ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ‘ಯಾಕಾಗಿ ಪಾಪ್ಯುಲರ್ ಫ್ರಂಟ್’ ರಾಷ್ಟ್ರೀಯ ಅಭಿಯಾನದ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು. ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಶರೀಫ್ ರವರು ಜಗತ್ತಿನಲ್ಲೆ ಹೆಮ್ಮೆ ಪಡುವಂತಹ ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮಲ್ಲಿದೆ. ಎಲ್ಲ ವರ್ಗದ ನಾಗರಿಕರಿಗೆ ಸಮಾನ ನ್ಯಾಯ ಖಾತರಿಪಡಿಸುವ ಸಂವಿಧಾನ ನಮ್ಮಲ್ಲಿದೆ. ಇದರಂತೆ ಕಾರ್ಯನಿರ್ವಹಿಸುತ್ತಾರೆ ಎಂಬ ಆಶಯದಲ್ಲಿ ಜನಪ್ರತಿನಿಧಿಗಳನ್ನು ಆರಿಸಿ ಕಳುಹಿಸುತ್ತೇವೆ. ಆದರೆ 65 ವರ್ಷಗಳಿಂದ ಶೇ.90ರಷ್ಟು ನಾಗರಿಕರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿದ್ದಾರೆ ಎಂದರು. 20 ವರ್ಷಗಳಿಂದ ಜನ ಸಾಮಾನ್ಯರ ಅಲ್ಪ ಸಂಖ್ಯಾತರ, ಹಿಂದುಳಿದ ವರ್ಗದವರ, ದಲಿತರ ಪರವಾಗಿ ಪಾಪ್ಯುಲರ್ ಫ್ರಂಟ್ ಹೊರಾಡುತ್ತಿದೆಯಾದರೂ ಕೂಡ ಇಂದಿನ ದಿನಗಳಲ್ಲಿ ಅದರ ವಿರುದ್ದ ಅದನ್ನು ನಿಷೇಧಿಸುವ ಷಡ್ಯಂತ್ರ ನಡೆಯುತ್ತಿದೆ ಆದರೆ ನಾವು ಈ ಷಡ್ಯಂತ್ರಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಕೂಡ ಒಂದೇ ಧ್ಯೇಯದ ಪಕ್ಷಗಳು. ಅವುಗಳಿಂದ ಅಲ್ಪಸಂಖ್ಯಾಕರ ಬದುಕು ಹಸನಾಗುವುದು ಸಾಧ್ಯವೇ ಇಲ್ಲ. ಅವೆರಡು ಪಕ್ಷ ಆಧಾರಿತವಾಗಿ ಬೇರೆ ಬೇರೆ ಆಗಿದ್ದರೂ ಅವುಗಳ ನಿಲುವುಗಳ ಲೇಬಲ್‌ನಲ್ಲಿ ಒಂದೇ ಭಾವನೆ ಇದೆ ಎಂದು ಆರೋಪಿಸಿದರು. ದೇಶದ ಮುಸ್ಲಿಮರನ್ನು ಒಳಗೊಂಡಂತೆ ಹಿಂದುಳಿದ ಮೂಲೆಗೆಸೆಯಲ್ಪಟ್ಟ ಸಮುದಾಯಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಬಲೀಕರಣಕ್ಕಾಗಿ ದುಡಿಯು ಪಿಎಫ್‌ಐ, ಧಾರ್ಮಿಕ ವಿಧಿ ತೀರ್ಪು ನೀಡುವ ಸಂಘಟನೆಯಲ್ಲ. ದೇಶದಲ್ಲಿ ಇತರ ಧರ್ಮಗಳೊಂದಿಗಿನ ಅಸಹಿಷ್ಟುತೆಯಾಗಲೀ, ಇತರ ಸಮುದಾಯಗಳ ನಡುವೆ ವೈರುತ್ವ ಸೃಷ್ಟಿಸುವುದು ಪಿಎಫ್‌ಐ ನಿಲುವಲ್ಲ ಎಂದು ಅವರು ಹೇಳಿದರು. ಇದು ಮಾನವ ಹಕ್ಕುಗಳು ಹಾಗೂ ನಾಗರಿಕ ಹಕ್ಕುಗಳನ್ನು ರಕ್ಷಿಸುವ ಕೆಲಸ ಮಾಡುತ್ತದೆ, ಈ ದೇಶದ ಸಂವಿಧಾನ ಹಾಗೂ ಕಾನೂನನ್ನು ಎತ್ತಿ ಹಿಡಿಯುವ ಸಂಘಟನೆ ಎಂದರು.
ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ಅಧ್ಯಕ್ಷ ಮೌಲಾನ ಉಸ್ಮಾನ್ ಬೇಗ್ ರವರು ಮಾತನಾಡಿ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಪ್ರತಿ ಭಾರತೀಯನೂ ತಮಗೆ ಸ್ವಾತಂತ್ರ್ಯ,ನ್ಯಾಯ ,ರಕ್ಷಣೆ ಸಿಗುವುದು ಎಂದು ನಂಬಿದ್ದರು ಆದರೆ ನಮ್ಮ ದುರಾದೃಷ್ಟ ಸ್ವಾತಂತ್ರ್ಯ ಸಿಕ್ಕ ನಂತರ ಕೂಡ ನಮಗೆ ನ್ಯಾಯವಾಗಿ ಬದುಕಲು ಆಗುತ್ತಿಲ್ಲ, ನಮ್ಮ ಮಾಧ್ಯಮ,ಸರಕಾರ ಹಾಗೂ ಬೇಹುಗಾರಿಕಾ ಸಂಸ್ಥೆಗಳು ಮುಸ್ಲಿಮರನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸುತ್ತಿವೆ. ಭಾರತದಲ್ಲಿ ಗಡ್ಡ,ಪೈಜಾಮ, ಪೇಟ ತೊಡುವುದು ಮುಸ್ಲಿಮರ ಸಂಕೇತವಲ್ಲ ಭಯೋತ್ಪಾದಕರ ಸಂಕೇತ ಎಂದು ಬಿಂಬಿಸಲಾಗುತ್ತಿದೆ ಎಂದರು.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಇಲ್ಯಾಸ್ ಮಹಮ್ಮದ್ ರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಹುಜನ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಷ್ಟ್ರ ಅಧ್ಯಕ್ಷೆ ಶಾಹಿದಾ ತಸ್ನೀಂ, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಅಲ್ ಇಂಡಿಯಾ ಇಮಾಮ್ಸ್ ರಾಜ್ಯಾಧ್ಯಕ್ಷ ಮುಹಮ್ಮದ್ ಮುಅಝ್ಹಮ್, ಜಮ್ಮಾ ಮಸ್ಜಿದ್ ಮುದರ್ರಿಸ್‌ನ ಅಲ್ ಹಾದಿ ಆತೂರ್ ತಂಙಳ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಪ್ರಧಾನ ಕಾರ್ಯದರ್ಶಿ ಮುಮ್ತೂಝ್ ಆಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English