ಬೆಂಗಳೂರು : ಬಹಳ ವರ್ಷಗಳಿಂದ ಬಾಕಿ ಇರುವ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮತ್ತೆ ರಸ್ತೆಗಿಳಿದಿರುವ ರಾಜ್ಯದ ನಾನಾ ಜಿಲ್ಲೆಗಳ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ನತ್ತ ಹೊರಟ ಬೃಹತ್ ರ್ಯಾಲಿಯಲ್ಲಿ ಸಾವಿರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ‘ಗುಲಾಬಿ ತಂಡ’ದ 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಈಗಾಗಲೇ ಸರ್ಕಾರ ಭರವಸೆ ನೀಡಿದ್ದು, ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಸ್ವಲ್ಪ ಮಟ್ಟಿಗಿನ ಜಯ ಸಿಕ್ಕಂತಾಗಿದೆ.
ಹಾವೇರಿ, ರಾಯಚೂರು, ಹುಬ್ಬಳ್ಳಿ, ಹಿರೇಕೆರೂರು ಸೇರಿ ಹಲವು ಜಿಲ್ಲೆಗಳಿಂದ ಆಶಾ ಕಾರ್ಯಕರ್ತೆಯರು ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ ವರ್ಷ ಜೂನ್ ತಿಂಗಳಲ್ಲಿ ಕೂಡ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದರು. ಇದೀಗ ಮತ್ತೆ ಪ್ರತಿಭಟನೆ ನಡೆಸುತ್ತಿದ್ದು, 30 ಸಾವಿರಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಪಾಲ್ಗೊಂಡು ತಮ್ಮ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಆಶಾ ಕಾರ್ಯಕರ್ತೆಯರ 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದಾರೆ. ಆಶಾ ಕಾರ್ಯಕರ್ತೆಯರು ತುಂಬ ಕಷ್ಟಪಟ್ಟಿದ್ದಾರೆ. ಅವರ ಜೊತೆ ನಾನು ಚರ್ಚಿಸಿದ್ದೇನೆ. ಕೇಂದ್ರ ಮತ್ತು ರಾಜ್ಯದ ವೇತನವನ್ನು ಒಂದೇ ದಿನ ಬಿಡುಗಡೆ ಮಾಡಲು ಸಮ್ಮತಿ ನೀಡಿದ್ದೇನೆ. ಪ್ರತಿ ತಿಂಗಳು 10ನೇ ತಾರೀಕಿನೊಳಗೆ ವೇತನ ನೀಡಲಾಗುವುದು. ದಯವಿಟ್ಟು ಆಶಾ ಕಾರ್ಯಕರ್ತೆಯರು ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಶ್ರೀರಾಮುಲು ಮನವಿ ಮಾಡಿದ್ದಾರೆ.
12 ಸಾವಿರ ರೂ. ಮಾಸಿಕ ವೇತನ ನೀಡಬೇಕು ಎಂದು ಆಗ್ರಹ ಮಾಡಲಾಗಿತ್ತು. ಆಶಾ ಕಾರ್ಯಕರ್ತೆಯರಿಗೆ 10 ಸಾವಿರ ರೂ. ವೇತನ ನೀಡಲು ನಾನು ಬದ್ಧನಾಗಿದ್ದೇನೆ. ನಾನೆಷ್ಟು ದಿನ ಸಚಿವನಾಗಿರ್ತೀನೋ ಗೊತ್ತಿಲ್ಲ.ಆದರೆ 10 ಸಾವಿರ ವೇತನ ಕೊಡಲು ಸಿದ್ಧನಿದ್ದೇನೆ. ಈ ಬಗ್ಗೆ ಸಿಎಂ ಜೊತೆ ನಾನು ಚರ್ಚಿಸುತ್ತೇನೆ. ಆಶಾ ಕಾರ್ಯಕರ್ತರ ಜೊತೆ ನಾನಿದ್ದೇನೆ. ಸಾಧ್ಯವಾದಷ್ಟು ಅವರ ಬೇಡಿಕೆಗಳನ್ನು ಈಡೇರಿಸುತ್ತೇನೆ. 10 ಬೇಡಿಕೆಗಳಲ್ಲಿ 7 ಬೇಡಿಕೆಗಳನ್ನು ಈಡೇರಿಸುತ್ತೇನೆ. ಲಿಖಿತ ರೂಪದಲ್ಲಿ ಭರವಸೆ ನೀಡಲು ಸಿದ್ಧ. ಆಶಾ ಕಾರ್ಯಕರ್ತೆಯರಿಗೆ ನೀಡಿರುವ ಭರವಸೆಗಳನ್ನು ಈಡೇರಿಸಲು ಬಜೆಟ್ವರೆಗೆ ಕಾಯಬೇಕು. ಈಗ 1 ಸಾವಿರ ರೂ. ಹೆಚ್ಚಳಕ್ಕೆ ಪ್ರಸ್ತಾಪಿಸಿದ್ದೇನೆ ಎಂದು ಹೇಳಿದ್ದಾರೆ.
Click this button or press Ctrl+G to toggle between Kannada and English