ಪುತ್ತೂರು :ಕೃಷಿ ಯಂತ್ರಮೇಳ 2012 ರ ಉದ್ಘಾಟನಾ ಸಮಾರಂಭ

3:32 PM, Saturday, November 3rd, 2012
Share
1 Star2 Stars3 Stars4 Stars5 Stars
(5 rating, 1 votes)
Loading...

Krushi Yantra Melaಪುತ್ತೂರು: ಪ್ರತಿಷ್ಠಿತ ಸಹಕಾರ ಸಂಸ್ಥೆ ಕ್ಯಾಂಪ್ಕೋ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಮತ್ತು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ಶುಕ್ರವಾರದಿಂದ ರವಿವಾರ ತನಕ ವಿವೇಕಾನಂದ ತಾಂತ್ರಿಕ ಮಹಾ ವಿದ್ಯಾಲಯದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಕೃಷಿ ಯಂತ್ರಮೇಳ -2012 ಇದರ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಸಾರ್ವಜನಿಕ ರಂಗದಲ್ಲಿ ವಿಶೇಷವಾದ ಸಾಧನೆ ಮಾಡಿದ ಕ್ಷೇತ್ರವಾಗಿದ್ದು ಕೃಷಿ ರಂಗಕ್ಕೆ ಅಗತ್ಯವಾದ ಆಧುನಿಕತೆಯನ್ನು ಪರಿಚಯಿಸುವಲ್ಲಿ ಐಟಿ ಕ್ಷೇತ್ರದ ಚಿಂತನೆ ಸಾಗಬೇಕಿದೆ ಎಂದು ಸಲಹೆ ನೀಡಿದರು.

ಕೃಷಿ ಕ್ಷೇತ್ರಕ್ಕೆ ಸಹಾಯ ನೀಡುವಲ್ಲಿ ಸಹಕಾರ ಸಂಘಗಳ ಪಾತ್ರ ಉಲ್ಲೇಖನೀಯ ಈ ಹಿಂದೆ ರಾಷ್ಟ್ರೀಕೃತ ಬ್ಯಾಂಕ್‌ಗಳು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದಾಗ ಗ್ರಾಮೀಣ ಬ್ಯಾಂಕ್‌ಗಳು ಅಸ್ತಿತ್ವಕ್ಕೆ ಬಂದವು. ಕೃಷಿಕರಲ್ಲಿ ಕೃಷಿ ಉತ್ತೇಜನಕ್ಕಾಗಿ ಸಹಕಾರಿ ಬ್ಯಾಂಕ್‌ಗಳ ಸಹಕಾರ ಇಲ್ಲಿ ಎದ್ದು ಕಾಣುತ್ತಿದ್ದು, ಕ್ಯಾಂಪ್ಕೋದಂತಹ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಂತಹ ಸಹಕಾರ ಸಂಸ್ಥೆಗಳು ಕೃಷಿಕರ ಪರವಾಗಿ ಕೆಲಸ ಮಾಡುತ್ತಾ ಬಂದಿವೆ ಎಂದರು. ಕೃಷಿ ಕ್ಷೇತ್ರದಲ್ಲೂ ಹೊಸ ಆವಿಷ್ಕಾರಗಳು ಬರಬೇಕಾಗಿದೆ. ಕೃಷಿ ಉತ್ಪಾದನಾ ವೆಚ್ಚ ಹೆಚ್ಚು, ಲಾಭ ಕಡಿಮೆ ಎಂಬ ಭಾವನೆ ದೂರಗೊಂಡು ಕೃಷಿಯು ಲಾಭದಾಯಕ ಎಂಬ ವಾತಾವರಣ ಸೃಷ್ಟಿಯಾಗಬೇಕು ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ ಕರಾವಳಿಯ ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಗೊಳಿಸಿ ಬೆಳೆಗಾರರಿಗೆ ನ್ಯಾಯ ಒದಗಿಸಿದ ಮಾಧ್ಯಮಗಳ ಪಾತ್ರ ಉಲ್ಲೇಖನೀಯ ಎಂದರು. ಅಡಿಕೆ ಸಹಿತ ಒಟ್ಟು ಕೃಷಿ ವ್ಯವಸ್ಥೆಯ ಕುರಿತು ಆಸಕ್ತಿ ವಹಿಸಿರುವ ಕ್ಯಾಂಪ್ಕೋ ಸಂಸ್ಥೆಯ ಹೊಸ ಪ್ರಯತ್ನಗಳಿಗೆ ಮಾಧ್ಯಮಗಳ ಸಹಕಾರ ಅಗತ್ಯವಿದೆ ಎಂದರು.

ವಿಧಾನಸಭೆಯ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌ ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್‌, ಭಾರತ ಸರಕಾರದ ಆರ್ಥಿಕ ವಿಭಾಗದ ಕಾರ್ಯದರ್ಶಿ ವಿ.ವಿ. ಭಟ್‌, ವಿವೇಕಾನಂದ ವಿದ್ಯಾವರ್ದಕ ಸಂಘದ ಕಾರ್ಯದರ್ಶಿ ಇ. ಶಿವಪ್ರಸಾದ್‌, ಆಡಳಿತ ಮಂಡಳಿ ಸದಸ್ಯ ರಾಧಾಕೃಷ್ಣ ಭಕ್ತ, ಕ್ಯಾಂಪ್ಕೋ ಉಪಾಧ್ಯಕ್ಷ ಸತೀಶ್ಚಂದ್ರ ಭಂಡಾರಿ, ಕ್ಯಾಂಪ್ಕೋ ಆಡಳಿತ ನಿರ್ದೇಶಕ ಸುರೇಶ್‌ ಭಂಡಾರಿ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English