ಪ್ರಧಾನಿಯಿಂದ ಸಂವಿಧಾನಕ್ಕೆ ಗುಂಡಿಡುವ ಪ್ರಯತ್ನ ನಡೆದಿದೆ : ದೇವನೂರು ಮಹದೇವ ಗಂಭೀರ ಆರೋಪ

5:33 PM, Saturday, January 11th, 2020
Share
1 Star2 Stars3 Stars4 Stars5 Stars
(No Ratings Yet)
Loading...

samavesha

ಮಡಿಕೇರಿ : ದೇಶದ ಸಂವಿಧಾನಕ್ಕೆ ನಮಸ್ಕರಿಸಿ ಪ್ರಧಾನಿ ಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಇಂದು ಅದೇ ಸಂವಿಧಾನಕ್ಕೆ ಗೋಡ್ಸೆ ಮಾದರಿಯಲ್ಲಿ ಗುಂಡಿಡುವ ಪ್ರಯತ್ನ ಮಾಡಿದ್ದಾರೆಂದು ಹಿರಿಯ ಸಾಹಿತಿ ಹಾಗೂ ಚಿಂತಕ ದೇವನೂರು ಮಹದೇವ ಗಂಭೀರ ಆರೋಪ ಮಾಡಿದ್ದಾರೆ.

ಪ್ರಗತಿಪರರ ಜನಾಂದೋಲನ ವೇದಿಕೆ ವತಿಯಿಂದ ಮಡಿಕೆರಿಯ ಗಾಂಧಿ ಮೈದಾನದಲ್ಲಿ ನಡೆದ ’ಪೌರತ್ವ ಕಾಯ್ದೆ ವಿರುದ್ಧದ ಜನಾಂದೋಲನ ಸಮಾವೇಶ’ದಲ್ಲಿ ಮಾತನಾಡಿದ ಅವರು, ಕಾಯ್ದೆ ಕುರಿತು ಆತಂಕ ವ್ಯಕ್ತಪಡಿಸಿದರು.

ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮಾ ಗಾಂಧೀಜಿಯವರಿಗೆ ನಮಸ್ಕರಿಸಿದ ಬಳಿಕ ಎದೆಗೆ ಗುಂಡಿಟ್ಟು ಹತ್ಯೆ ಮಾಡಿದ ಗೋಡ್ಸೆ ಮಾದರಿಯಲ್ಲಿ, ಅಧಿಕಾರಕ್ಕೆ ಏರುವ ಹಂತದಲ್ಲಿ ಮೋದಿ ಅವರು ಸಂವಿಧಾನಕ್ಕೆ ನಮಿಸಿ, ಇದೀಗ ಎನ್‌ಆರ್‌ಸಿ, ಸಿಎಎ ಕಾಯ್ದೆಗಳ ಮೂಲಕ ಅದೇ ಸಂವಿಧಾನಕ್ಕೆ ಗುಂಡಿಕ್ಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಜನರಿಂದ ಆಯ್ಕೆಯಾಗಿ ಬಂದ ಪ್ರಧಾನಿ ಇಂದು ಅದೇ ಜನರ ಪೌರತ್ವವನ್ನು ಪ್ರಶ್ನಿಸುತ್ತಿರುವುದು ದುರಂತವೆಂದು ವ್ಯಾಖ್ಯಾನಿಸಿದ ದೇವನೂರು, ಕಾಯ್ದೆ ಜಾರಿಯಾದರೆ ಅರಣ್ಯ ವಾಸಿಗಳ ಪಾಡೇನು ಎಂದು ಆತಂಕ ವ್ಯಕ್ತಡಿಸಿದರು. ಇಂದು ದೇಶದಲ್ಲಿ ಕೇವಲ ಶೇ. 1ರಷ್ಟಿರುವ ಕೋಮುವಾದಿಗಳು ಹಾಗೂ ಶೇ.99ರಷ್ಟು ಇರುವ ಭಾರತೀಯರ ನಡುವೆ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು.

samavesha

ಈ ದೇಶದ ಪೌರತ್ವ ಹೊಂದಿದ ಮತದಾರರು ನೀಡಿದ ಮತಗಳಿಂದಲೇ ಇವರು ಪ್ರಧಾನಿಗಳಾಗಿದ್ದಾರೆ. ಅಧಿಕಾರಕ್ಕೆ ಬಂದ ಮೇಲೆ ಪೌರತ್ವವನ್ನು ಖಾತರಿ ಪಡಿಸಿ ಎಂದು ಹೇಳುತ್ತಿರುವುದು ವಿಪರ್ಯಾಸ. ಜವರಾಯ ಬರುವಾಗ ಬರಿಗೈಯಲ್ಲಿ ಬರಲಿಲ್ಲ, ಒಳ್ಳೊಳ್ಳ್ಳೆಯ ಮರಗಳನ್ನು ಕತ್ತರಿಸುತ್ತಾ ಬಂದ ಎನ್ನುವ ರೀತಿಯಲ್ಲಿ ಇಂದಿನ ಕೇಂದ್ರದ ಆಡಳಿತ ಉತ್ತಮ ಸಂಸ್ಥೆಗಳನ್ನು, ಸಂಬಂಧಗಳನ್ನು ಒಡೆಯುತ್ತಾ ಬರುತ್ತಿದೆ. ದೇಶ ಕಟ್ಟುವ ಬದಲು ಕೆಡಹುವ ಕೆಲಸ ಮಾಡುತ್ತಿದೆ. ನೋಟು ಅಮಾನ್ಯೀಕರಣದ ಸಂದರ್ಭ ದೇಶದ ಜನ ಬ್ಯಾಂಕ್‌ಗಳ ಎದುರು ಸಾಲು ಗಟ್ಟಿ ನಿಂತ ರೀತಿಯಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಕಾಯ್ದೆಗಳ ಮೂಲಕವೂ ಜನ ಚಿಂತೆಗೀಡಾಗಿ ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ, ಆರ್ಥಿಕ ಬಿಕ್ಕಟ್ಟು, ಬೆಲೆ ಏರಿಕೆ, ರೈತರು ಎದುರಿಸುತ್ತಿರುವ ಸಂಕಷ್ಟ, ಮೂಲಭೂತ ಸೌಲಭ್ಯಗಳ ಕೊರತೆಯನ್ನು ಮರೆತು ಬಿಡಲಿ ಎನ್ನುವ ಉದ್ದೇಶ ಆಡಳಿತ ನಡೆಸುತ್ತಿರುವವರು ಹೊಂದಿದ್ದಾರೆ ಎಂದು ದೇವನೂರು ಆರೋಪಿಸಿದರು.

ಇದು ದೇಶದ ಭವಿಷ್ಯದ ಪ್ರಶ್ನೆಯಾಗಿರುವುದರಿಂದ ವಿದ್ಯಾರ್ಥಿ ಸಮೂಹ ನ್ಯಾಯಕ್ಕಾಗಿ ಹೋರಾಟಕ್ಕೆ ಧುಮುಕಬೇಕೆಂದು ಅವರು ಕರೆ ನೀಡಿದರು.
ಪ್ರಗತಿಪರ ಜನಾಂದೋಲನ ವೇದಿಕೆಯ ಸಂಚಾಲಕ ವಿ.ಪಿ.ಶಶಿಧರ್ ಮಾತನಾಡಿ. ಜಿಲ್ಲೆಯಲ್ಲಿ ನಿರಂತರವಾಗಿ ಭಾವನಾತ್ಮಕ ವಿಚಾರ ಧಾರೆಗಳನ್ನೆ ಮುಂದಿಟ್ಟುಕೊಂಡು ಚುನಾವಣೆಗಳಲ್ಲಿ ಗೆಲುವು ಸಾಧಿಸುತ್ತಾ ಬರಲಾಗುತ್ತಿದೆ, ಇದಕ್ಕೆ ಬೆಂಬಲವೂ ದೊರೆಯುತ್ತಿದೆ. ಆದರೆ, ಅಭಿವೃದ್ಧಿಯ ವಿಚಾರಧಾರೆಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುವವರ ಅಗತ್ಯತೆ ಈ ಜಿಲ್ಲೆಗೆ ಇದೆ ಎಂದು ಹೇಳಿದರು. ಒಡೆದು ಆಳುವ ಶಕ್ತಿಗಳ ವಿರುದ್ಧ ಜನ ಎಚ್ಚೆತ್ತುಕೊಳ್ಳಬೇಕೆಂದರು.

ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜಿಲ್ಲಾ ಕಾಂಗ್ರೆಸ್, ಜೆಡಿಎಸ್, ಸಿಪಿಐಎಂ, ಸಿಪಿಐ, ಎಸ್‌ಡಿಪಿಐ. ಸಿಪಿಐಎಂಎಲ್ ಸೇರಿದಂತೆ ಬಿಜೆಪಿಯೇತರ ರಾಜಕೀಯ ಪಕ್ಷಗಳ ಮುಖಂಡರು ಕೇಂದ್ರ್ರದ ಜನವಿರೋಧಿ ನೀತಿಗಳ ವಿರುದ್ಧ ಒಗ್ಗಟ್ಟಾಗಿ ಹೋರಾಟ ನಡೆಸುವ ಪ್ರತಿಜ್ಞೆ ಕೈಗೊಂಡರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಕೆಪಿಸಿಸಿ ಪ್ರಮುಖರಾದ ಮಿಟ್ಟು ಚಂಗಪ್ಪ, ಕೆ.ಪಿ.ಚಂದ್ರಕಲಾ, ನೆರವಂಡ ಉಮೇಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಇಸಾಕ್ ಖಾನ್, ಶಾಂತಿ ಅಚ್ಚಪ್ಪ, ಸಿಪಿಐಎಂ ಕಾರ್ಯದರ್ಶಿ ಡಾ.ಇ.ರ.ದುರ್ಗಾಪ್ರಸಾದ್, ಸಿಪಿಐಎಂಎಲ್‌ನ ರಾಜ್ಯ ಕಾರ್ಯದರ್ಶಿ ಡಿ.ಎಸ್. ನಿರ್ವಾಣಪ್ಪ, ಎಸ್‌ಡಿಪಿಐ ರಾಜ್ಯ ಸಮಿತಿ ಸದಸ್ಯ ಅಮಿನ್ ಮೊಹಿಸಿನ್ ಮತ್ತಿತರ ಪ್ರಮುಖರು ಹಾಜರಿದ್ದರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English