ಮೂಡುಬಿದಿರೆ : ಜ್ಞಾನವೆಂಬುದು ಮುಕ್ತವಾಗಿದ್ದು ಇದು ಯಾರೊಬ್ಬರ ಆಸ್ತಿಯಲ್ಲ. ಈ ನಿಟ್ಟಿನಲ್ಲಿ ಜ್ಞಾನವನ್ನು ವೃದ್ಧಿಸುವಲ್ಲಿ ವಿಕಿಪೀಡಿಯಾ ಸಹಕಾರಿಯಾಗಿದೆ ಎಂದು ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಹೇಳಿದರು.
ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್‌ನ ವಿಕಿಪೀಡಿಯಾ ಸ್ಟೂಡೆಂಟ್ಸ್ ಅಸೋಶಿಯೇಶನ್ ಮತ್ತು ಬೆಂಗಳೂರಿನ ಸಿ.ಐ.ಎಸ್ ನಡುವೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.
ನಾವು ಯಾವಾಗ ನಮ್ಮಲ್ಲಿರುವ ಜ್ಞಾನವನ್ನು ಹಂಚಿಕೊಳ್ಳುತ್ತೆವೆಯೋ ಆಗ ಸಮಾಜ ಮುಕ್ತವಾಗುತ್ತ ಹೋಗುತ್ತದೆ. ಆದ್ದರಿಂದ ಜನರು ಜ್ಞಾನವನ್ನು ಹೆಚ್ಚಿಸಿಕೊಂಡು ಇತರರೊಂದಿಗೆ ಹಂಚಿಕೊಳ್ಳುವಲ್ಲಿ ಪ್ರವೃತ್ತರಾಗಬೇಕು. ಸಾಮಾನ್ಯಜ್ಞಾನವು ಪ್ರತಿಯೊಬ್ಬ ವ್ಯಕ್ತಿಯಿಂದ ಮೌಲ್ಯವನ್ನು ಪ್ರತಿಬಿಂಬಿಸುವ ಒಂದು ಮೂಲವಾಗಿದೆ, ಈ ನಿಟ್ಟಿನಲ್ಲಿ ವಿಕಿಪೀಡಿಯಾ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.
ವಿಕಿಪೀಡಿಯಾದ ಸ್ವಯಂಸೇವಕಿ ಹ್ಯಾರಿಯಟ್ ಸಿಲ್ವಾ ವಿದ್ಯಾಸಾಗರ್ ಮಾತನಾಡಿ ಜ್ಞಾನದ ಮೂಲವನ್ನು ಶೋಧಿಸಲು ಮತ್ತು ನಿಮ್ಮಲ್ಲಿರುವ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿಕಿಪೀಡಿಯಾ ಅವಕಾಶ ನೀಡುತ್ತದೆ. ವಿದ್ಯಾರ್ಥಿಗಳು ಗ್ರಾಮಗಳನ್ನು ಸಂದರ್ಶಿಸಿ ಅಲ್ಲಿರುವ ಹೊಸ ವಿಷಯಗಳನ್ನು ಸಮಾಜಕ್ಕೆ ಹಂಚುವ ಕೆಲಸ ನಡೆಯಬೇಕಿದೆ. ಸಮಾಜದಲ್ಲಿನ ಆಗು-ಹೋಗುಗಳನ್ನು ತಿಳಿದು ಅದಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡಬೇಕು ಎಂದರು.
ಈ ಒಡಂಬಡಿಕೆಯಿಂದ ಆಳ್ವಾಸ್‌ನ ವಿಕಿಪೀಡಿಯಾ ಸ್ಟೂಡೆಂಟ್ಸ್ ಅಸೋಶಿಯೇಶನ್‌ನ ವಿದ್ಯಾರ್ಥಿಗಳಿಗೆ ವಿಕಿ ಕಲಿಕೆ, ವಿಕಿ ತರಬೇತಿಗೆ ವಿದ್ಯಾರ್ಥಿಗಳಿಗೆ ಸಂಪನ್ಮೂಲ ವ್ಯಕ್ತಿಯನ್ನು ಒದಗಿಸುವುದರ ಜತೆಗೆ, ಈ ಕ್ಷೇತ್ರದ ಹೊಸ ಆಯಾಮಗಳಿಗೆ ತೆರೆದುಕೊಳ್ಳಲು ಅವಕಾಶ ನೀಡುತ್ತದೆ. ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳನ್ನು ಒದಗಿಸುವ ಕೆಲಸವನ್ನು ಮಾಡುತ್ತದೆ.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ(ಸಿ.ಐ.ಎಸ್)ಯ ಕಾರ್ಯಕ್ರಮ ನಿರ್ವಾಹಕ ಟಿಟೋ ದತ್ತಾ, ಕಾರ್ಯಕ್ರಮ ಸಹಾಯಕ ಅನಂತ್ ಸುಬ್ರಾಯ್ ಆಳ್ವಾಸ್ ಕಾಲೇಜಿನ ವಿಕಿಪೀಡಿಯಾ ಸಂಯೋಜಕ ಅಶೋಕ್ ಕೆ.ಜಿ. ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿನಿ ಪ್ರಣವ್‌ಶಿವಕುಮಾರ್ ನಿರೂಪಿಸಿ, ಯಕ್ಷಿತಾ ವಂದಿಸಿದರು.
Click this button or press Ctrl+G to toggle between Kannada and English