ಮಡಿಕೇರಿ : ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಪ್ರತಿಭಾವಂತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿಪ್ರಿಯ ಕರೆ ನೀಡಿದ್ದಾರೆ.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ನೆಲ್ಯಹುದಿಕೇರಿ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ನಡೆದ ಶೇ.100 ರಷ್ಟು ಫಲಿತಾಂಶ ಬರಲು ಕಾರಣಕರ್ತರಾದ ಪ್ರಾಂಶುಪಾಲರು ಹಾಗೂ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶೈಕ್ಷಣಿಕ ಗುರಿ ಸಾಧನೆಯಿಂದ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯವೆಂದ ಸಿಇಒ ಪರಿಶ್ರಮ ಪಡುವಂತೆ ಸಲಹೆ ನೀಡಿದರು.
ಜಿ.ಪಂ ಸದಸ್ಯೆ ಸುನೀತಾ ಮಂಜುನಾಥ್ ಮಾತನಾಡಿ, ಸರಕಾರಗಳು ಶೈಕ್ಷಣಿಕ ಪ್ರಗತಿಗಾಗಿ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ವಿದ್ಯಾರ್ಥಿಗಳು ಯಶಸ್ಸು ಕಾಣಬೇಕು ಎಂದರು.
ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ಭವಾನಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ರೂಢಿಸಿಕೊಳ್ಳಲು ಪತ್ರಿಕೆ ಹಾಗೂ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಗ್ರಾಮೀಣ ಭಾಗದಲ್ಲಿ ಜನಿಸಿದ ಅದೆಷ್ಟೋ ಹಿರಿಯರು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಕಲಿತು ಸಮಾಜದಲ್ಲಿ ಉನ್ನತ ಹುದ್ದೆಯೊಂದಿಗೆ ಗುರುತಿಸಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಶಿಕ್ಷಣ ಅತ್ಯವಶ್ಯಕವಾಗಿದ್ದು, ಶಿಕ್ಷಣದಿಂದ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವೆಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಅಚ್ಚಯ್ಯ, ಪ್ರಬಾರ ಪ್ರಾಂಶುಪಾಲ ಪಿ.ವಿ.ಲೋಕೇಶ್, ಹಿರಿಯ ಉಪನ್ಯಾಸಕಿ ಜಸ್ಟಿನ್ ಕೋರಿಯಾ, ಉಪನ್ಯಾಸಕರುಗಳಾದ ಭಾಗ್ಯ ಜ್ಯೋತಿ, ವಿಶ್ವನಾಥ್, ಕೆ.ಎಸ್ ಕೃಷ್ಣ, ವಸಂತ್ ಕುಮಾರ್, ಧನಂಜಯ, ತುಳಸಿ, ರವಿಕುಮಾರ್, ದಮಯಂತಿ. ವಿ.ಕೆ.ಇಸ್ಮಾಯಿಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ತಾ. ಪಂ. ಸದಸ್ಯೆ ಸುಹಾದ ಅಶ್ರಫ್, ಗ್ರಾ.ಪಂ ಅಧ್ಯಕ್ಷೆ ಪದ್ಮಾವತಿ, ಶಾಲಾ ಆಡಳಿತ ಮಂಡಳಿ ಸದಸ್ಯ ಟಿ.ಸಿ.ಅಶೋಕ್, ದಲಿತ ಸಂಘರ್ಷ ಸಮಿತಿಯ ಮಡಿಕೇರಿ ನಗರ ಸಂಚಾಲಕ ಸಿದ್ದೇಶ್ವರ, ತಾಲ್ಲೂಕು ಸಂಚಾಲಕ ದೀಪಕ್ ಹಾಗೂ ಕಾಲೇಜು ವಿದ್ಯಾರ್ಥಿಗಳು ಹಾಜರಿದ್ದರು.
Click this button or press Ctrl+G to toggle between Kannada and English