಸರಕಾರಿ ಇಲಾಖೆಯ ಮಾಹಿತಿ ಸ್ಟಾಲ್ ಗಳು,ಲೀಡ್ ಬ್ಯಾಂಕ್ ಮಾಹಿತಿ ಕೇಂದ್ರ ಕೂಡಾ ತೆರಯಲಾಗುತ್ತಿದೆ.

ಕಳೆದ ವರ್ಷ 2018 ಡಿ.23ರಂದು ಬೆಳ್ತಂಗಡಿ ತಾಲೂಕಿನ ಕುತ್ಲೂರಿನಲ್ಲಿ ಪತ್ರಕರ್ತರು ಏರ್ಪಡಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿಯಾಗಿತ್ತು. ಗ್ರಾಮದ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವ ಜೊತೆಗೆ ಮುಚ್ಚುವ ಹಂತಕ್ಕೆ ತಲುಪಿದ್ದ ಕುತ್ಲೂರು ಶಾಲೆಯನ್ನು ಅಭಿವೃದ್ಧಿಪಡಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಶಾಲೆಯಲ್ಲಿ ಗ್ರಂಥಾಲಯ, ಪೀಠೋಪಕರಣ, ಕೈತೋಟ , ಶಿಕ್ಷಕರ ಕೊರತೆ ಇದೀಗ ನಿವಾರಣೆಯಾಗಿದೆ. ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗಿದೆ. ಗ್ರಾಮದ ಹಲವು ರಸ್ತೆಗಳು ಅಭಿವೃದ್ಧಿಯಾಗಿದೆ.

2020 ನೇ ಸಾಲಿನಲ್ಲಿ ಪತ್ರಕರ್ತರ ಸಂಘ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಆಯ್ಕೆ ಮಾಡಿದೆ. ಅಂತರ್ಜಲ ವೃದ್ಧಿ, ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಮುಕ್ತ ಗ್ರಾಮವನ್ನಾಗಿ ರೂಪಿಸುವುದು ಪ್ರಮುಖ ಧೇಯವಾಗಿದೆ. ಮಡಪ್ಪಾಡಿ ಗ್ರಾಮ ಪಂಚಾಯತ್ ಉದಯಿಸಿ 25 ವರ್ಷಗಳಾಗಿವೆ. ಗ್ರಾಮ ಎದುರಿಸುತ್ತಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪತ್ರಕರ್ತರ ಸಂಘ ವಿಶೇಷ ಕಾಳಜಿ ವಹಿಸಲಿದೆ.

ಈ ಬಾರಿಯ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪತ್ರಕರ್ತರು, ರಾಜ್ಯ ಮತ್ತು ರಾಷ್ಟ್ರೀಯ ಪತ್ರಕರ್ತ ಸಂಘಟನೆಯ ನಾಯಕರು ಭಾಗವಹಿಸಲಿದ್ದಾರೆ. ಪತ್ರಕರ್ತರ ಗ್ರಾಮ ವಾಸ್ತವ್ಯವನ್ನು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಉದ್ಘಾಟಿಸಲಿದ್ದಾರೆ. ಶಾಸಕ ಅಂಗಾರ ವೈದ್ಯಕೀಯ ಶಿಬಿರ ಉದ್ಘಾಟಿಸಲಿದ್ದಾರೆ. ಕುತ್ಲೂರು ಗ್ರಾಮ ವಾಸ್ತವ್ಯದ ಮಾಹಿತಿ ಪುಸ್ತಕವನ್ನು ಮಾಜಿ ಸಚಿವ ಯು.ಟಿ.ಖಾದರ್ ಬಿಡುಗಡೆಗೊಳಿಸಲಿದ್ದಾರೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಗ್ಗೆ 11 ರಿಂದ 12 ತನಕ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆರ್.ಸೆಲ್ವಮಣಿ ಉಪಸ್ಥಿತಿಯಲ್ಲಿ ಅಧಿಕಾರಿಗಳೊಂದಿಗೆ ಸಾರ್ವಜನಿಕರ ಸಂವಾದ ನಡೆಯಲಿದೆ. ಆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಮಧ್ಯಾಹ್ನ 2 ಗಂಟೆಯಿಂದ 3 ತನಕ ಸ್ಥಳೀಯರೊಂದಿಗೆ ಪತ್ರಕರ್ತರ ಸಂವಾದ, ಆ ಬಳಿಕ ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಸಂವಾದ ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಲಿದ್ದಾರೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಗ್ರಾಮದ ಹಿರಿಯರೊಂದಿಗೆ ಪತ್ರಕರ್ತರ ಚಾವಡಿ ಚರ್ಚೆ, ಗ್ರಾಮ ವಾಸ್ತವ್ಯ ನಡೆಯಲಿದೆ ಎಂದು ದ.ಕ.ಜಿಲ್ಲಾ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English