ಕೇಂದ್ರದ ಪೌರತ್ವ ಕಾಯ್ದೆಗಳಿಂದ ಸರ್ವ ಭಾರತೀಯರಿಗೆ ಅವಮಾನ : ಕೆ.ಹರೀಶ್ ಕುಮಾರ್

12:43 PM, Wednesday, January 8th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

harish-kumar

ಮಂಗಳೂರು : ಬಿ.ಜೆ.ಪಿ ನೇತೃತ್ವದ ಕೇಂದ್ರ ಸರಕಾರ ಅಸಮರ್ಪಕ ಆರ್ಥಿಕ ನೀತಿಯಿಂದ ದೇಶದ ಜನತೆ ಕಂಗೆಟ್ಟಿರುವಾಗ ಅವನ್ನೆಲ್ಲಾ ಮರೆ ಮಾಚಲು ಪೌರತ್ವ ಸಂಬಂಧಪಟ್ಟ ಕಾಯ್ದೆಗಳನ್ನು ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಉದ್ದೇಶಿಸಿರುವುದು ಸರ್ವ ಭಾರತೀಯರಿಗೂ ಸಂವಿಧಾನಕ್ಕೂ ಮಾಡಿದ ಅವಮಾನವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಇಂದು ಹೇಳಿದರು.

ದಿನಾಂಕ 07.01.2020ರಂದು ಮಲ್ಲಿಕಟ್ಟೆಯಲ್ಲಿ ಜರುಗಿದ ಜಿಲ್ಲಾ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಮಾನವ ಸಂಪನ್ಮೂಲಕ್ಕೆ ಕೊಡಲಿಯೇಟು ನೀಡಲಿರುವ ಈ ಕಾಯ್ದೆಯು ಮತೀಯ ಘರ್ಷಣೆ ಹುಟ್ಟು ಹಾಕಿ ದೇಶ ವಿಭಜನೆಯಾಗುವ ಅಪಾಯವನ್ನು ಆತಂಕವನ್ನು ತಂದೊಡ್ಡಿದೆ ಎಂದರು. ಪೌರತ್ವಕ್ಕೆ ಸಂಬಂಧಪಟ್ಟ ಇಂತಹ ಜನವಿರೋಧಿ ಕಾಯ್ದೆಗಳನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ವಿರೋಧಿಸುತ್ತದೆ ಎಂದರು.

harish-kumar

ಮಂಗಳೂರು ಪ್ರತಿಭಟನೆಯಲ್ಲಿ ಪೊಲೀಸರ ಗುಂಡಿಗೆ ಬಲಿಯಾದ ಅಮಾಯಕರಿಗೆ ಮುಖ್ಯಮಂತ್ರಿ ಘೋಷಿಸಿದ ಪರಿಹಾರವನ್ನು ತಡೆದಿರುವ ಕ್ರಮ ಅಮಾನವೀಯವಾಗಿದ್ದು ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಗಲಭೆಯ ಸಂದರ್ಭದಲ್ಲಿ ವೇಷಧಾರಿ ಪೊಲೀಸರಿರುವ ಶಂಕೆ ವ್ಯಕ್ತವಾಗಿದ್ದು ಮೇಲ್ನೋಟಕ್ಕೆ ಸರಕಾರಿ ಪ್ರಾಯೋಜಿತ ಕೃತ್ಯವೆಂಬಂತೆ ಗೋಚರಿಸುತ್ತಿದೆ. ಅಮಾಯಕರ ಕುಟುಂಬಕ್ಕೆ ನ್ಯಾಯ ಸಿಗುವಲ್ಲಿಯವರೆಗೂ ಕಾಂಗ್ರೆಸ್‌ನ ಹೋರಾಟ ಮುಂದುವರಿಯುತ್ತದೆ ಎಂದ ಅವರು ಪೌರತ್ವ ವಿಚಾರವಾಗಿ ಮನೆ ಭೇಟಿ ಬಂದವರಿಗೆ ಅಸಹಕಾರ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಕರೆ ನೀಡಿದೆ ಎಂದರು.

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಪೇಜಾವರ ಶ್ರೀಗಳಿಗೆ ಎದ್ದು ನಿಂತು ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಅಸಂವಿಧಾನಿಕ ಹೇಳಿಕೆ ನೀಡುತ್ತಿರುವ ಸೋಮಶೇಖರ ರೆಡ್ಡಿ, ಸಿ.ಟಿ ರವಿ, ಸುರೇಶ್ ಅಂಗಡಿ ಅವರ ನಡೆಯನ್ನು ಇದೇ ಸಂದರ್ಭದಲ್ಲಿ ಖಂಡಿಸಲಾಯಿತು.

ವಿಧಾನಪರಿಷತ್ತು ಸದಸ್ಯ ಐವನ್ ಡಿ’ಸೋಜಾ ಮಾತನಾಡಿ, ಬಿ.ಜೆ.ಪಿಯವರು ಪೌರತ್ವ ಕಾಯ್ದೆಯಿಂದ ಒಂದಿಂಚೂ ಸರಿಯುವ ಪ್ರಶ್ನೆಯೇ ಇಲ್ಲ ಎಂಬ ಸರಕಾರದ ನಿಲುವು ಇರುವಾಗ ಮನೆ ಭೇಟಿ ಮಾಡುವ ಅಗತ್ಯವೇನಿದೆ ಎಂದು ಪ್ರಶ್ನಿಸಲು ಹೇಳಿದರು. ಗಲಭೆಯಲ್ಲಿ ಹತ್ಯೆಗೀಡಾದವರ ಮನೆಗೆ ಬಿ.ಜೆ.ಪಿ ಸಂಸದರು, ನಾಯಕರು ಭೇಟಿ ಮಾಡುವ ಸೌಜನ್ಯ ತೋರದಿರುವುದು ಖೇದಕರ ಸಂಗತಿ ಎಂದರು.

harish-kumar

ramanath-rai

ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಕಾಂಗ್ರೆಸ್‌ನ ಜಾತ್ಯಾತೀತ ಸಿದ್ಧಾಂತವನ್ನು ಒಪ್ಪಿಕೊಂಡಿರುವ ಮುಸ್ಲಿಮರನ್ನು ಬೇರ್ಪಡಿಸಿ ಭಯದ ವಾತಾವರಣ ಸೃಷ್ಟಿಸಲು ಬಿ.ಜೆ.ಪಿ ಪೌರತ್ವ ಕಾಯ್ದೆ ಮೂಲಕ ಹವಣಿಸುತ್ತಿದೆ ಎಂದ ಅವರು ನನ್ನ ಪೌರತ್ವದ ಸಾಭೀತಿಗೆ ಸರತಿಯ ಸಾಲಲ್ಲಿ ಕಾಯಬೇಕಾಗಿರುವ ದುಸ್ಥಿತಿ ಬಂದಿರುವುದು ಅತ್ಯಂತ ದುರಂತದ ಸಂಗತಿ ಎಂದರು.

ಸಭೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಮಾಜಿ ರಾಜ್ಯಸಭಾ ಸದಸ್ಯ ಬಿ.ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ಭರತ್ ಮುಂಡೊಡಿ, ಸದಾಶಿವ ಉಳ್ಳಾಲ್, ಶಶಿಧರ್ ಹೆಗ್ಡೆ ಉಪಸ್ಥಿತರಿದ್ದರು. ಬಳಿಕ ನಡೆದ ಚರ್ಚಾಕೂಟದಲ್ಲಿ ನವೀನ್ ಡಿ’ಸೋಜಾ, ಎ.ಸಿ ವಿನಯರಾಜ್, ಹಾಜಿ ಟಿ.ಎಸ್ ಅಬ್ದುಲ್ಲಾ, ಶಾಹುಲ್ ಹಮೀದ್, ವೆಂಕಪ್ಪ ಗೌಡ, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಮಹಮ್ಮದ್ ಬಡಗನ್ನೂರು, ಮಹಮ್ಮದ್ ಅಲಿ, ಸದಾಶಿವ ಶೆಟ್ಟಿ, ಉಮ್ಮರ್ ಫಜೀರ್ ಪಾಲ್ಗೊಂಡರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸದಾಶಿವ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂತೋಷ್ ಕುಮಾರ್ ಶೆಟ್ಟಿ, ನಝೀರ್ ಬಜಾಲ್, ನೀರಜ್‌ಪಾಲ್, ಸಿ.ಎಮ್ ಮುಸ್ತಫ, ಟಿ.ಕೆ ಸುಧೀರ್, ಖಾಲಿದ್ ಉಜಿರೆ ಸಹಕರಿಸಿದ್ದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English