ಯುವ ಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶ : ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ

11:24 AM, Monday, January 13th, 2020
Share
1 Star2 Stars3 Stars4 Stars5 Stars
(5 rating, 1 votes)
Loading...

appacchu

ಮಡಿಕೇರಿ : ಯುವ ಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶ ಆದ್ದರಿಂದ ಯುವ ಜನರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವಂತಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕರೆ ನೀಡಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತ್ರಿನೇತ್ರ ಯುವಕ ಸಂಘ ಹಾಕತ್ತೂರು ಇವರ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ನಡದ ಸ್ವಾಮಿ ವಿವೇಕಾನಂದರ 157 ನೇ ಜನ್ಮ ದಿನಾಚರಣೆಯ ’ರಾಷ್ಟ್ರೀಯ ಯುವ ದಿನಾಚರಣೆ’ ಪ್ರಯುಕ್ತ ರಾಷ್ಟ್ರೀಯ ಯುವ ಸಪ್ತಾಹ, ಯುವ ಸಬಲೀಕರಣ ಕೇಂದ್ರ ಉದ್ಘಾಟನೆ ಮತ್ತು ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

appacchu

ಸ್ವಾಮಿ ವಿವೇಕಾನಂದರು ಅಪಾರ ರಾಷ್ಟ್ರ ಪ್ರೇಮ, ವಿಶ್ವ ಭ್ರಾತೃತ್ವ ಹೊಂದಿದ್ದರು, ಸ್ವಾಮಿ ವಿವೇಕಾನಂದರ ಸಂದೇಶಗಳು ಸಾರ್ವಕಾಲಿಕವಾಗಿದ್ದು, ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡುವಂತಾಗಬೇಕು ಎಂದು ಶಾಸಕರಾದ ಅಪ್ಪಚ್ಚು ರಂಜನ್ ಅವರು ತಿಳಿಸಿದರು.

ಸ್ವಾಮಿ ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿ ಮಾಡಿದ ಭಾಷಣ ರಾಷ್ಟ್ರದ ಸಂಸ್ಕೃತಿಯನ್ನು ಎತ್ತಿಹಿಡಿದಿತ್ತು, ಇದರಿಂದಾಗಿ ಭಾರತ ದೇಶದ ಶ್ರೀಮಂತ ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳು ಇಡೀ ವಿಶ್ವಕ್ಕೆ ತಿಳಿಯುವಂತಾಯಿತು ಎಂದರು.

ಶಿಕ್ಷಕರು ತರಗತಿಗಳಲ್ಲಿ ಹಲವು ಉಪಯುಕ್ತ ಮಾಹಿತಿ ನೀಡಿ ಯುವ ಜನರನ್ನು ಸತ್ಪ್ರಜೆಯ ಮೂರ್ತಿಗಳನ್ನಾಗಿ ನಿರ್ಮಿಸುತ್ತಾರೆ. ಆದರೆ ವಿವೇಕಾನಂದರು ನಿಮಗೆ ನೀವೇ ಶಿಲ್ಪಿಗಳು ಎಂದಿದ್ದಾರೆ. ಈ ನಿಟ್ಟಿನಲ್ಲಿ ಯುವ ಜನರು ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆರ ಕಿವಿ ಮಾತು ಹೇಳಿದರು.

appacchu

ಯಾವುದೇ ಸಂಧರ್ಭದಲ್ಲಿಯೂ ದುರ್ಬಲರಾಗಬೇಡಿ. ಕಷ್ಟ ಬಂದಾಗ ಹೇಗೆ ಎದುರಿಸಬೇಕು ಎಂಬುದನ್ನು ಚಿಂತನೆ ಮಾಡಿ, ಆಗ ನಿಮಗೆ ಉತ್ತರ ಮತ್ತು ಯಶಸ್ಸು ಎರಡೂ ದೊರೆಯುತ್ತದೆ ಎಂದರು.

ಯುವ ಜನರಲ್ಲಿ ಸದಾ ಧನಾತ್ಮಕ ಚಿಂತನೆ ಇರಬೇಕು. ಆಶಾಭಾವ ಇದ್ದಲ್ಲಿ ಜೀವನದಲ್ಲಿ ಗುರಿ ತಲುಪಬಹುದು. ನಿಸ್ವಾರ್ಥ ಸೇವೆ ಸಲ್ಲಿಸಿ. ದುಡಿದದ್ದರಲ್ಲಿ ಒಂದಷ್ಟನ್ನು ಸಮಾಜಕ್ಕಾಗಿ, ಜನ ಸೇವೆಗಾಗಿ ಬಳಸಿ ಎಂದು ಅವರು ಸಲಹೆ ಮಾಡಿದರು.

ಸ್ವಾಮಿ ವಿವೇಕಾನಂದರು ’ಏಳಿ, ಎದ್ದೇಳಿ, ಗುರಿ ತಲುಪುವ ತನಕ ನಿಲ್ಲದಿರಿ’ ಎಂಬ ಮಾತಿನ ಸಾರವನ್ನು ಅರಿತುಕೊಳ್ಳಿ. ಯುವ ಜನರು ತಮ್ಮ ಜೀವನದ ಗುರಿ ತಲುಪುವವರೆಗೂ ಶತತ ಪ್ರಯತ್ನ ಮತ್ತು ಪರಿಶ್ರಮ ಇರಬೇಕು ಎಂದರು.

ಯುವ ಜನರು ಬದುಕಿನಲ್ಲಿ ಸಮಯಕ್ಕೆ ಹೆಚ್ಚಿನ ಮಹತ್ವ ನೀಡಿ, ಸಮಯ ಮತ್ತು ಸಮುದ್ರದ ಅಲೆ ಎಂದೂ ಯಾರಿಗೂ ಕಾಯುವುದಿಲ್ಲ. ಸಮಯದ ಮೌಲ್ಯವನ್ನು ಅರಿತು ಜೀವನದಲ್ಲಿ ಮುಂದೆ ಸಾಗಬೇಕು ಎಂದು ನುಡಿದರು.

appacchu

ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ. ಆರೋಗ್ಯವೇ ಭಾಗ್ಯ. ಪ್ರತಿದಿನ ಯೋಗ ಅಭ್ಯಾಸ ಮಾಡಿಕೊಳ್ಳಿ. ಯೋಬಾಭ್ಯಾಸ ಮಾಡುವುದರಿಂದ ನಿಮ್ಮ ಚಿಂತನೆ ಮತ್ತು ಏಕಾಗ್ರತೆ ಹೆಚ್ಚುತ್ತದೆ ಎಂದು ತಿಳಿಸಿದರು.

ಬೆಂಗಳೂರಿನ ರಾಮಕೃಷ್ಣ ಮಠದ ಸ್ವಾಮೀಜಿ ಮೇದಾನಂದರು ಮಾತನಾಡಿ ರವೀಂದ್ರನಾಥ ಠಾಕೂರ್ ಅವರು ವಿದೇಶಿ ಸಾಹಿತಿ ರೋಮೈನ್ ರಾಲ್ಡ್ ಅವರಿಗೆ ತಿಳಿಸಿದಂತೆ ಭಾರತವನ್ನು ಅಧ್ಯಯನ ಮಾಡಬೇಕೆಂದರೆ, ದೇಶ ಸುತ್ತುವ ಅಗತ್ಯವಿಲ್ಲ. ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಅಧ್ಯಯನ ಮಾಡಿದರೆ ಸಾಕು ಎಂದಿದ್ದಾರೆ. ಅಂತಹ ಮಹಾನ್ ಚೇತನ ಶಕ್ತಿ ಸ್ವಾಮಿ ವಿವೇಕಾನಂದರು ಎಂದು ತಿಳಿಸಿದರು.

ಶಕ್ತಿಯೇ ಜೀವನ, ದೌರ್ಬಲ್ಯವೇ ಮರಣ ಎಂಬುದನ್ನು ಸಿಂಹ ಮತ್ತು ಕುರಿಯ ಕಥೆಯೊಂದಿಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು. ಜೀವನದಲ್ಲಿ ಹೋರಾಟವನ್ನು ಎಂದೂ ಬಿಡಬೇಡಿ. ಹೋರಾಟದ ಮನೋಭಾವನೆಯಿಂದ ಅನೇಕ ಲಾಭಗಳನ್ನು ನೀವು ಪಡೆಯಬಹುದು ಎಂದು ನುಡಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಅಣ್ಣಾ ಹಜಾರೆ ವಿವೇಕಾನಂದರ ಜೀವನಾದರ್ಶಗಳನ್ನು ಪಾಲಿಸಿ ಚರಿತ್ರೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು.

ವಿಶ್ವವನ್ನು ಗೆಲ್ಲಲು ಖಡ್ಗ-ಲೇಖನಿಗಳು ಬೇಕಿಲ್ಲ. ಪ್ತೀತಿ ವಿಶ್ವಾಸದಿಂದಲೇ ಪ್ರಪಂಚವನ್ನು ಗೆಲ್ಲಬಹುದು. ಯುವ ಜನರು ಮಾದಕ ವ್ಯಸನಿಗಳಾಗಬಾರದು. ವಿವೇಕಾನಂದರ ಚಿಂತನೆಗಳು ಆದರ್ಶ ನಿಮ್ಮಲ್ಲಿ ತುಂಬಿರಲಿ. ೬೦ ಕೋಟಿ ಜನಸಂಖ್ಯೆಯ ಯುವಕರಿಂದ ಸಧೃಢ ದೇಶ ನಿರ್ಮಾಣ ಸಾಧ್ಯ ಎಂದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಜವರಪ್ಪ ಅವರು ಮಾತನಾಡಿ, ಸ್ವಾಮಿ ವಿವೇಕಾನಂದರು ಬಹು ಭಾಷೆಗಳಲ್ಲಿ ಮಾತನಾಡಬಲ್ಲವರಾಗಿದ್ದರು. ಯುವ ಜನರೂ ಸಹ ಹೆಚ್ಚು ಭಾಷೆಗಳನ್ನು ಕಲಿಯಿರಿ ಎಂದರು.

ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ತಹಶೀಲ್ದಾರರಾದ ಪಿ.ಎಸ್ ಮಹೇಶ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷರಾದ ಸುಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪ್ರಾದ್ಯಾಪಕರಾದ ದಯಾನಂದ ನಿರೂಪಿಸಿದರು. ವಿದ್ಯಾರ್ಥಿ ಶಿವ ಪ್ರಾರ್ಥಿಸಿದರು, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವೈ ಚಿತ್ರಾ ಸ್ವಾಗತಿಸಿದರು. ಕೆ.ಪಿ.ಕುಸುಮ ವಂದಿಸಿದರು.

 

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English