ನವದೆಹಲಿ : ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್ನೊಳಗೆ ಕಿಡಿಗೇಡಿಗಳಿಂದ ತೀವ್ರ ಹಲ್ಲೆಗೊಳಗಾದ ಜೆಎನ್ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್ ಸೇರಿದಂತೆ 19 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಮುಸುಕುಧಾರಿಗಳು ಕ್ಯಾಂಪಸ್ಗೆ ನುಗ್ಗಿ ಹಿಂಸಾಚಾರ ನಡೆಸುವ ಮುನ್ನ ದಿನ ಜನವರಿ 4ನೇ ತಾರಿಕು ಜೆಎನ್ಯು ಸರ್ವರ್ ಕೊಠಡಿಯಲ್ಲಿ ಐಶೆ ಘೋಷ್ ಸೇರಿದಂತೆ 19 ಮಂದಿ ದಾಂದಲೆ ನಡೆಸಿದರು. ಈ ಆರೋಪದ ಮೇಲೆ ಐಶೆ ಘೋಷ್ ಮತ್ತಿತರ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಕ್ಯಾಂಪಸ್ನಲ್ಲಿ ಹಿಂಸಾಚಾರ ತಡೆಯಲು ಪೊಲೀಸರು ಪ್ರಯತ್ನಿಸಲಿಲ್ಲ ಎಂದು ಟೀಕೆಗಳು ಕೇಳಿ ಬಂದ ಬೆನ್ನಲ್ಲೀಗ ಇಂತಹುದ್ದೊಂದು ಬೆಳವಣಿಗೆ ನಡೆದಿದೆ. ಸದ್ಯ ತೀವ್ರ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಮೇಲೆಯೆ ಎಫ್ಐಆರ್ ದಾಖಲಿಸಿಕೊಂಡ ಪೊಲೀಸರ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.
ಈಗಾಗಲೇ ಜೆಎನ್ಯು ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ಸೇರಿದಂತೆ ಎಡಪಕ್ಷಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಈ ಬೆನ್ನಲ್ಲೇ ಎಚ್ಚೆತ್ತ ದೆಹಲಿ ಪೊಲೀಸರು ಪ್ರಕರಣ ಸಂಬಂಧ ಕಿಡಿಗೇಡಿಗಳ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇಲ್ಲಿಯವರೆಗೂ ಯಾರ ಬಂಧನವೂ ಆಗಿಲ್ಲ. ದಾಳಿಕೋರರ ಬೆಂಬಲಕ್ಕೆ ದೆಹಲಿ ಪೊಲೀಸರೇ ನಿಂತಿದ್ದಾರೆ ಎಂಬುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಆರೋಪ.
ಜೆಎನ್ಯು ಹಿಂಸಾಚಾರ ಪ್ರಕರಣ ಸಂಬಂಧಿಸಿದಂತೆ ಯಾವುದೇ ಮಹತ್ವದ ಸುಳಿವುಗಳು ಸಿಕ್ಕಿಲ್ಲ. ಅದಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್’ಗೆ ಹಸ್ತಾಂತರಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ಧಾರೆ. ಈ ಮಧ್ಯೆಯೇ ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರೆಯಲಿದೆ ಎಂದು ಪ್ರತಿಭಟನಾನಿರ ವಿದ್ಯಾರ್ಥಿಗಳು ತಿಳಿಸಿದ್ದಾರೆ.
ಜೆಎನ್ಯು ಕ್ಯಾಂಪಸ್ನಲ್ಲಿ ಶಬರಮತಿ ಹಾಸ್ಟೆಲ್ ಬಳಿ ಐಶ್ ಘೋಷ್ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು. 50ಕ್ಕೂ ಹೆಚ್ಚು ಮಂದಿ ಗೂಂಡಾಗಳು ಗುಂಪು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ವಾಹನಗಳನ್ನು ಧ್ವಂಸಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಜೆಎನ್ಯು ವಿದ್ಯಾರ್ಥಿ ಸಂಘ, ಎಬಿವಿಪಿ ಕಾರ್ಯಕರ್ತರೇ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಸಂಘದ ಮುಖ್ಯಸ್ಥರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
Click this button or press Ctrl+G to toggle between Kannada and English