ಮಂಗಳೂರು : ಭಾರತ ಸರ್ಕಾರ 1885ರಿಂದ ಸ್ವಾಮಿ ವಿವೇಕಾನಂದರ ಜನ್ಮದಿನವನ್ನು ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಘೋಷಿಸಿ ರಾಷ್ಟ್ರದಾದ್ಯಂತ ಆಚರಿಸುತ್ತಿಸುತ್ತಾ ಬರುತ್ತಿದೆ. ಯುವಜನತೆಗಾಗಿ ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಮಂಗಳೂರು ರಾಮಕೃಷ್ಣ ಮಿಷನ್ ರಾಷ್ಟ್ರೀಯ ಯುವ ದಿನಾಚರಣೆಯನ್ನು ಜನವರಿ 12, ಭಾನುವಾರದಂದು ಹಮ್ಮಿಕೊಳ್ಳಲಾಗಿದೆ. ಬೆಳಿಗ್ಗೆ 9.30 ರಿಂದ ಅಪರಾಹ್ನ 2.00ಗಂಟೆಯವರೆಗೆ ಜರುಗುವ ಈ ಕಾರ್ಯಕ್ರಮವನ್ನು ಮಂಗಳೂರು ನಗರದ ಪೋಲಿಸ್ ಆಯುಕ್ತ ಡಾ. ಪಿ ಎಸ್ ಹರ್ಷಾ ಅವರು ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ಡಾ. ರಾಜಶೇಖರ್ ಹೆಬ್ಬಾರ್ ಪ್ರಾಚಾರ್ಯರು ಸರ್ಕಾರಿ ಪ್ರಥಮದರ್ಜೆ ಕಾಲೇಜು ರಥಬೀದಿ ಮಂಗಳೂರು ಇವರು ಭಾಗಿಯಾಗಲಿದ್ದಾರೆ. ಸ್ವಾಮಿ ಜಿತಕಾಮಾನಂದಜಿ ಅಧ್ಯಕ್ಷರು ರಾಮಕೃಷ್ಣ ಮಠ ಮಂಗಳೂರು ಇವರು ಯುವಜನತೆಯನ್ನು ಉದ್ದೇಶಿಸಿ ಭಾಷಣ ಮಾಡಲಿರುವರು.
ಉದ್ಘಾಟನೆಯ ಬಳಿಕ ವಿಜಯಪುರದ ಶ್ರೀಕೃಷ್ಣ ಸಂಪಗಾಂವಕರ್ ಇವರಿಂದ ಸ್ವಾಮಿ ವಿವೇಕಾನಂದರ ಕುರಿತ ಏಕಪಾತ್ರಾಭಿನಯ ಜರುಗಲಿದೆ. ತದನಂತರ ಸಮಾಜದಲ್ಲಿ ತಮ್ಮ ಪರಿಶ್ರಮದಿಂದ ಹಲವು ಅಡ್ಡ್ದಿ-ಅಡಚಣೆಗಳಿದ್ದಾಗ್ಯೂ ತಾವೂ ವಿಶೇಷವಾದದ್ದನ್ನು ಸಾಧಿಸಿ, ಸಮಾಜದ ಇತರ ಯುವಕ ಯುವತಿಯರಿಗೆ ಸ್ಫೂರ್ತಿಯನ್ನು ನೀಡುತ್ತಿರುವ ಮೂರುಜನ ಯುವಸಾಧಕರು ತಮ್ಮ ಜೀವನಾನುಭವಗಳನ್ನು ಯುವಜನತೆಯೊಂದಿಗೆ ಹಂಚಿಕೊಳ್ಳಲಿದ್ದಾರೆ.
ರಾಷ್ಟ್ರಪತಿಯವರಿಂದ ವಿಶೇಷ ಪುರಸ್ಕಾರ ಪಡೆದ ಪುತ್ತೂರಿನ ಯುವಸಾಧಕ ಸ್ವಸ್ತಿಕ್ ಪದ್ಮ, ನಡೆದಾಡುವ ಕಂಪ್ಯೂಟರ್ ಎಂದೇ ಪ್ರಖ್ಯಾತರಾಗಿರುವ ಅಂಧ ಸಾಧಕ ಬಸವರಾಜ್ ಉಮ್ರಾಣಿ ಹಾಗೂ ಯುವಸಾಧಕಿ ಹಾಗೂ ಉಪನ್ಯಾಸಕಿ ರಮ್ಯಾ ಐತಾಳ ನನ್ನಲ್ಲಿ ನನಗೆ ನಂಬಿಕೆಯಿರಬೇಕು ಎಂಬ ವಿಷಯದ ಕುರಿತು ಸಂವಾದ ಮಾಡಲಿದ್ದಾರೆ. ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸಂವಾದವನ್ನು ನಿರ್ವಹಿಸಲಿದ್ದಾರೆ.
Click this button or press Ctrl+G to toggle between Kannada and English