ಪ್ರವಾಸಿ ತಾಣಗಳಲ್ಲಿ ಸ್ವಚ್ಚತೆಗೆ ಆದ್ಯತೆ ನೀಡಿ : ನಗರಸಭಾ ಪೌರಾಯುಕ್ತ ಎಂ.ಎಲ್. ರಮೇಶ್ ಮನವಿ

10:33 AM, Friday, January 3rd, 2020
Share
1 Star2 Stars3 Stars4 Stars5 Stars
(5 rating, 1 votes)
Loading...

karyagara

ಮಡಿಕೇರಿ : ಮುಂದಿನ ಪೀಳಿಗೆಗೆ ಪ್ರವಾಸಿ ಸ್ಥಳಗಳು ಹಾಗೂ ಪವಿತ್ರ ಯಾತ್ರ ಸ್ಥಳಗಳನ್ನು ರಕ್ಷಣೆಯೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದು ನಗರಸಭೆ ಆಯುಕ್ತ ಎಂ.ಎಲ್.ರಮೇಶ್ ಅವರು ಮನವಿ ಮಾಡಿದ್ದಾರೆ.

ಭಾರತ ಸರ್ಕಾರದ ಪ್ರವಾಸೋದ್ಯಮ ಇಲಾಖೆ ವತಿಯಿಂದ ಸ್ವಚ್ಛ ಭಾರತ್ ಸ್ವಚ್ಛ ಪರ್ಯಟನ್ ಯೋಜನೆಯ ಪ್ರವಾಸೋದ್ಯಮ ಪಾಲುದಾರರಿಗೆ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಯ ಮಹತ್ವದ ಕುರಿತು ಕಾರ್ಯಾಗಾರವು ನಗರದ ಹೊಟೇಲ್ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಗರಸಭೆ ವತಿಯಿಂದ ಸ್ವಚ್ಛ ಭಾರತ್ ಯೋಜನೆಯಡಿ ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು ಇನ್ನು ಹೆಚ್ಚಿನ ಯಶಸ್ಸು ಸಾಧಿಸಬೇಕಿದ್ದು ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಹಸಿಕಸ, ಒಣಕಸ ಪ್ರತ್ಯೇಕಿಸಿ ಸಾರ್ವಜನಿಕರು ತ್ಯಾಜ್ಯ ನಿರ್ವಹಣೆಗೆ ಸಂಪೂರ್ಣವಾಗಿ ಕೈ ಜೋಡಿಸಿ, ಸ್ವಯಂ ಪ್ರೇರಣೆಯಿಂದ ನಗರದ ಸ್ವಚ್ಛತೆಗೆ ಹಾಗೂ ಪ್ರವಾಸಿ ಸ್ಥಳಗಳ ಸ್ವಚ್ಛತೆಗೆ ಮುನ್ನುಡಿ ಬರೆಯಬೇಕು ಎಂದು ಅವರು ತಿಳಿಸಿದರು.

ಹೋಂ ಸ್ಟೇ ಅಸೋಸಿಯೇಷನ್‌ನ ಅಧ್ಯಕ್ಷರಾದ ಅನಂತಶಯನ ಅವರು ಮಾತನಾಡಿ ಸ್ವಚ್ಛ ಭಾರತ್ ಯೋಜನೆಯು ಒಂದು ಅದ್ಭುತ ಯೋಜನೆಯಾಗಿದ್ದು ಯುವಜನತೆ ಇದರ ಅನುಷ್ಠಾನದ ಬಗ್ಗೆ ಸಂಪೂರ್ಣ ಕಾರ್ಯಪ್ರವೃತರಾಗಬೇಕು ಎಂದು ತಿಳಿಸುತ್ತಾ ಮಡಿಕೇರಿ ನಗರದ ಕಸ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ನಗರಸಭ ಆಯುಕ್ತರಿಗೆ ಮನವಿ ಮಾಡಿದರು.

ಕೊಡಗು ಟ್ರಾವೆಲ್ಸ್ ಅಸೋಸಿಯೇಷನ್‌ನ ಅಧ್ಯಕ್ಷರಾದ ಚೆಯ್ಯಂಡ ಸತ್ಯ ಅವರು ಮಾತನಾಡಿ ಜಿಲ್ಲೆಯಲ್ಲಿ ಅನಧಿಕೃತ ಪ್ರವಾಸೋದ್ಯಮದಿಂದ ಮಡಿಕೇರಿಯ ಸ್ವಚ್ಛತೆಗೆ ಧಕ್ಕೆ ಆಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದರು.

ಸ್ವಚ್ಛ ಭಾರತ್ ಸ್ವಚ್ಛ ಪರ್ಯಟನ್ ಕಾರ್ಯಕ್ರಮದ ಯೋಜನಾ ನಿರ್ದೇಶಕರಾದ ದೀಪಿಕ ಅವರು ಮಾತನಾಡಿ ಸ್ವಚ್ಛತೆಗೆ ಅತ್ಯಂತ ಮಹತ್ವದ ಪಾತ್ರವಿದ್ದು, ಪ್ರತಿಯೊಬ್ಬರು ಇದನ್ನು ಅರಿಯಬೇಕು. ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಗೆ ಪ್ರಥಮ ಆದ್ಯತೆ ನೀಡದಿದ್ದಲ್ಲಿ ಪ್ರವಾಸೋದ್ಯಮ ತನ್ನ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಯುವಜನತೆ ಪ್ರವಾಸಿ ಸ್ಥಳಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಅವರು ತಿಳಿಸಿದರು.

ಸ್ವಚ್ಛ ಭಾರತ್ ಸ್ವಚ್ಛ ಪರ್ಯಟನ್ ಕಾರ್ಯಕ್ರಮದಡಿ ದೇಶಾದ್ಯಂತ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಸ್ವಚ್ಛತೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸ್ಥಳಿಯರು ತಮ್ಮ ವ್ಯಾಪ್ತಿಯ ಪ್ರವಾಸಿ ಸ್ಥಳಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಪ್ರವಾಸಿ ಸ್ಥಳಗಳನ್ನು ಸಂರಕ್ಷಿಸಬೇಕು ಎಂದರು.

ಕಾರ್ಯಗಾರದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ಹೋಂ ಸ್ಟೆ ಅಸೋಸಿಯೇಷನ್‌ನ ಮೋಂತಿ ಗಣೇಶ್ ಇತರರು ಇದ್ದರು. ಪ್ರವಾಸೋದ್ಯಮ ಇಲಾಖೆಯ ಚೇತನ್ ನಿರೂಪಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English