ಜಮ್ಮು : ಭದ್ರತಾ ಪಡೆಯು ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಉಗ್ರ ನಿಸಾರ್ ಅಹಮದ್ ದಾರ್ನನ್ನು ಶ್ರೀನಗರದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಿದೆ. ಉಗ್ರ ಅಡಗಿ ಕುಳಿತಿದ್ದಾನೆ ಎಂಬ ಗುಪ್ತಚರ ಇಲಾಖೆಯ ಖಚಿತ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿತ್ತು.
ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಶ್ರೀನಗರದ ಮಹಾರಾಜ ಹರಿ ಸಿಂಗ್ ಆಸ್ಪತ್ರೆಯಲ್ಲಿ ಉಗ್ರನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇತ್ತೀಚೆಗೆ ಅಂದರೆ 2019 ನವೆಂಬರ್ನಲ್ಲಿ ಕುಲ್ಲಾನ್ ಗಂದೇರ್ಬಲ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ನಿಸಾರ್ ತಪ್ಪಿಸಿಕೊಂಡಿದ್ದ. ಆತ ಭದ್ರತಾ ಪಡೆ ಮೇಲೆ ದಾಳಿ ನಡೆಸಲು ಪ್ಲಾನ್ ಮಾಡಿದ್ದ ಎನ್ನಲಾಗಿತ್ತು.
ಇದಾದ ಬಳಿಕ, ಭದ್ರತಾ ಪಡೆ ಸ್ಥಳೀಯ ಪೊಲೀಸರ ಜತೆ ಸೇರಿ ಶ್ರೀನಗರದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಕಾರ್ಯಾಚರಣೆ ಯಶಸ್ವಿಯಾಗಿದ್ದು, ಶುಕ್ರವಾರ ಎಲ್ಇಟಿ ಸಂಘಟನೆಗೆ ಸೇರಿದ ಉಗ್ರ ನಿಸಾರ್ನನ್ನು ಬಂಧಿಸಿದ್ದಾರೆ. ಇನ್ನು, ಉಗ್ರನ ಬಳಿ ಇದ್ದ ಅಪಾರ ಪ್ರಮಾಣದ ಮದ್ದು-ಗುಂಡುಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.
ನಿಸಾರ್ ಅಹಮದ್ ದಾರ್ 23 ವರ್ಷದವನಾಗಿದ್ದು, ಆತನ ವಿರುದ್ಧ 8 ಎಫ್ಐಆರ್ ದಾಖಲಾಗಿವೆ. ಉಗ್ರರ ಪಟ್ಟಿಯಲ್ಲಿರುವ ಈತ ಈಗಾಗಲೇ ಎರಡು ಬಾರಿ ಪಬ್ಲಿಕ್ ಸೇಫ್ಟಿ ಆ್ಯಕ್ಟ್ ಅಡಿಯಲ್ಲಿ ಪೊಲೀಸರ ವಶವಾಗಿದ್ದ ಎಂದು ಮೂಲಗಳು ತಿಳಿಸಿವೆ.
ಅಷ್ಟೇ ಅಲ್ಲದೇ, ನಿಸಾರ್ ಉತ್ತರ ಕಾಶ್ಮೀರದಲ್ಲಿ ಹೆಚ್ಚು ಸಕ್ರಿಯವಾಗಿರುವ ಎಲ್ಇಟಿ ಉಗ್ರ ಸಲೀಂ ಪರಾಯ್ನ ಜೊತೆ ಇದ್ದ. ಉಗ್ರ ಚಟುವಟಿಕೆಗಳಲ್ಲಿ ಹೆಚ್ಚು ಭಾಗಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಯೋಜಿತ ಕಾರ್ಯಾಚರಣೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭದ್ರತಾ ಪಡೆಗಳು ಈಗ ಆತನನ್ನು ವಿಚಾರಣೆ ನಡೆಸುತ್ತಿವೆ.
Click this button or press Ctrl+G to toggle between Kannada and English