ಮೀರತ್ : ನಿರ್ಭಯಾ ಸಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಲಿರುವ ಹ್ಯಾಂಗ್ ಮ್ಯಾನ್ ಪವನ್ ಜಲ್ಲಾದ್ ಅವರಿಗೆ ಸಿಗಲಿರುವ ಸಂಭಾವನೆ ಮೊತ್ತ ಬಹಿರಂಗವಾಗಿದೆ. ಪವನ್ ಅವರಿಗೆ 1 ಲಕ್ಷ ರೂ ಸಂಭಾವನೆ ಸಿಗಲಿದೆ ಎಂದು ತಿಳಿದು ಬಂದಿದೆ.
ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸುವುದರಿಂದ ಒಬ್ಬರಿಗೆ ತಲಾ 25 ಸಾವಿರರು ನಂತೆ ಒಟ್ಟಾರೆ 1 ಲಕ್ಷ ರು ಸಿಗಲಿದೆ ಎಂದು ತಿಹಾರ್ ಜೈಲಿನ ಅಧಿಕಾರಿಗಳು ಹೇಳಿದ್ದಾರೆ.
ನೇಣಿಗೇರಿಸುವ ಪ್ರಕ್ರಿಯೆ ಹೊಸದೇನಲ್ಲ, ಆದರೆ ಕುಣಿಕೆ ಮತ್ತು ನೇಣಿಗೇರಿಸುವ ಸ್ಥಳ ಪರಿಶೀಲಿಸಬೇಕು. ಅಪರಾಧಿಗಳ ದೇಹದ ಅಳತೆಯನ್ನು ನೋಡಬೇಕು, ತಿಹಾರ್ ಜೈಲಿನ ಅಧಿಕಾರಿಗಳಿಂದ ಸೂಚನೆ ಬಂದ ತಕ್ಷಣ ಅಲ್ಲಿಗೆ ತೆರಳುತ್ತೇನೆ ಎಂದು ಪವನ್ ಹೇಳೀದ್ದಾರೆ.
ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸುವ ಪ್ರಕ್ರಿಯೇ ಎಂದೋ ಆಗಬೇಕಿತ್ತು. ಇದರಿಂದ ನಿರ್ಭಯಾ ಪೋಷಕರಿಗೆ ಸೇರಿದಂತೆ ಅನೇಕರಿಗೆ ಸಂತಸ ಸಿಗಲಿದೆ ಎಂದು ಪವನ್ ಪ್ರತಿಕ್ರಿಯಿಸಿದ್ದಾರೆ.
ಹೆಚ್ಚುವರಿ ಸೆಷನ್ಸ್ ಜಡ್ಜ್ ಸತೀಶ್ ಕುಮಾರ್ ಅರೋರಾ ಅವರು ತಿಹಾರ್ ಜೈಲಿನ ಮುಖ್ಯ ಅಧಿಕಾರಿಗೆ ಬ್ಲ್ಯಾಕ್ ವಾರೆಂಟ್ ಎಂದು ಕೂಡಾ ಕರೆಯಲ್ಪಡುವ ಡೆತ್ ವಾರೆಂಟ್ ಪ್ರತಿ ಕಳಿಸಿದ್ದಾರೆ. ನಿರ್ಭಯಾ ಪ್ರಕರಣದ ಅಪರಾಧಿಗಳಾದ ಮುಕೇಶ್ (32), ಪವನ್ ಗುಪ್ತಾ(25), ವಿನಯ್ ಶರ್ಮ (26) ಹಾಗೂ ಅಕ್ಷಯ್ ಕುಮಾರ್ ಸಿಂಗ್ (31) ಅವರ ವಿರುದ್ಧ ಡೆತ್ ವಾರೆಂಟ್ ಜಾರಿಯಾಗಿದೆ.
23 ವರ್ಷ ವಯಸ್ಸಿನ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಮೇಲೆ 2012ರ ಡಿಸೆಂಬರ್ 16 ರಾತ್ರಿ ವೇಳೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಅತಿ ಕ್ರೂರವಾಗಿ ನಡೆದ ಈ ಅತ್ಯಾಚಾರದಿಂದ ನಿತ್ರಾಣವಾಗಿ ರಸ್ತೆಯಲ್ಲಿ ಬಿದ್ದಿದ್ದ ನಿರ್ಭಯಾಗೆ ಹೆಚ್ಚಿನ ವೈದ್ಯಕೀಯ ನೆರವು ಸಿಕ್ಕಿ, ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್ 29, 2012ರಂದು ಆಕೆ ಕೊನೆಯುಸಿರೆಳೆದಿದ್ದರು.
ಈ ಪ್ರಕರಣದಲ್ಲಿ ಒಟ್ಟು 6 ಮಂದಿಯನ್ನು ಆರೋಪಿಯನ್ನು ಗುರುತಿಸಿ ಬಂಧಿಸಲಾಗಿತ್ತು. ಆರೋಪಿಗಳ ಪೈಕಿ ಒಬ್ಬ ಜೈಲಿನಲ್ಲೇ ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಬಾಲಾಪರಾಧಿಯಾಗಿ ಮೂರು ವರ್ಷಗಳ ಕಾಲ ಶಿಕ್ಷೆ ಅನುಭವಿಸಿದ್ದಾನೆ. ಈಗ ಮಿಕ್ಕ ನಾಲ್ವರು ಅಪರಾಧಿಗಳಿಗೆ ನೇಣು ಕುಣಿಕೆ ಸಿದ್ಧವಾಗಿದೆ.
“ಡಿಸೆಂಬರ್ ತಿಂಗಳಲ್ಲಿ ಪವನ್ ಜಲ್ಲಾದ್ ಗೆ ಸಿದ್ಧರಾಗಿರುವಂತೆ ತಿಹಾರ್ ಜೈಲಿನಿಂದ ಸೂಚನೆ ಬಂದಿತ್ತು. ಇದಾದ ಬಳಿಕ ಇತ್ತೀಚೆಗೆ ಯಾವುದೇ ಸೂಚನೆ ಬಂದಿಲ್ಲ. ದೆಹಲಿ ಹೈಕೋರ್ಟಿನ ಡೆತ್ ವಾರೆಂಟ್ ಆಧಾರದ ಮೇಲೆ ತಿಹಾರ್ ಜೈಲಿನಿಂದ ಕರೆ ಬಂದಾಗ ಪವನ್ ಅಲ್ಲಿಗೆ ತೆರಳಲಿದ್ದಾರೆ” ಎಂದು ಮೀರತ್ ಜೈಲಿನ ಎಸ್ಪಿ ವಿ.ಪಿ ಪಾಂಡೆ ಪ್ರತಿಕ್ರಿಯಿಸಿದ್ದಾರೆ.
Click this button or press Ctrl+G to toggle between Kannada and English