ಮಡಿಕೇರಿ : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಈ ದೇಶದಲ್ಲಿರುವ 130 ಕೋಟಿ ಜನತೆಯ ಪೌರತ್ವವನ್ನು ಉಳಿಸುವುದಕ್ಕಾಗಿ ಜಾರಿಗೆ ತರಲಾಗುತ್ತಿದೆಯೇ ಹೊರತು ಯಾವುದೇ ಧರ್ಮದವರ ಪೌರತ್ವವನ್ನು ಕಸಿದುಕೊಳ್ಳುವುದಕ್ಕಲ್ಲ ಎಂದು ಶಾಸಕ ಹಾಗೂ ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಸ್ಪಷ್ಟಪಡಿಸಿದ್ದಾರೆ.
ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ನಗರದ ಬಾಲಭವನದಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಬುದ್ಧರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪೌರತ್ವ ಕಾಯ್ದೆ ಸಂವಿಧಾನದ ಆಶಯಗಳಿಗೆ ವಿರುದ್ಧವಾದುದು ಎಂದು ಕಾಂಗ್ರೆಸ್ ಹಾಗೂ ಎಡಪಕ್ಷಗಳು ಆರೋಪಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಒಂದು ವೇಳೆ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದರೆ ಸರ್ವೋಚ್ಛ ನ್ಯಾಯಾಲಯ ಈ ಕಾಯ್ದೆ ಜಾರಿಗೆ ತಡೆಯಾಜ್ಞೆ ನೀಡಬೇಕಿತ್ತು. ಆದರೆ ನ್ಯಾಯಾಲಯ ಅದನ್ನು ಮಾಡಿಲ್ಲ, ಅಷ್ಟಕ್ಕೂ ಕೇಂದ್ರ ಸರಕಾರ ಏಕಾಏಕಿ ಈ ಕಾಯ್ದೆಯನ್ನು ಜಾರಿಗೊಳಿಸುತ್ತಿಲ್ಲ. ಈ ಹಿಂದೆ ದೇಶವನ್ನು ಆಳಿದ ಕಾಂಗ್ರೆಸ್ ನಾಯಕರು ಜಾರಿಗೆ ತಂದಿರುವ ಕಾಯ್ದೆಗೆ ತಿದ್ದುಪಡಿಯನ್ನಷ್ಟೇ ಈಗಿನ ಸರಕಾರ ಮಾಡಿದೆ. ಪೌರತ್ವ ಕಾಯ್ದೆಯನ್ನು ಜಾರಿಗೆ ತರಲು ಸಂವಿಧಾನದ ೧೧ನೇ ಪರಿಚ್ಛೇದಲ್ಲಿ ಕೇಂದ್ರ ಸರಕಾರಕ್ಕೆ ಅವಕಾಶವಿದೆ. ಅದರ ಅನ್ವಯ ಸಂಸತ್‌ನಲ್ಲಿ ಸುದೀರ್ಘ ಚರ್ಚೆಯಾಗಿ ಅನುಮೋದನೆಗೊಂಡ ಬಳಿಕವೇ ಅದನ್ನು ಜಾರಿಗೆ ತರಲಾಗಿದೆ ಎಂದೂ ಅವರು ಹೇಳಿದರು.
ಮುಸ್ಲಿಮರನ್ನು ಎತ್ತಿಕಟ್ಟಲಾಗುತ್ತಿದೆ
ಸಂಸತ್‌ನಲ್ಲಿ ಕಾಂಗ್ರೆಸ್ ಕೂಡ ಕಾಯ್ದೆಗೆ ಅನುಮೋದನೆ ನೀಡಿದೆ. ಅಲ್ಲದೆ ಕಾಯ್ದೆಗೆ ರಾಷ್ಟ್ರಪತಿಗಳ ಅಂಕಿತವಾದ ಬಳಿಕವೂ ಸುಮಾರು 20ದಿನಗಳವರೆಗೆ ಮೌನವಾಗಿದ್ದ ಕಾಂಗ್ರೆಸ್ ಏಕಾಏಕಿ ಕಾಯ್ದೆಯ ವಿರುದ್ಧ ಅಮಾಯಕ ಮುಸ್ಲಿಮರನ್ನು ಎತ್ತಿಕಟ್ಟುವ ಪ್ರಯತ್ನ ಮಾಡಿದೆ. ಇದನ್ನು ಗಮನಿಸಿದರೆ ಕಾಂಗ್ರೆಸ್‌ಗೆ ದೇಶದ ಜನತೆಯ ರಕ್ಷಣೆಗಿಂತ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶದ ಮುಸಲ್ಮಾನರ ಹಿತವೇ ಮುಖ್ಯವಾದಂತಿದೆ ಎಂದು ಬೋಪಯ್ಯ ಟೀಕಿಸಿದರು.
ಪೌರತ್ವ ಕಾಯ್ದೆ ಈ ದೇಶದಲ್ಲಿ 1955ರಿಂದಲೇ ಜಾರಿಯಲ್ಲಿದೆ. ನೆಹರೂರವರು ಪ್ರಧಾನಿಯಾಗಿದ್ದ ಸಂದರ್ಭ ಜಾರಿಗೆ ತಂದ ಈ ಕಾಯ್ದೆಗೆ ಆ ನಂತರ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಸರಕಾರಗಳೇ ನಾಲ್ಕು ಬಾರಿ ತಿದ್ದುಪಡಿಯನ್ನು ಮಾಡಿವೆ. ಅದೇ ರೀತಿ ಇಂದಿನ ಪರಿಸ್ಥಿತಿಗೆ ಅನುಗುಣವಾಗಿ ಈಗಿನ ಕೇಂದ್ರ ಸರಕಾರ ಸೂಕ್ತ ತಿದ್ದುಪಡಿಗಳನ್ನು ಮಾಡಿದೆ ಎಂದು ಅವರು ಹೇಳಿದರು.
ಧರ್ಮದ ಆಧಾರದಲ್ಲಿ ಭಾರತ ವಿಭಜನೆಗೊಂಡ ಬಳಿಕ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಬೌದ್ಧ, ಜೈನ, ಸಿಖ್, ಪಾರ್ಸಿ, ಕ್ರೈಸ್ತ ಧರ್ಮದವರು ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ವಲಸೆ ಬಂದಿದ್ದಲ್ಲಿ ಅವರಿಗೆ ಈ ದೇಶದ ಪೌರತ್ವ ನೀಡುವ ದೃಷ್ಟಿಯಿಂದ ಈ ಕಾಯ್ದೆಗೆ ತಿದ್ದುಪಡಿ ತರಲಾಗಿದೆಯೇ ಹೊರತು ಭಾರತದಲ್ಲಿರುವ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವುದಿಲ್ಲ ಎಂಬ ಒಂದಂಶ ಕೂಡ ಈ ಕಾಯ್ದೆಯಲ್ಲಿಲ್ಲ. ಅಲ್ಲದೆ ಇತರ ದೇಶಗಳಲ್ಲಿರುವ ಮುಸಲ್ಮಾನರಿಗೆ ಕೂಡಾ ಭಾರತದ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಆದರೆ ಅವರಿಗೆ ಪೌರತ್ವ ನೀಡುವ ಸಂದರ್ಭದಲ್ಲಿ ಹಲವಾರು ಮಾನದಂಡಗಳು ಪರಿಗಣಿಸಲ್ಪಡುತ್ತದೆ. ಈ ವಿಚಾರ ತಿಳಿದಿದ್ದರೂ, ಅಲ್ಪಸಂಖ್ಯಾತರ ಹಾದಿ ತಪ್ಪಿಸಿ ಬಿಜೆಪಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಎತ್ತಿಕಟ್ಟುವ ಕಾರ್ಯದಲ್ಲಿ ಕಾಂಗ್ರೆಸ್ ಹಾಗೂ ಎಡಪಂಥಿಯರು ಮಾಡುತ್ತಿದ್ದಾರೆ ಎಂದು ಬೋಪಯ್ಯ ಅವರು ಬೇಸರ ವ್ಯಕ್ತಪಡಿಸಿದರು.
ಬರಬೇಡಿ ಬ್ಯಾನರ್ ತೆಗೆಯಿರಿ
ಜಿಲ್ಲೆಯ ಕೆಲವೆಡೆಗಳಲ್ಲಿ ’ಪೌರತ್ವ ಕಾಯ್ದೆಯ ಬಗ್ಗೆ ನಮಗೆ ತಿಳಿದಿದೆ. ಅದರ ಬಗ್ಗೆ ತಿಳಿಸಲು ಬರಬೇಡಿ’ ಎಂಬ ಒಕ್ಕಣೆ ಇರುವ ಸ್ಟಿಕ್ಕರ್‌ಗಳು, ಬ್ಯಾನರ್‌ಗಳನ್ನು ಪ್ರದರ್ಶಿಸಲಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ವೋಚ್ಛವಾಗಿರುವ ಸಂಸತ್‌ನಲ್ಲಿ ಅಂಗೀಕರಿಸಲ್ಪಟ್ಟು ರಾಷ್ಟ್ರಪತಿಗಳಿಂದ ಅಂಕಿತವಾದ ಕಾನೂನನ್ನು ಪಾಲಿಸುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಒಂದು ವೇಳೆ ಆ ಕಾನೂನನ್ನು ಉಲ್ಲಂಘಿಸಿದರೆ ಅದು ಅಪರಾಧವಾಗುತ್ತದೆ. ಆದರೆ ಕಾಂಗ್ರೆಸ್ಸಿಗರ ಪ್ರಚೋದನೆಯಿಂದ ಕೆಲವು ಮುಸ್ಲಿಂ ಬಂಧುಗಳು ಮಾಹಿತಿ ಕೊರತೆಯಿಂದ ಅಂತಹ ಸ್ಟಿಕ್ಕರ್ ಹಾಗೂ ಬ್ಯಾನರ್‌ಗಳನ್ನು ಅಳವಡಿಸಿದ್ದರೆ ಅದನ್ನೂ ಈಗಿನಿಂದಲೇ ತೆಗೆಯುವುದು ಒಳಿತು ಎಂದು ಬೋಪಯ್ಯ ಸಲಹೆ ನೀಡಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರಾಸ್ತಾವಿಕ ನುಡಿಯಾಡಿದ ರಾಜ್ಯ ಬಿಜೆಪಿ ಕಾರ್ಯದರ್ಶಿ ಎ.ಕೆ.ಮನುಮುತ್ತಪ್ಪ ಅವರು, ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವ ಕೇಂದ್ರದ ನಿರ್ಧಾರ ಐತಿಹಾಸಿಕ ನಿರ್ಣಯವಾಗಿದೆ. ಸಂಸತ್ತಿನಲ್ಲಿ ಸುದೀರ್ಘ ಚರ್ಚೆಯಾಗಿ ಅನುಮೋದನೆಗೊಂಡಿರುವ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಹಾಗೂ ಇತರ ಪಕ್ಷಗಳು ಇದೀಗ ಬೀದಿಗಿಳಿದು ಹೋರಾಟ ನಡೆಸುತ್ತಿರುವುದನ್ನು ಗಮನಿಸಿದರೆ, ಆ ಪಕ್ಷಗಳ ನಾಯಕರಿಗೆ ಮಾಹಿತಿಯ ಕೊರತೆ ಇರುವುದು ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಕಾಯ್ದೆಯ ಕುರಿತು ಮಾತನಾಡಿದ ಹಿರಿಯ ನಾಗರಿಕ ಜಿ.ಟಿ.ರಾಘವೇಂದ್ರ ಅವರು, ದೇಶದಲ್ಲಿ ವಿರೋಧ ಪಕ್ಷಗಳಿಗೆ ಕೇಂದ್ರ ಸರಕಾರವನ್ನು ವಿರೋಧಿಸಲು ಯಾವುದೇ ವಿಷಯಗಳಿರಲಿಲ್ಲ. ಇದೀಗ ಕಾಯ್ದೆಯಲ್ಲಿ ಯಾವುದೇ ಲೋಪಗಳಿಲ್ಲದಿದ್ದರೂ, ಅದರ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಸರಕಾರಕ್ಕೆ ಕೆಟ್ಟ ಹೆಸರು ತರುವ ಪ್ರಯತ್ನವನ್ನು ಅವು ಮಾಡುತ್ತಿವೆ ಎಂದರಲ್ಲದೆ, ದೇಶದ ನಾಗರಿಕರು ತಮೋಗುಣದಿಂದ ಸತ್ವಗುಣಕ್ಕೆ ಬರಬೇಕಾದ ಕಾಲ ಸನ್ನಿಹಿತವಾಗಿದೆ. ಕೇಂದ್ರ ಸರಕಾರದ ಕೆಲವು ದಿಟ್ಟ ಕ್ರಮಗಳಿಗೆ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದು ಹೇಳಿದರು.
ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಮೊಂತಿ ಗಣೇಶ್, ಪತ್ರಕರ್ತ ಚಿ.ನಾ.ಸೋಮೇಶ್, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ಕಾಳಪ್ಪ, ಹಿರಿಯ ಮುಖಂಡ ಎಂ.ಬಿ.ದೇವಯ್ಯ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಪ್ರಾಧ್ಯಾಪಕ ಶ್ರೀಧರ ಹೆಗಡೆ ಮಾತನಾಡಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್ ಅವರು ಅಧ್ಯಕ್ಷತೆ ವಹಿಸಿ ಪೌರತ್ವ ಕಾಯ್ದೆಯನ್ನು ಸಮರ್ಥಿಸಿಕೊಂಡರು. ಪಕ್ಷದ ಪ್ರಮುಖ ಬಿ.ಕೆ.ಅರುಣ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರೆ, ಹೇಮಲತಾ ಪ್ರಾರ್ಥಿಸಿದರು. ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಅನಿತಾ ಪೂವಯ್ಯ ಸ್ವಾಗತಿಸಿ, ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ವಂದಿಸಿದರು.
Click this button or press Ctrl+G to toggle between Kannada and English