ಮೂಡುಬಿದಿರೆ : 2೦ಕಿಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್ ನಾಲ್ಕನೇ ದಿನ 5 ಸಾವಿರ ಮೀ. ಓಟದಲ್ಲಿಯೂ ಕೂಟ ದಾಖಲೆ ನಿರ್ಮಿಸಿದ್ದಾರೆ.
ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ನ ನಾಲ್ಕನೇ ದಿನವಾದ ಭಾನುವಾರ ಪುರುಷರ ವಿಭಾಗದ 5 ಸಾವಿರ ಮೀಟರ್(5ಕಿ.ಮೀ.) ಓಟವನ್ನು 14ನಿಮಿಷ 17.77ಸೆಕೆಂಡ್ ನಲ್ಲಿ ಕ್ರಮಿಸಿದ ನರೇಂದ್ರ ಪ್ರತಾಪ್ ಸಿಂಗ್, ಪಂಜಾಬಿ ವಿವಿಯ ಸುರೇಶ್ ಕುಮಾರ್ (14 ನಿಮಿಷ 19.39ಸೆಕೆಂಡ್) ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮುರಿದ್ದಾರೆ. ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ಆದೇಶ್ 14ನಿಮಿಷ 30.02ಸೆಕೆಂಡ್‌ಗಳಲ್ಲಿ ಕ್ರಮಿಸಿ ಬೆಳ್ಳಿಯ ಪದಕ ಮುಡಿಗೇರಿಸಿಕೊಂಡರೆ, ಸಾವಿತ್ರಿ ಬಾಯಿ ಪುಲೆ ವಿವಿಯ ತದ್ವಿ ಕಿಸನ್ 14ನಿಮಿಷ 36.77ಸೆಕೆಂಡ್ ಕ್ರಮಿಸುವ ಮೂಲಕ ಕಂಚಿನ ಪದಕ ತನ್ನದಾಗಿಸಿಕೊಂಡರು.
100ಮೀ. ಹರ್ಡಲ್ಸ್ ಕೂಟ ದಾಖಲೆ
ಮಹಿಳೆಯರ ವಿಭಾಗದ 100ಮೀ. ಹರ್ಡಲ್ಸ್‌ನಲ್ಲಿ ಆಚಾರ್ಯ ನಾಗರ್ಜುನ ವಿವಿಯ ಜ್ಯೋತಿ ವೈ ಕೂಟ ದಾಖಲೆ ನಿರ್ಮಿಸಿದ್ದಾರೆ.13.037 ಸೆಕೆಂಡ್ಸ್‌ನಲ್ಲಿ ಗುರಿ ಮುಟ್ಟಿದ ಜ್ಯೋತಿ, ಈ ಹಿಂದೆ ಮದ್ರಾಸ್ ವಿವಿಯ ಜಿ ಗಾಯತ್ರಿ (13.72ಸೆ) ಹಾಗೂ ವಿನೋಭಾ ಬಾವೆ ವಿವಿಯ ಸಪ್ನ ಕುಮಾರಿ (13.72ಸೆ) ಅವರ ಹೆಸರಲ್ಲಿದ್ದ ದಾಖಲೆಯನ್ನು ಮುರಿದಿದ್ದಾರೆ. ಅಲ್ಲದೇ ಅನುರಾಧಾ ಭಸ್ವಾಲ್ ಅವರ ಹೆಸರಲ್ಲಿದ್ದ ರಾಷ್ಟ್ರೀಯ ದಾಖಲೆ(13.38ಸೆ)ಗಿಂತ ಉತ್ತಮ ಸಾಧನೆ ಮಾಡಿದ್ದಾರೆ.
ನಾಲ್ಕನೇ ದಿನ ಎರಡು ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು ಚಾಂಪಿಯನ್‌ಷಿಪ್‌ನ ಒಟ್ಟು ಕೂಟ ದಾಖಲೆಗಳ ಸಂಖ್ಯೆ 7ಕ್ಕೇರಿದೆ.
ನಗದು ಪುರಸ್ಕಾರ ಘೋಷಣೆ
ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ನಗದು ಬಹುಮಾನ ಘೋಷಿಸಿದ್ದಾರೆ. ಕೂಟ ದಾಖಲೆ ನಿರ್ಮಿಸಿದವರಿಗೆ ರೂ. 25 ಸಾವಿರ, ಚಿನ್ನದ ಪದಕ ಪಡೆದವರಿಗೆ 15 ಸಾವಿರ, ರಜತ ಪದಕಕ್ಕೆ 10ಸಾವಿರ ಹಾಗೂ ಕಂಚಿನ ಪದಕ ವಿಜೇತರಿಗೆ 5 ಸಾವಿರ ನಗದು ಬಹುಮಾನ ನೀಡುವುದಾಗಿ ಡಾ.ಎಂ.ಮೋಹನ್ ಆಳ್ವ ಘೋಷಿಸಿದ್ದಾರೆ.
ಮೊದಲ ಸ್ಥಾನ ಉಳಿಸಿಕೊಂಡ ಮಂಗಳೂರು
ಕೂಟದ ನಾಲ್ಕನೇ ದಿನದ ಅಂತ್ಯಕ್ಕೆ 127ಅಂಕಗಳೊಂದಿಗೆ ಮೊದಲ ಸ್ಥಾನ ಉಳಿಸಿಕೊಂಡಿದೆ.70 ಅಂಕಗಳೊಂದಿಗೆ ಮದ್ರಾಸ್ ವಿವಿ ದ್ವಿತೀಯ ಸ್ಥಾನದಲ್ಲಿದ್ದು, ಕೊಟ್ಟಾಯಂನ ಮಹಾತ್ಮ ಗಾಂಧಿ ವಿವಿ 47 ಅಂಕ ಪಡೆದು ತೃತೀಯ ಸ್ಥಾನದಲ್ಲಿದೆ. ಇದುವರೆಗೆ ಮಂಗಳೂರು ವಿವಿ ಹೆಸರಲ್ಲಿ ಮೂರು ಕೂಟ ದಾಖಲೆಗಳು ನಿರ್ಮಾಣಗೊಂಡಿದ್ದು,6ಚಿನ್ನ, 7 ರಜತ ಹಾಗೂ 4 ಕಂಚಿನ ಪದಕಗಳನ್ನು ಪಡೆದಿದೆ.
ಮೂವರಿಂದ ಡಬಲ್ ಧಮಾಕ
ಕೂಟದ ನಾಲ್ಕನೇ ದಿನಕ್ಕೆ ಮೂವರು ತಮ್ಮ ಎರಡನೇ ಚಿನ್ನದ ಪದಕವನ್ನು ಬೇಟೆಯಾಡಿದರು.. ಪುರುಷರ ವಿಭಾಗದಲ್ಲಿ ಮಂಗಳೂರು ವಿವಿಯ ನರೇಂದ್ರ ಪ್ರತಾಪ್(20ಕಿ.ಮೀ ನಡಿಗೆ, 5 ಸಾವಿರ ಮೀ. ಓಟ), ಮಹಿಳೆಯರ ವಿಭಾಗದಲ್ಲಿ ಪುಣೆಯ ಸಾವಿತ್ರಿ ಬಾಯಿಪುಲೆ ವಿವಿಯ ಕೋಮಲ್ ಜಗದಾಲೆ( 3 ಸಾವಿರ ಮೀ. ಸ್ಟೀಪಲ್ ಚೇಸ್, 5 ಸಾವಿರ ಮೀ. ಓಟ) ಹಾಗೂ ಆಚಾರ್ಯ ನಾಗರ್ಜುನ ವಿವಿಯ ಜ್ಯೋತಿ ವೈ(100 ಮೀ., 100 ಮೀ. ಹರ್ಡಲ್ಸ್) ಎರಡು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದಾರೆ.
ಜ.2ರಂದು ಆರಂಭಗೊಂಡಿದ್ದ ಕ್ರೀಡಾಕೂಟಕ್ಕೆ ಇಂದು ತೆರೆಬೀಳಲಿದೆ. ಕೊನೆಯ ದಿನ ಒಟ್ಟು 14 ಸ್ಪರ್ಧೆಗಳ ಅಂತಿಮ ಹಣಾಹಣಿ ನಡೆಯಲಿದ್ದು ಮಧ್ಯಾಹ್ನ 3 ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ರಾಜೀವ್ ಗಾಂಧೀ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಎಸ್. ಸಚ್ಚಿದಾನಂದ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್ ಹಾಗೂ ಕೆ.ಅಮರನಾಥ್ ಶೆಟ್ಟಿ ಮುಖ್ಯ ಅತಿಥಿಯಾಗಿದ್ದಾರೆ.
Click this button or press Ctrl+G to toggle between Kannada and English