ಮಡಿಕೇರಿ : ಜಿಲ್ಲೆಯಲ್ಲಿ ಶೈಕ್ಷಣಿಕ ಚಟುವಟಿಕೆಗಳ ಆಯೋಜನೆ ಉದ್ದೇಶದಿಂದ ಆರಂಭವಾಗಿರುವ ಕೊಡಗು ವಿಕಸನ ಸಂಸ್ಥೆಯ ಲಾಂಛನವನ್ನು ಭಾನುವಾರ ಬಿಡುಗಡೆಗೊಳಿಸಲಾಯಿತು.
ಬೆಂಗಳೂರಿನ ರಾಜಾಜಿನಗರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಅವರು ಲೋಗೋ ಬಿಡುಗಡೆ ಮಾಡಿದರು. ತಮ್ಮ ಕ್ಷೇತ್ರದಲ್ಲಿ ಕೂಡಾ ವಿಕಸನ ಸಂಸ್ಥೆ ಹಲವು ವರ್ಷದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಏಳಿಗೆಗೆ ಕೊಡುಗೆ ನೀಡುತ್ತಿದೆ. ಅದರಲ್ಲೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಶಾರೀರಿಕ ಹಾಗೂ ಬೌದ್ಧಿಕ ವಿಕಸನಕ್ಕೆ ವಿಶೇಷವಾಗಿ ನೆರವಾಗುತ್ತಿದೆ. ಈ ಕಾರ್ಯದಲ್ಲಿ ಉತ್ತಮ ಯಶಸ್ಸನ್ನೂ ಕಾಣುತ್ತಿದ್ದೇವೆ. ಅದೇ ಸದುದ್ದೇಶದಿಂದ ಕೊಡಗಿನಲ್ಲಿ ಸಂಸ್ಥೆ ಹುಟ್ಟು ಹಾಕಿರುವುದು ಸ್ವಾಗತಾರ್ಹ ನಡೆ ಎಂದರು.
ಶಾಲಾ ವಿದ್ಯಾರ್ಥಿಗಳು ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸುವಂತೆ ಮಾಡಬೇಕು. ಪರೀಕ್ಷೆ ರಣಾಂಗಣವಲ್ಲ, ಅದೊಂದು ಕ್ರೀಡಾಂಗಣದಂತೆ. ಲವಲವಿಕೆ, ಉತ್ಸಾಹದಿಂದ ಪರೀಕ್ಷೆಯಲ್ಲಿ ಪಾಲ್ಗೊಳ್ಳಬೇಕೆಂಬುದು ನಮ್ಮ ಅಭಿಲಾಷೆ. ಆ ದಿಸೆಯಲ್ಲಿ ಕೊಡಗು ವಿಕಸನ ಕೂಡಾ ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜಾಜಿನಗರದ ವಿಕಸನ ಸಂಸ್ಥೆಯಿಂದ ಕೂಡಾ ಅಗತ್ಯ ನೆರವಾಗುವುದಾಗಿ ಸಚಿವರು ತಿಳಿಸಿದರು.
ಮಡಿಕೇರಿಯ ರೋಹಿತ್ ಕಲ್ಲೇಗ ಲೋಗೋ ವಿನ್ಯಾಸ ಮಾಡಿದ್ದಾರೆ. ಬಿಡುಗಡೆ ಸಂದರ್ಭ ಕೊಡಗು ವಿಕಸನ ಬಳಗದ ಚೈಯ್ಯಂಡ ಸತ್ಯ ಗಣಪತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಕಿಶೋರ್ ರೈ ಕತ್ತಲೆಕಾಡು, ಶೇಖರ್, ರಾಜಾಜಿನಗರ ವಿಕಸನ ಪದಾಧಿಕಾರಿಗಳಾದ ಯುವಮೋರ್ಚಾ ಲಿಂಗರಾಜು, ಸುನೀಲ್ ಶಿವಾನಂದ ಹಾಜರಿದ್ದರು.
ಜ.11ಕ್ಕೆ ಮೊದಲ ಕಾರ್ಯಕ್ರಮ :’ಕೊಡಗು ವಿಕಸನ’ ಸಂಸ್ಥೆಯ ಮೊದಲ ಕಾರ್ಯಕ್ರಮ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜನವರಿ 11 ರಂದು ನಡೆಯಲಿದೆ. ನಗರದ ಸಂತ ಜೋಸೆಫರ ವಿದ್ಯಾಸಂಸ್ಥೆ ಸಭಾಂಗಣ ಮತ್ತು ನಾಪೋಕ್ಲುವಿನಲ್ಲಿ ಈ ಎರಡು ಕಡೆಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ಅಂದು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಬಗ್ಗೆ ಅಂತರಾಷ್ಟ್ರೀಯ ಅಥ್ಲೀಟ್ ಹಾಗೂ ವ್ಯಕ್ತಿತ್ವ ವಿಕಸನ ಮಾರ್ಗದರ್ಶಕ ತೀತಮಾಡ ಅರ್ಜುನ್ ದೇವಯ್ಯ ಉಪನ್ಯಾಸ ಹಾಗೂ ಸಂವಾದ ನಡೆಸಲಿದ್ದಾರೆ. ನಂತರದಲ್ಲಿ ಪ್ರತಿ ಫೆಬ್ರವರಿ ಅಂತ್ಯದವರೆಗೆ ಪ್ರತಿ ಶನಿವಾರ ಬೆಂಗಳೂರಿನ ವಿಷಯ ತಜ್ಞರಿಂದ ವಿಶೇಷ ತರಗತಿ ಹಮ್ಮಿಕೊಳ್ಳಲಾಗಿದೆ. ಎರಡು ವಿಭಾಗಕ್ಕೊಳಪಟ್ಟ ವ್ಯಾಪ್ತಿಯ ಶಾಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.
Click this button or press Ctrl+G to toggle between Kannada and English