ನವದೆಹಲಿ : ನಿನ್ನೆಯಷ್ಟೇ ಬಿಡುಗಡೆಯಾದ ನಟಿ ದೀಪಿಕಾ ಪಡುಕೋಣೆ ಅಭಿನಯದ `ಚಪಾಕ್’ ಚಿತ್ರ ಪ್ರದರ್ಶನಕ್ಕೆ ಜ.15 ರಿಂದ ತಡೆ ನೀಡುವಂತೆ ದೆಹಲಿ ಹೈಕೋರ್ಟ್ ಇಂದು ಆದೇಶಿಸಿದೆ.
ಜ.15 ರಿಂದ ಎಲ್ಲ ಮಲ್ಟಿಫ್ಲೆಕ್ಸ್ ಹಾಗೂ ಲೈವ್ ಸ್ಟ್ರೀಮಿಂಗ್ ಆಯಪ್ಗಳಲ್ಲಿ ಹಾಗೂ ಜ.17 ರಿಂದ ಇತರೆ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಕೋರ್ಟ್ ಆದೇಶಿಸಿದೆ.
ಆಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನ ಭಾಗವಾಗಿ ಚಿತ್ರ ಮೂಡಿಬಂದಿದ್ದು, ಲಕ್ಷ್ಮೀ ಅಗರ್ವಾಲ್ ಪಾತ್ರಕ್ಕೆ ದೀಪಿಕಾ ಬಣ್ಣ ಹಚ್ಚಿದ್ದಾರೆ. ಆದರೆ, ಆಸಿಡ್ ದಾಳಿ ವಿರುದ್ಧ ಹೋರಾಡಲು ಲಕ್ಷ್ಮೀ ಅಗರ್ವಾಲ್ ಪರ ವಕಾಲತ್ತು ವಹಿಸಿದ ವಕೀಲೆ ಅಪರ್ಣಾ ಭಟ್ಗೆ ಚಿತ್ರದಲ್ಲಿ ಯಾವುದೇ ಕ್ರೆಡಿಟ್ ನೀಡದಿರುವುದು ಇದೀಗ ಚಿತ್ರತಂಡವನ್ನು ಸಂಕಷ್ಟಕ್ಕೆ ದೂಡಿದೆ.
ಕ್ರೆಡಿಟ್ ನೀಡುವಂತೆ ಕೋರಿ ವಕೀಲೆ ಅಪರ್ಣಾ ಭಟ್ ಟ್ರಯಲ್ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ನಡೆಸಿದ್ದ ಟ್ರಯಲ್ ಕೋರ್ಟ್ ಕ್ರೆಡಿಟ್ ನೀಡುವಂತೆ ಗುರುವಾರ ಆದೇಶ ನೀಡಿತ್ತು. ಆದರೆ, ಟ್ರಯಲ್ ಕೋರ್ಟ್ ಆದೇಶ ಪ್ರಶ್ನಿಸಿ ಫಾಕ್ಸ್ ಸ್ಟಾರ್ ಸ್ಟುಡಿಯೋ ಹಾಗೂ ನಿರ್ದೇಶಕಿ ಮೇಘನಾ ಗುಲ್ಜಾರ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪ್ರತಿಭಾ ಎಂ.ಸಿಂಗ್, ಜ.15 ರಿಂದ ಚಿತ್ರ ಪ್ರದರ್ಶನಕ್ಕೆ ತಡೆ ನೀಡುವಂತೆ ಆದೇಶಿಸಿದ್ದಾರೆ.
ಹೈಕೋರ್ಟ್ನಲ್ಲಿ ಶುಕ್ರವಾರ ನಡೆದ ವಿಚಾರಣೆ ವೇಳೆ, ಸಮಾಲೋಚನೆ ಹಾಗೂ ದಾಖಲೆ ರೂಪದಲ್ಲಿ ಭಟ್ ಅವರ ಕಾಣಿಕೆಯನ್ನು ಚಿತ್ರದಲ್ಲಿ ನಮೂದಿಸುವಂತೆ ಕೋರಲು ಅವರಿಗೆ ಯಾವುದೇ ಶಾಸನಬದ್ಧ ಹಕ್ಕು ಇಲ್ಲ ಎಂದು ಫಾಕ್ಸ್ ಸ್ಟಾರ್ ಸ್ಟುಡಿಯೋ ಪರ ವಕೀಲ ರಾಜೀವ್ ನಾಯರ್ ವಾದಿಸಿದ್ದರು. ಆದರೆ ಹೈಕೋರ್ಟ್ ವಾದವನ್ನು ತಿರಸ್ಕರಿಸಿ ಅಪರ್ಣಾ ಭಟ್ ಪರ ಆದೇಶ ಹೊರಡಿಸಿದೆ.
Click this button or press Ctrl+G to toggle between Kannada and English