ಮಡಿಕೇರಿ : ರಾಜಾಸೀಟು ಉದ್ಯಾನವನದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿದ್ದು, ಪ್ಲಾಸ್ಟಿಕ್ ಬಳಸುವುದು ಮತ್ತು ಪುಷ್ಪಗಳನ್ನು ಕೀಳುವುದು ಕಂಡು ಬಂದಲ್ಲಿ 100ರೂ. ದಂಡ ವಿಧಿಸಲು ತೋಟಗಾರಿಕಾ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಜಾಸೀಟು ಅಭಿವೃದ್ದಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಫೆ.7 ರಿಂದ 10 ರವರೆಗೆ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡು. ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ರಾಜಾಸೀಟಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಪಾದಚಾರಿ ಮಾರ್ಗವನ್ನು ಮತ್ತಷ್ಟು ವಿಸ್ತಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಜಾಸೀಟು ಬಳಿ ಹೆಚ್ಚಿನ ವಿದ್ಯುತ್ ದೀಪಗಳ ಅಳವಡಿಕೆಗೆ ಮತ್ತು ನಿರ್ವಹಣೆಗೆ ಸೂಕ್ತ ಕ್ರಮಕೈಗೊಳ್ಳುವಂತೆ ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರವೇಶ ಶುಲ್ಕದಿಂದ ರೂ. 70 ಲಕ್ಷ ಆದಾಯ
ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಮಾತನಾಡಿ ಪ್ರಸ್ತುತ ಆರ್ಥಿಕ ವರ್ಷದಲ್ಲಿ ರಾಜಾಸೀಟು ಪ್ರವೇಶ ಶುಲ್ಕದಿಂದ ರೂ. 70 ಲಕ್ಷ ಆದಾಯ ಬಂದಿರುವುದಾಗಿ ಸಭೆಯ ಗಮನಕ್ಕೆ ತಂದರು.
ಫಲಪುಷ್ಪ ಪ್ರದರ್ಶನಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಂಡಿದ್ದು, ರೂ.20 ಲಕ್ಷ ವೆಚ್ಚದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸುತ್ತಿರುವುದಾಗಿ ಸಭೆಗೆ ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ.ದರ್ಶನ್ ಅವರು ಮಾತನಾಡಿ ರಾಜಾಸೀಟು ಉದ್ಯಾನವನದಲ್ಲಿ ಜ.11 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಿರುವುದಾಗಿ ಸಭೆಯ ಗಮನಕ್ಕೆ ತಂದರು.
ಕೂರ್ಗ್ ಹೆರಿಟೇಜ್ ಸೆಂಟರ್‌ನ ಅಭಿವೃದ್ಧಿ ಸಂಬಂಧ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕೊಡಗಿನ ಸಂಸ್ಕೃತಿ, ಸ್ಥಳೀಯ ಪರಂಪರೆ ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಕೂರ್ಗ್ ಹೆರಿಟೇಜ್ ಸೆಂಟರ್‌ನಲ್ಲಿ ಪ್ರವಾಸಿಗರಿಗೆ ಅನಾವರಣಗೊಳಿಸಬೇಕು ಎಂದು ತಿಳಿಸಿದರು.
ಪ್ರಾಚ್ಯ ವಸ್ತು ಸಂಗ್ರಹಾಲಯದ ಅಧಿಕಾರಿಗಳಿಗೆ ಪಾರಂಪರಿಕ ಐತಿಹಾಸಿಕ ಪರಂಪರೆ ಬಿಂಭಿಸುವ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಮೀನುಗಾರಿಕಾ ಇಲಾಖೆ ವತಿಯಿಂದ ವಿಶೇಷ ಮತ್ಸ್ಯ ಪ್ರದರ್ಶನದ ಮಳಿಗೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ಸೈನಿಕ ಕಲ್ಯಾಣ ಇಲಾಖೆ ವತಿಯಿಂದ ಕೊಡಗಿನ ವೀರ ಯೋಧರ ಛಾಯಾಚಿತ್ರ ಪ್ರದರ್ಶನಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೊಡಗಿನ ತೋಟಗಾರಿಕೆ, ಕೃಷಿ, ಜೇನು ಕೃಷಿ, ಸಂಬಂಧಿಸಿದ ಮಾಹಿತಿಗಳನ್ನು ಕೂರ್ಗ್ ಹೆರಿಟೇಜ್ ಸೆಂಟರ್‌ನಲ್ಲಿ ಪ್ರವಾಸಿಗರಿಗೆ ಮಾಹಿತಿ ಒದಗಿಸಲು ಅಗತ್ಯ ಕ್ರಮ ಕೈಗೊಂಡಿರುವುದಾಗಿ ತೋಟಗಾರಿಕಾ ಉಪ ನಿರ್ದೇಶಕರಾದ ಚಂದ್ರಶೇಖರ್ ಅವರು ಸಭೆಗೆ ತಿಳಿಸಿದರು.
ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದ ಡೀನ್ ಕುಶಾಲಪ್ಪ ಅವರು ಕೂರ್ಗ್ ಹೆರಿಟೇಜ್ ಸೆಂಟರ್‌ನಲ್ಲಿ ನೈಸರ್ಗಿಕವಾಗಿ ಏಲಕ್ಕಿ ಗಿಡಗಳು ಹಾಗೂ ವಿವಿಧ ಸ್ಥಳೀಯ ಬಗೆಯ ಸಸಿಗಳನ್ನು ಬೆಳೆಸಿ ಪ್ರಾಕೃತಿಕವಾಗಿ ಅಭಿವೃದ್ಧಿ ಪಡಿಸಲು ಹಲವು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪ್ರಮೋದ್ ಅವರು ಹಲವು ವಿಷಯಗಳನ್ನು ಸಭೆಯ ಗಮನಕ್ಕೆ ತಂದರು. ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ದೇವಕಿ, ನಗರಸಭೆ ಪೌರಾಯುಕ್ತರಾದ ರಮೇಶ್, ಪ್ರಾಚ್ಯ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಜೆ. ಮದನ್ ಮೋಹನ್, ಪಂಚಾಯತ್ ರಾಜ್ ಇಲಾಖೆಯ ಕಾರ್ಯಪಾಲಕ ಅಭಿಯಂತರರಾದ ಪ್ರಭು, ಇತರರು ಹಾಜರಿದ್ದರು.
Click this button or press Ctrl+G to toggle between Kannada and English