ಮಂಗಳೂರು : ಎಸ್ ಕ್ಯೂಬ್ ಆರ್ಟ್ ಗ್ಯಾಲರಿ ಮಂಗಳೂರು ವಿಮಾನ ನಿಲ್ದಾಣವನ್ನು ಕಲಾತ್ಮಕ ಕೃತಿಗಳಿಂದ ಸುಂದರಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ಪ್ರತಿಷ್ಠಿತ ಯೋಜನೆಯನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.
ಎಎಐ ವಿಮಾನ ನಿಲ್ದಾಣದ ಆವರಣದಲ್ಲಿ ವಿವಿಧ ಕಲಾಕೃತಿಗಳನ್ನು ವಿನ್ಯಾಸಗೊಳಿಸಲು ಟೆಂಡರ್‌ಗಳನ್ನು ಆಹ್ವಾನಿಸಿತ್ತು. ಎಸ್ ಕ್ಯೂಬ್ ಆರ್ಟ್ ಗ್ಯಾಲರಿ ಸ್ಪರ್ಧಾತ್ಮಕ ಬಿಡ್ ಮಾಡಿತ್ತು. ತರುವಾಯ ಆಯ್ಕೆ ಮಂಡಳಿಯ ಮುಂದೆ ಪ್ರಸ್ತುತಿಯನ್ನು ನೀಡಿತು. ಆಯ್ಕೆ ಮಂಡಳಿಯ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ ಕಾರ್ಯವನ್ನು ಎಸ್ ಕ್ಯೂಬ್ ಆರ್ಟ್ ಗ್ಯಾಲರಿಗೆ ನೀಡಲಾಯಿತು. ಟೆಂಡರ್ ಕರೆಯಲ್ಪಟ್ಟ ವಿಮಾನ ನಿಲ್ದಾಣದ ನಾಲ್ಕು ವಲಯಗಳಲ್ಲಿ, ಎಸ್ ಕ್ಯೂಬ್ ಆರ್ಟ್ ಗ್ಯಾಲರಿ ಎರಡು ವಲಯಗಳ ಆರು ಕಲಾಕೃತಿಗಳಿಗೆ ಗುತ್ತಿಗೆ ಪಡೆಯಿತು.
ಎಸ್ ಕ್ಯೂಬ್ ಆರ್ಟ್ ಗ್ಯಾಲರಿ ಪ್ರಸ್ತುತಪಡಿಸಿದ ವಿಷಯಗಳು ಕರಾವಳಿ ಕರ್ನಾಟಕದ ಜನರ ತುಳು ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುತ್ತವೆ. ಪ್ರದರ್ಶಿಸಲಾದ ಆರು ಕಲಾಕೃತಿಗಳು ಹೀಗಿವೆ:
1. ‘ಹ್ಯೂಮನ್ ಹ್ಯಾಂಡ್ ಫ್ಲೈಯಿಂಗ್ ಪೇಪರ್ ಪ್ಲೇನ್’ – ವಿಮಾನ ನಿಲ್ದಾಣದ ಹೊರ ಆವರಣದ ವೃತ್ತದಲ್ಲಿ ಫೈಬರ್ ಗ್ಲಾಸ್ ಮತ್ತು ಸ್ಟೀಲ್ ಮೆಟೀರಿಯಲ್‌ನಿಂದ ರಚಿಸಿದ ಶಿಲ್ಪಕಲೆಯನ್ನು ಅಳವಡಿಸಲಾಗಿದೆ. ಇದು ವಿಮಾನ ಪ್ರಯಾಣಿಕರ ಕನಸುಗಳು ಮತ್ತು ಆಕಾಂಕ್ಷೆಗಳನ್ನು ಸೂಚಿಸುವ, ಗಾತ್ರದಲ್ಲಿ ವಾಸ್ತವಕ್ಕಿಂತ ದೊಡ್ಡದಾದ ಶಿಲ್ಪಕಲೆ. ಕಲಾವಿದ: ಹರೀಶ್ ಕೊಡಿಯಾಲ್‌ಬೈಲ್, ಮಂಗಳೂರು
2. ’ಕಂಬಳ’ – ವಿಮಾನ ನಿಲ್ದಾಣದ ನಿರ್ಗಮನ ಆವರಣದಲ್ಲಿ ಫೈಬರ್ ಗ್ಲಾಸ್ ಶಿಲ್ಪವನ್ನು ಸ್ಥಾಪಿಸಲಾಗಿದೆ. ಈ ಶಿಲ್ಪವು ಈ ಪ್ರದೇಶದ ಅಪ್ರತಿಮ ಜಾನಪದ ಕ್ರೀಡೆಯಾದ ’ಕಂಬಳ’ ವನ್ನು ಪ್ರಯಾಣಿಕರಿಗೆ ಮತ್ತು ಪ್ರವಾಸಿಗರಿಗೆ ಪರಿಚಯಿಸಲು ಉದ್ದೇಶಿಸಿದೆ. ಕಲಾವಿದ: ಹರೀಶ್ ಕೊಡಿಯಾಲ್‌ಬೈಲ್, ಮಂಗಳೂರು
3. ‘ಫಿಶರ್‌ಮ್ಯಾನ್ ವಿಥ್ ಬೋಟ್’ – ವಿಮಾನ ನಿಲ್ದಾಣದ ಆವರಣದ ಪ್ರವೇಶದ್ವಾರದಲ್ಲಿ ಫೈಬರ್ ಗ್ಲಾಸ್ ಮತ್ತು ಸ್ಟೀಲ್ ಮೆಟೀರಿಯಲ್‌ನಿಂದ ರಚಿಸಿದ ಶಿಲ್ಪವನ್ನು ಸ್ಥಾಪಿಸಲಾಗಿದೆ. ಇದು ಕರಾವಳಿ ಪ್ರದೇಶದ ಮೀನುಗಾರಿಕೆ ಸಂಸ್ಕೃತಿಯನ್ನು ಸಂಕೇತಿಸುತ್ತದೆ, ಇದು ಮೀನುಗಾರರ ಆಕಾಂಕ್ಷೆಗಳು, ಧೀರತನ ಮತ್ತು ಸಾಹಸದ ಜೀವನ ಮತ್ತು ದೈನಂದಿನ ಹೋರಾಟಗಳನ್ನು ಚಿತ್ರಿಸುತ್ತದೆ. ಕಲಾವಿದ: ಹರೀಶ್ ಕೊಡಿಯಾಲ್‌ಬೈಲ್, ಮಂಗಳೂರು
4. ‘ಟೈಗರ್ ಡ್ಯಾನ್ಸ್’ – ವಿಮಾನ ನಿಲ್ದಾಣದ ಆಗಮನದ ಆವರಣದಲ್ಲಿ ಫೈಬರ್ ಗ್ಲಾಸ್ ಮತ್ತು ಸ್ಟೀಲ್ ಮೆಟೀರಿಯಲ್‌ನಿಂದ ರಚಿಸಿದ ಶಿಲ್ಪವನ್ನು ಸ್ಥಾಪಿಸಲಾಗಿದೆ. ಈ ಕೃತಿಯು ವಿಶ್ವಪ್ರಸಿದ್ಧ ’ಮಂಗಳೂರು ಪಿಲಿವೇಷ’ ನರ್ತಕರನ್ನು ವಿವಿಧ ವಿಶಿಷ್ಟ ಭಂಗಿಗಳಲ್ಲಿ ಪ್ರವಾಸಿಗರಿಗೆ ತೋರಿಸುತ್ತದೆ. ಕಲಾವಿದ: ಹರೀಶ್ ಕೊಡಿಯಾಲ್‌ಬೈಲ್, ಮಂಗಳೂರು
5. ‘ಫೋಕ್ ಆರ್ಟ್ ಫಾರ್ಮ್ಸ್’ – ವಿಮಾನ ನಿಲ್ದಾಣದ ದೇಶೀಯ ಮತ್ತು ಅಂತಾರಾಷ್ಟ್ರೀಯ ಕಾರಿಡಾರ್‌ಗಳಲ್ಲಿ ತುಳುನಾಡು ಜಾನಪದ, ಸಾಂಸ್ಕೃತಿಕ ವಿಷಯಗಳೊಂದಿಗೆ ಆರು ಪ್ರತ್ಯೇಕ ಟೆರಾಕೋಟಾ ಶಿಲ್ಪಗಳನ್ನು ಸ್ಥಾಪಿಸಲಾಗಿದೆ. ಕಲಾವಿದ: ವೆಂಕಿ ಪಲಿಮರು, ಉಡುಪಿ
6. ‘ಜೈನ್ ಮಿನಿಯೇಚರ್ ಪೈಂಟಿಂಗ್ಸ್’ – ಜೈನ್ ಚಿಕಣಿ ವರ್ಣಚಿತ್ರಗಳು (18/6 ಅಡಿಗಳು) – ನಿರ್ಗಮನ ದ್ವಾರದ ಎರಡೂ ಬದಿಗಳಲ್ಲಿ ಗೋಡೆಯ ಮೇಲೆ ಪ್ರದರ್ಶಿಸಲಾದ ಎರಡು ಅಕ್ರಿಲಿಕ್ ಮಾಧ್ಯಮದ ಕ್ಯಾನ್ವಾಸ್ ಕೃತಿಗಳು. ಮೂಡಬಿದ್ರಿ ಜೈನ ಮಠ ಮತ್ತು ಶ್ರವಣಬೆಳಗೋಳ ಮಠದಲ್ಲಿನ ಅಧಿಕೃತ ಸಾಂಪ್ರದಾಯಿಕ ಜೈನ ವರ್ಣಚಿತ್ರಗಳನ್ನು ಆಧರಿಸಿ ಕೃತಿಯನ್ನು ರಚಿಸಲಾಗಿವೆ.
ಕಲಾವಿದೆ: ರೇಷ್ಮಾ ಎಸ್. ಶೆಟ್ಟಿ, ಮಂಗಳೂರು
ಗುತ್ತಿಗೆಯ ಒಟ್ಟು ಮೌಲ್ಯ ರೂ 56 ಲಕ್ಷ ಆಗಿತ್ತು. ಆರು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಂಡು 2019 ರ ಜುಲೈ ತಿಂಗಳಲ್ಲಿ ಮುಕ್ತಾಯಗೊಂಡಿದೆ. ಈ ಯೋಜನೆಯಲ್ಲಿ ಭಾಗವಹಿಸಲು ಮತ್ತು ಪ್ರದೇಶದ ಕಲಾತ್ಮಕ ಪ್ರತಿಭೆಗಳನ್ನು ಪ್ರದರ್ಶಿಸಲು ಅವಕಾಶ ನೀಡಿದ ಭಾರತ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಎಸ್ ಕ್ಯೂಬ್ ಆರ್ಟ್ ಗ್ಯಾಲರಿ ಕೃತಜ್ಞವಾಗಿದೆ.
Click this button or press Ctrl+G to toggle between Kannada and English